

ಬೆಂಗಳೂರು: ಸಹಜೀವನ ಕಡಿದುಕೊಂಡು ದೂರವಿದ್ದ ಯುವತಿಯನ್ನು ಹಿಂಬಾಲಿಸಿ ಕಿರುಕುಳ ನೀಡಿ ಕೊಲೆ ಬೆದರಿಕೆವೊಡ್ಡಿದ್ದ ಮಾಜಿ ಪ್ರಿಯಕರನ ವಿರುದ್ಧ ಗಿರಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೊಸಕೆರೆಹಳ್ಳಿಯ 25 ವರ್ಷದ ಸಂತ್ರಸ್ತೆ. ಈಕೆ ಕೊಟ್ಟ ದೂರಿನ ಮೇರೆಗೆ ಆಟೋ ಚಾಲಕ ರಫೀಕ್ ಬಾದ್ ಶಾ ಎಂಬಾತನ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ 6 ವರ್ಷದ ಹಿಂದೆ ನಗರದ ಖಾಸಗಿ ಕಾಲೇಜಿನಲ್ಲಿ ಸಂತ್ರಸ್ತೆ, ವ್ಯಾಸಂಗ ಮಾಡುವಾಗ ಫೇಸ್‌ಬುಕ್‌ನಲ್ಲಿ ರಫೀಕ್ ತನ್ನ ಹೆಸರು ಗುರುಪ್ರಸಾದ್ ಎಂದು ಪರಿಚಯ ಮಾಡಿಕೊಂಡಿದ್ದ. ಅಲ್ಲದೆ, ಸ್‌ಟಾವೇರ್ ಇಂಜಿನಿಯರ್ ಎಂದು ಹೇಳಿಕೊಂಡಿದ್ದ. ಸ್ನೇಹಕ್ಕೆ ತಿರುಗಿ ಇಬ್ಬರು ಪರಸ್ಪರ ಪ್ರೀತಿಸಲು ಆರಂಭಿಸಿ ವ್ಯಾಸಂಗ ಮುಗಿದ ಮೇಲೆ ರಫೀಕ್ ಜತೆಗೆ ಸಹಜೀವನ ನಡೆಸುತ್ತಿದ್ದಳು.
ಕೆಲ ವರ್ಷಗಳ ಬಳಿಕ ಗುರುಪ್ರಸಾದ್ ನಿಜವಾದ ಹೆಸರು ರಫೀಕ್ ಎಂಬ ವಿಚಾರ ಯುವತಿಗೆ ಗೊತ್ತಾಗಿದೆ. ಆದರೂ ಯುವತಿ ಆತನ ಮೇಲಿನ ಪ್ರೀತಿಗಾಗಿ ಹೊಂದಾಣಿಕೆ ಮಾಡಿಕೊಂಡು ಜತೆಯಲ್ಲೇ ಇದ್ದರು. ಇತ್ತೀಚೆಗೆ ಯುವತಿ ಮೇಲೆ ಅನುಮಾನ ಪಡೆಲು ರಫೀಕ್ ಆರಂಭಿಸಿದ್ದ. ಬೈಯುವುದು, ಕಿರುಕುಳ ನೀಡುತ್ತಿದ್ದ. ಈತನ ಕಾಟದಿಂದ ಬೇಸತ್ತ ಯುವತಿ ಸಹಜೀವನ ಬಿಟ್ಟು ಹೊಸಕೆರೆಹಳ್ಳಿಯ ತಂದೆಯ ಮನೆಗೆ ಹೋಗಿದ್ದಳು.
ಯುವತಿ ಕೆಲಸ ಮಾಡುವ ಜಾಗಕ್ಕೆ ಹೋಗುತ್ತಿದ್ದ ರಫೀಕ್, ಹಿಂಬಾಲಿಸಿಕೊಂಡು ನಿಂದಿಸುವುದು, ಕೊಲೆ ಬೆದರಿಕೆವೊಡ್ಡುತ್ತಿದ್ದ. ಸೆ.20ರ ಬೆಳಗ್ಗೆ ಹೊಸಕೆರೆಹಳ್ಳಿಯ ವೆಂಕಟಪ್ಪ ಲೇಔಟ್‌ನಲ್ಲಿ ಯುವತಿ ಹೋಗುವಾಗ ಅಡ್ಡಗಟ್ಟಿದ ರಫೀಕ್, ನೀನು ನನ್ನೊಂದಿಗೆ ಬರಬೇಕು.
ಇಲ್ಲವಾದರೆ, ನಿನ್ನ ಮತ್ತು ನಿನ್ನ ಕುಟುಂಬವನ್ನು ಮುಗಿಸಿ ಬಿಡುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ. ಅದೇ ದಿನ ಮಧ್ಯಾಹ್ನ ಜಯನಗರದ ಹೋಟೆಲ್ ಬಳಿ ಯುವತಿ ಮತ್ತು ಆಕೆಯ ಸಹೋದರ ಊಟ ಮಾಡಿ ವಾಪಾಸ್ ಬರುವಾಗ ರಫೀಕ್ ಅಡ್ಡಗಟ್ಟಿ ಯುವತಿಯ ಕಪಾಳಕ್ಕೆ ಹೊಡೆದು ನಿಂದಿಸಿದ್ದ. ಇದರಿಂದ ನೊಂದ ಯುವತಿ, ದೂರು ನೀಡಿದ್ದಾರೆ. ಇದರ ಮೇರೆಗೆ ತನಿಖೆ ಕೈಗೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.