

ಹೆಣ್ಣಿನ ಸೌಂದರ್ಯದ ಗಣಿ ‘ಸೀರೆ’. ನಿರಾಭರಣ ಸುಂದರಿಯರ ಅಂದವನ್ನೂ ವೃದ್ಧಿಸುವ ಶಕ್ತಿ ಈ ಸೀರೆಗಿದೆ. ನಮ್ಮ ದೇಶದ ಸಾಂಪ್ರದಾಯಿಕ ಉಡುಗೆಯಾದರೂ ಎಲ್ಲ ಕಾಲಕ್ಕೂ ತನ್ನದೇ ಆದ ವಿಶಿಷ್ಟ ಛಾಪು ಕಾಪಾಡಿಕೊಳ್ಳುತ್ತಾ ಬಂದಿದೆ. ಥಳಕುಬಳುಕಿನ ಲೋಕದಲ್ಲೂ ಫ್ಯಾಶನ್ ಪ್ರಿಯರ ಮನಸೆಳೆಯುತ್ತಿದೆ. ಸೀರೆ ತೊಡದ ನಾರಿ, ಸೀರೆ ಇಲ್ಲದ ಮನೆಗಳನ್ನ ಹುಡುಕುವುದು ದುಸ್ಸಾಹಸವೇ ಸರಿ. ಅಪರೂಪಕ್ಕೆ ಸೀರೆ ತೊಡುವವರ ಬಳಿಯೂ ಸಾಕಷ್ಟು ವೆರೈಟಿಯ ಸೀರೆಗಳ ರಾಶಿ ಇದ್ದೇ ಇರುತ್ತೆ. ಇನ್ನು ಹೆಂಗೆಳೆಯರ ಫೇವರಿಟ್ ಡ್ರೆಸ್ನ ಜಾಗದಲ್ಲೂ ಸೀರೆಯದ್ದೇ ಅಗ್ರಸ್ಥಾನ!
| ಅರುಣ ಎಂ.ಜಿ.
ಭಾರತೀಯ ನಾರಿ ಅಂದಾಕ್ಷಣ ಕಣ್ಮುಂದೆ ಬರುವ ಚಿತ್ರ ಸೀರೆಯುಟ್ಟ ಸ್ತ್ರೀ. ಹಿಂದು ದೇವತೆಗಳ ಉಡುಪು ಕೂಡ ಸೀರೆಯೇ. ನಮ್ಮ ಸಂಸ್ಕೃತಿಯ ಜೀವಾಳವೇ ಸೀರೆ. ಬಹುತೇಕರಿಗೆ ಅಮ್ಮ.. ಅಜ್ಜಿ.. ಅಂದಾಕ್ಷಣ ಸೀರೆಯುಟ್ಟ ಮುಖ ನೆನಪಾಗುತ್ತೆ. ಅಷ್ಟರಮಟ್ಟಿಗೆ ನಮ್ಮ ಬದುಕಿನಲ್ಲಿ ಈ ಸೀರೆ ಹಾಸುಹೊಕ್ಕಾಗಿದೆ. ತಾನು ಉಡುವ ಮೊದಲ ಸೀರೆ ತಾಯಿ ಕೊಡಿಸಿದ್ದೇ ಆಗಬೇಕು ಇಲ್ಲವೇ ಗಂಡ ಇಷ್ಟಪಟ್ಟು ತಂದದ್ದೇ ಆಗಬೇಕು ಎಂಬ ಲೆಕ್ಕಾಚಾರ ಅದೆಷೊ್ಟೕ ಹೆಣ್ಣುಮಕ್ಕಳ ಮನದಲ್ಲಿ ಅಡಗಿರುತ್ತೆ. ಭಾವನಾತ್ಮಕ ನೆಲೆಗಟ್ಟಿನಲ್ಲೂ ಸೀರೆ ಆಯ್ಕೆ ಪ್ರಕ್ರಿಯೆ ನಡೆಯುತ್ತೆ. ಅಷ್ಟೆ ಅಲ್ಲ, ಬಹುತೇಕ ಯುವಕ/ಯುವತಿಯರು ತಮ್ಮ ಮೊದಲ ತಿಂಗಳ ಸಂಬಳದಲ್ಲಿ ಅಮ್ಮನಿಗೊಂದು ಚಂದದ ಸೀರೆ ಕೊಡಿಸುವುದು ರೂಢಿ.
ಕಾಟನ್ ಸೀರೆ
ಕಾಟನ್ ಸೀರೆ ಅಜ್ಜಿಗೆಷ್ಟೆ ಸೀಮಿತ ಎಂಬ ಮಾತು ಈಗಿಲ್ಲ. ಎಲ್ಲ ವಯೋಮಾನದವರಿಗೂ ಇಷ್ಟವಾಗುವ ವಿಭಿನ್ನ ವಿನ್ಯಾಸದಲ್ಲಿ ಕಾಟನ್ ಸೀರೆಗಳು ಮೂಡಿಬಂದಿವೆ. ಮನೆಯಲ್ಲಿದ್ದಾಗ, ಆಫೀಸ್ಗೆ, ಕಾಲೇಜಿಗೆ ಹೋಗುವಾಗ ಸಿಂಪಲ್ ಕಾಟನ್ ಸೀರೆ ಸಾಕು. ಮದುವೆ ಮತ್ತಿತರ ಶುಭ ಸಮಾರಂಭಕ್ಕೆ ಗ್ರಾ್ಯಂಡ್ಲುಕ್ವುಳ್ಳ ಕಾಟನ್ ಸೀರೆಗೆ ಆದ್ಯತೆ ಹೆಚ್ಚು. ಇನ್ನು ಬೇಸಿಗೆ ಶುರುವಾಗುತ್ತಿದ್ದಂತೆ ಕಾಟನ್ ಸೀರೆಗೆ ಎಲ್ಲಿಲ್ಲದ ಬೇಡಿಕೆ. ತಾಂತ್, ಒರಿಸ್ಸಾದ ಸಂಬಾಲ್ ಪುರಿ, ಬಾರ್ಡರ್ನಲ್ಲಿ ದೇಗುಲಗಳ ಚಿತ್ರಣವುಳ್ಳ ಕೋಟ್ಕಿ ಕಾಟನ್ ಸೀರೆಗೆ ಡಿಮಾಂಡ್ ಇದೆ. ಈ ಎರಡೂ ಸೀರೆಗಳು ಸೆರಗಿನ ವಿನ್ಯಾಸದಿಂದಲೇ ಹೆಚ್ಚು ಆಕರ್ಷಕ. ಮಡಚಿದರೆ ಕರ್ಚಿಫ್ನಂತೆ ಕಾಣುವ ಕಲ್ಕತ್ತಾ ಸೀರೆ, ತುಸು ಹೆಚ್ಚು ತೆಳುವಾದ ಚಾಂದೆರಿ ಸೀರೆ, ಗ್ರಾ್ಯಂಡ್ ಲುಕ್ ಕೊಡುವ ಥ್ರೆಡ್ ವರ್ಕ್ವುಳ್ಳ, ಎಂಬ್ರಾಯಿಡರಿ ಡಿಸೈನ್ವುಳ್ಳ ಲಕ್ನೋವಿ ಕಾಟನ್ ಸೀರೆ.. ಹೀಗೆ ತರಹೇವಾರಿ ಸೀರೆಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಸೂಪರ್ ನೆಟ್ ಕಾಟನ್ ಸೀರೆ ಫ್ಯಾಶನಬಲ್ ಆಗಿದ್ದು, ಯುವತಿಯರ ಮನ ಗೆದ್ದಿದೆ. ಇದೇ ಸಾಲಿಗೆ ಖಾದಿ ಸೀರೆಯೂ ಸೇರಿದೆ.