ಅಂತಃಕರಣಕ್ಕೆ ಒಗ್ಗುವ ಪವಿತ್ರ ವಾತಾವರಣ ಅತಿ ಮುಖ್ಯ

-680a72e922655
Published on
ಸಾಮಾನ್ಯವಾಗಿ ಭಗವದ್ ಕೃಪೆಯ ಮಹಾನ್ ವಾತಾವರಣ ಬೇಕು ಎನ್ನುವ ಕೋಟ್ಯಂತರ ಮಂದಿಗೆ ಅಂತಹ ವಾತಾವರಣ ದೊರಕಿತು ಎಂದಾಕ್ಷಣ, ಆ ಸ್ಥಳದಿಂದ ಹೇಗೆ ಹೊರಡುವುದು? ಎಂಬುದೇ ಚಿಂತೆ. ಕಾರಣ, ಅವರವರ ಮನಸ್ಸಿನ ವಾತಾವರಣ.

ಉದಾಹರಣೆಗೆ, ತಿರುಪತಿ, ಶ್ರೀಶೈಲ, ಶೃಂಗೇರಿ, ಹೊರನಾಡು ಮುಂತಾದ ಪುಣ್ಯ ಕ್ಷೇತ್ರಗಳಿಗೆ ಭೇಟಿ ನೀಡಿದಾಗ ‘ಅಬ್ಬಾ! ಎಂತಹ ಪವಿತ್ರ ವಾತಾವರಣ, ಅಲ್ಲಿಯ ದಿವ್ಯತೆ, ಪಾವಿತ್ರ್ಯ ಇತ್ಯಾದಿಗಳನ್ನು ಹೊಗಳುತ್ತಾ ಪೂಜೆ, ಅರ್ಚನೆ, ಸೇವೆಗಳನ್ನು ನಡೆಸುವಾಗಂತೂ ಮುಕ್ತಿಯ ಪಥದಲ್ಲಿಯೇ ಇರುವಂತೆ ವರ್ತಿಸುತ್ತಾರೆ. ಆದರೆ, ಇದ್ದಕ್ಕಿದ್ದಂತೆ ಅವರವರ ಮನಸ್ಸಿನಲ್ಲಿ ಪ್ರಾಪಂಚಿಕತೆಯ ನೆನಪಾದರೆ ಸಾಕು! ತಕ್ಷಣ ಆ ಕ್ಷೇತ್ರವನ್ನು ತೊರೆದು ತಮ್ಮ ತಮ್ಮ ಸ್ವಕ್ಷೇತ್ರಕ್ಕೆ ಧಾವಿಸಿಬಿಡುತ್ತಾರೆ.

ಆದಿ ಶಂಕರಾಚಾರ್ಯರು ತಿಳಿಸಿದಂತೆ ‘ಸಜ್ಜನರ ಸಂಪರ್ಕದಲ್ಲಿದ್ದರೆ ಪ್ರಾಪಂಚಿಕ ವಿಷಯಗಳ ಚಿಂತೆ ದೂರವಾಗುತ್ತದೆ. ಆ ಚಿಂತೆಗಳು ದೂರವಾದಲ್ಲಿ ಮೋಹವೂ ಮಾಯವಾಗುತ್ತದೆ. ಶಾಶ್ವತವಾದ ಸತ್ಯದ ಅರಿವು, ಜ್ಞಾನ ಉಂಟಾಗುತ್ತದೆ. ಅಂತಹ ಜ್ಞಾನ ಉಂಟಾದಲ್ಲಿ ಜೀವನ್ಮುಕ್ತಿಯೇ ಪ್ರಾಪ್ತಿಯಾಯಿತೆಂದು ಅರಿಯಬೇಕು’. ಅಂದರೆ ನಮ್ಮ ನಮ್ಮ ಅಂತಃಕರಣಕ್ಕೆ ಒಗ್ಗುವಂತಹ ವಾತಾವರಣ ಅತಿ ಮುಖ್ಯ. ನಿಜವಾದ ಪವಿತ್ರ ವಾತಾವರಣವು ಶ್ರದ್ಧಾ ಭಕ್ತಿಯನ್ನು ದ್ವಿಗುಣಗೊಳಿಸುತ್ತದೆ. ಭಗವಾನ್ ಶ್ರೀರಾಮಕೃಷ್ಣ ಪರಮಹಂಸರು ಒಂದು ಕಥೆಯ ಮೂಲಕ ಇದನ್ನು ಹೇಳುತ್ತಾರೆ.

ಅದೊಂದು ಗ್ರಾಮ, ಅಲ್ಲಿಯ ಬಹುತೇಕರು ಬೆಸ್ತರು. ದೂರದ ಗ್ರಾಮದಲ್ಲಿ ನಡೆಯುವ ಸಂತೆಯಲ್ಲಿ ತಾವು ಹಿಡಿದ ಮೀನನ್ನು ಮಾರಿ ಮರಳಿ ಸ್ವಗ್ರಾಮಕ್ಕೆ ಬರುತ್ತಿದ್ದರು. ವಾಪಸ್ಸು ಬರುವಾಗ ಆಲಿಕಲ್ಲಿನ ಮಳೆಗೆ ಸಿಲುಕಿದರು. ಮಾರ್ಗಮಧ್ಯೆ ಈ ಮಹಿಳೆಯರು ತಮ್ಮ ಸ್ನೇಹಿತೆಯ ಮನೆಗೆ ತಂಗಲು ಹೋದರು.

ಹೂವಾಡಗಿತ್ತಿಯಾದ ಆ ಸ್ನೇಹಿತೆ ಇವರನ್ನು ಬರಮಾಡಿಕೊಂಡಳು. ಮರುದಿನ ವಿಲೇವಾರಿ ಮಾಡಲು ಜೋಡಿಸಿದ್ದ ಥರಾವರಿ ಪುಷ್ಪಗಳನ್ನು ಇಟ್ಟಿದ್ದ ಕೊಠಡಿಯಲ್ಲೇ ಇವರು ಮಲಗಲು ವ್ಯವಸ್ಥೆ ಮಾಡಿದಳು. ಮಲ್ಲಿಗೆ, ಜಾಜಿ, ಸಂಪಿಗೆ ಇತ್ಯಾದಿ ಪುಷ್ಪಗಳ ಸುವಾಸನೆಯುಳ್ಳ ಕೊಠಡಿಯಲ್ಲಿ ಇವರೇನೋ ಮಲಗಿದರು. ಆದರೆ ಎಷ್ಟು ಹೊತ್ತಾದರೂ ನಿದ್ದೆ ಬರಲಿಲ್ಲ. ಕಾರಣವೇನು ಎಂದು ಯೋಚಿಸಿದ ಒಬ್ಬಾಕೆ ಒಂದು ಉಪಾಯ ಹೂಡಿದಳು. ತನ್ನ ಬಳಿಯಿದ್ದ ಒಣ ಖಾಲಿ ಮೀನಿನ ಬುಟ್ಟಿಗೆ ಸ್ವಲ್ಪ ನೀರನ್ನು ಚಿಮುಕಿಸಿ ತಲೆಹತ್ತಿರ ಇಟ್ಟುಕೊಂಡಳು. ತಕ್ಷಣ ಆಕೆ ಸೇರಿ ಎಲ್ಲರೂ ಗೊರಕೆ ಹೊಡೆಯಲು ಶುರು ಮಾಡಿದರು!.

ಈ ಉದಾಹರಣೆಯ ಮೂಲಕ ಪರಮಹಂಸರು, ಪ್ರಾಪಂಚಿಕ, ಕ್ಷಣಿಕ, ಸುಖ-ಭೋಗಗಳ ಸುಳಿಗೆ ಸಿಲುಕಿದವರಿಗೆ ದೈವತ್ವದ ಪವಿತ್ರ ಮಂದಾರಕ್ಕೆ ಮನ ಒಗ್ಗುವುದಿಲ್ಲ ಎಂದು ವಿವರಿಸುತ್ತಾರೆ.

ಅವರೇ ಹೇಳಿದ ಇನ್ನೊಂದು ಉದಾಹರಣೆ ಹೀಗಿದೆ: ಒಬ್ಬ ಸಾಧಕನ ಬಳಿ ಸೋರೆಬುರುಡೆಯ ಕಮಂಡಲ ಇತ್ತು. ಎಲ್ಲಿ ಹೋದರೂ ಅದನ್ನಾತ ಒಯ್ಯುತ್ತಿದ್ದ. ಆದರೆ ಯಾವ ಧಾಮ, ತೀರ್ಥಕ್ಷೇತ್ರ, ದಿವ್ಯ ಸ್ಥಾನಗಳಿಗೆ ಭೇಟಿಯಿತ್ತರೂ ಅದರಲ್ಲಿರುವ ನೀರಿನ ರುಚಿ ಮಾತ್ರ ಕಹಿಯಾಗಿತ್ತು. ಅದು ಬದಲಾಗಲೇ ಇಲ್ಲ. ಹಾಗೆಯೇ ಹೋದಲ್ಲೆಲ್ಲ ಪ್ರಾಪಂಚಿಕತೆಯಲ್ಲಿಯೇ ಮುಳುಗಿದಲ್ಲಿ ಆ ಸೋರೆ ಬುರುಡೆಯ ನೀರಿನಂತೆ ಕಹಿಯಾಗಿಯೇ ಉಳಿಯಬೇಕಾಗುತ್ತದೆ.

ಶಂಕರ ಭಗವತ್ಪಾದರು ತಿಳಿಸಿದಂತೆ ಸತ್ಸಂಗವನ್ನು ಸದಾ ಬಯಸುತ್ತಿರಬೇಕು. ಸದಸತ್ ವಿಚಾರಗಳನ್ನು ಮನಸ್ಸಿನಲ್ಲಿ ಚಿಂತನ-ಮಂಥನ ಮಾಡುತ್ತಿರಬೇಕು. ಹಿಂದಿನ ಕಾಲದಲ್ಲಿ ಅಂದರೆ ಈ ಆಧುನಿಕತೆಯ ಟಿ.ವಿ., ಮೊಬೈಲ್ ಇತ್ಯಾದಿಗಳಿಲ್ಲದಿದ್ದ ಸಂದರ್ಭದಲ್ಲಿ ಇಡೀ ಸಮಾಜದಲ್ಲಿ ಒಂದು ತೆರನಾದ ಭಕ್ತಿ, ಪಾವಿತ್ರ್ಯ, ಗುರುಹಿರಿಯರಲ್ಲಿ ಗೌರವ, ಕೌಟುಂಬಿಕ ವಾತ್ಸಲ್ಯ, ಪ್ರೀತಿ ಇವೆಲ್ಲವೂ ತುಂಬಿತ್ತು. ಹಿರಿಯರಾದವರು ಹತ್ತಿರದಲ್ಲಿರುವ ದೇವಸ್ಥಾನಕ್ಕೆ ಭೇಟಿ ನೀಡಿ ಅಲ್ಲಿ ನಡೆಯುವ ಹರಿಕಥೆ, ಪುರಾಣ ವಾಚನ, ಭಾಗವತ ಪ್ರವಚನ ಮುಂತಾದವುಗಳಲ್ಲಿ ನಿಷ್ಠೆಯಿಂದ, ಶ್ರದ್ಧೆಯಿಂದ ಭಾಗವಹಿಸಿ ಬಂದಾಗ ಆ ಸ್ಪಂದನ ಅರಿಯದೆಯೇ ಎಲ್ಲರಿಗೂ ತಲುಪುತ್ತಿತ್ತು.

ಇದೇ ನಿಜವಾದ ಸಾಧನಾ ಮಾರ್ಗ ಎನ್ನಬಹುದಾಗಿತ್ತು. ಆದರೆ, ಇಂದು ನಾವು ಕಾಣುತ್ತಿರುವ ವಾತಾವರಣ ಸಂಪೂರ್ಣ ಕಲುಷಿತವಾಗಿದ್ದು ದೇವಸ್ಥಾನ, ದೇವ ಮಂದಿರ, ಪುಣ್ಯ ಕ್ಷೇತ್ರ, ಪುಣ್ಯ ಧಾಮ ಇತ್ಯಾದಿಗಳು ಕೇವಲ ವ್ಯಾವಹಾರಿಕ ಹಾಗೂ ಆಡಂಬರದ ತಾಣವಾಗಿ ಉಳಿದಿವೆಯೇ ವಿನಃ ರಾಮಕೃಷ್ಣ ಪರಮಹಂಸರು ವಾಸ್ತವ್ಯವಿದ್ದ ಭವತಾರಿಣಿಯ ಆವಾಸ ಸ್ಥಾನಗಳಂತಿಲ್ಲ. ಹೀಗಾಗಿ ನಿಜವಾದ ಪರಿಶುದ್ಧ, ಪವಿತ್ರಮಯ, ಭಕ್ತಿಯ ತರಂಗವನ್ನು ಬೀರುವ ವಾತಾವರಣಗಳೇ ಮಾಯವಾಗುತ್ತಿವೆ ಎನ್ನಬಹುದು. ಈಗಲಾದರೂ ಈ ವಿಚಾರಗಳನ್ನು ಪರಿಪೂರ್ಣವಾಗಿ ಅರ್ಥೈಸಿಕೊಂಡು ಸಾಮಾನ್ಯ ಜೀವನದಿಂದ ಉಜ್ಜೀವನದೆಡೆಗೆ ಸಾಗಲು ಪರಮಹಂಸರು ನೀಡಿದ ಅತ್ಯಮೂಲ್ಯವಾದ ಅನುಷ್ಠಾನ ಮಾರ್ಗವನ್ನು ಅನುಸರಿಸಿ ದಿವ್ಯತೆಯ ಸಿಂಚನವನ್ನು ಪಡೆಯಬಹುದು. (ಲೇಖಕರು ಶ್ರೀ ರಾಮಕೃಷ್ಣ ಸೇವಾಶ್ರಮ, ಪಾವಗಡದ ಅಧ್ಯಕ್ಷರು, ಪ್ರತಿಕ್ರಿಯಿಸಿ: vvsudina@gmail.com, swajapa@gmail.com)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net