

ನವದೆಹಲಿ: ಸೀರೆ ಭಾರತೀಯ ಸಂಪ್ರದಾಯದ ಉಡುಗೆ. ದೇಶ ಮಾತ್ರವಲ್ಲದೆ ವಿದೇಶಿ ಹೆಣ್ಣು ಮಕ್ಕಳೂ ಸಹ ಸಂತಸದಿಂದ ತೊಡುವ ಸೀರೆಯನ್ನು ಉಟ್ಟು ಹೋಗಿದ್ದಕ್ಕೆ ರೆಸ್ಟೋರೆಂಟ್ನಲ್ಲಿ ರೂಂ ಕೊಡಲು ನಿರಾಕರಿಸುವ ಘಟನೆ ದೆಹಲಿಯಲ್ಲಿ ನಡೆದಿದೆ. ಪ್ರಸಿದ್ಧ ಕೈಲಿನ್ ಮತ್ತು ಐವಿ ರೆಸ್ಟೋರೆಂಟ್ನಲ್ಲಿ ಸೀರೆ ಉಟ್ಟ ಮಹಿಳೆಗೆ ನೀವು ಸೀರೆ ಉಟ್ಟು ಬಂದಿರುವುದರಿಂದ ನಿಮಗೆ ರೂಂ ಕೊಡಲಾಗುವುದಿಲ್ಲ ಎಂದಿರುವ ವಿಡಿಯೋ ಇದೀಗ ಸಖತ್ ವೈರಲ್ ಆಗಿದೆ.
ಗುರುಗಾಂವ್ನ ಪಾಥ್ವೇಸ್ ಸೀನಿಯರ್ ಸ್ಕೂಲ್ನ ಪ್ರಾಂಶುಪಾಲಕಿಯಾಗಿರುವ ಸಂಗೀತ ಕೆ. ನಾಗ್ ಮಾರ್ಚ್ 10ರಂದು ಕೈಲಿನ್ ಮತ್ತು ಐವಿ ರೆಸ್ಟೋರೆಂಟ್ಗೆ ತೆರಳಿದ್ದಾರೆ. ಆದರೆ ಆಕೆಯನ್ನು ರೆಸ್ಟೋರೆಂಟ್ನಲ್ಲಿ ತಡೆಯಲಾಗಿದೆ. ನೀವು ಸಾಂಪ್ರದಾಯಿಕ ಉಡುಗೆಯಲ್ಲಿ ಬಂದಿರುವ ಕಾರಣ ನಿಮಗೆ ಇಲ್ಲಿ ಅನುಮತಿ ಇಲ್ಲ ಎಂದು ಅಲ್ಲಿನ ಸಿಬ್ಬಂದಿ ತಡೆದಿದ್ದಾನೆ. ಇದನ್ನು ವಿಡಿಯೋ ಮಾಡಲಾಗಿದ್ದು ಸಂಗೀತ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಸಾಂಪ್ರದಾಯಿಕೆ ಉಡುಗೆ ಎಂಬ ಕಾರಣಕ್ಕೆ ನಿರಾಕರಿಸಿದ್ದಾರೆ. ಭಾರತದಲ್ಲಿರುವ ರೆಸ್ಟೋರೆಂಟ್ಗಳಲ್ಲಿ ಸ್ಮಾರ್ಟ್ ಕ್ಯಾಶುಯಲ್ಗಳನ್ನು ಅನುಮತಿಸಲಾಗುತ್ತದೆ ಆದರೆ ಭಾರತೀಯ ಉಡುಗೆಯನ್ನಲ್ಲ! ಭಾರತೀಯನೆಂದು ಹೆಮ್ಮೆ ಪಡಲು ಏನುಳಿದಿದೆ? ಎಂದು ಟ್ವೀಟ್ನಲ್ಲಿ ಅವರು ಪ್ರಶ್ನಿಸಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗಿತ್ತಿದ್ದಂತೆ ಎಚ್ಚೆತ್ತುಕೊಂಡ ಕೈಲಿನ್ ಮತ್ತು ಐವಿ ರೆಸ್ಟೋರೆಂಟ್ನ ನಿರ್ದೇಶಕ ಸೌರಭ್ ಖನಿಜೋ, ತಮ್ಮ ರೆಸ್ಟೋರೆಂಟ್ನ ಸಿಬ್ಬಂದಿಯ ತಪ್ಪಿಗೆ ಕ್ಷಮೆ ಕೇಳಿದ್ದಾರೆ. ಇದು ಆತನ ತಪ್ಪು ಗ್ರಹಿಕೆಯಷ್ಟೇ, ನಮ್ಮಲ್ಲಿ ಭಾರತೀಯ ಉಡುಗೆ ನಿಷಿದ್ಧ ಎನ್ನುವುದಿಲ್ಲ. ನಾವು ಸ್ಲಿಪ್ಪರ್ ಮತ್ತು ಶಾರ್ಟ್ಸ್ ತೊಟ್ಟವರಿಗೆ ಒಳಗೆ ಅನುಮತಿ ನೀಡುವುದಿಲ್ಲವಷ್ಟೇ. ಅದನ್ನು ರೆಸ್ಟೋರೆಂಟ್ನ ಗೇಟ್ನಲ್ಲೇ ಹಾಕಿದ್ದೇವೆ. ನಮ್ಮ ಸಿಬ್ಬಂದಿ ಮಾಡಿರುವ ತಪ್ಪಿಗೆ ನಾನು ನಿಮ್ಮಲ್ಲಿ ಕ್ಷಮೆ ಕೇಳುತ್ತೇನೆ ಎಂದು ತಿಳಿಸಿದ್ದಾರೆ. ಸಂಗೀತಾ ಅವರಿಗೆ ಈ ರೀತಿಯ ಕ್ಷಮಾಪಣಾ ಸಂದೇಶವನ್ನು ಅವರು ಕಳಿಸಿದ್ದನ್ನು ಸಂಗೀತಾ ಅವರು ತಮ್ಮ ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ.
ಈ ವಿಚಾರವಾಗಿ ಕಾಂಗ್ರೆಸ್ನ ಶರ್ಮಿಸ್ತಾ ಮುಖರ್ಜಿ ಕೂಡ ಟ್ವೀಟ್ ಮಾಡಿದ್ದು, "ಕೈಲಿನ್ ಮತ್ತು ಐವಿ ಅಥವಾ ಇನ್ನಾವುದೇ ರೆಸ್ಟೋರೆಂಟ್ನಲ್ಲಿ ಭಾರತೀಯ ಉಡುಗೆ ಧರಿಸಲು ಅತಿಥಿಗಳಿಗೆ ಅವಕಾಶ ನೀಡದಂತಹ ವಸಾಹತುಶಾಹಿ ಪದ್ಧತಿಯನ್ನು ಅನುಸರಿಸಿದ್ದೇ ಆದಲ್ಲಿ ಅವರ ಪರವಾನಗಿಯನ್ನು ತಕ್ಷಣವೇ ರದ್ದುಗೊಳಿಸಬೇಕು" ಎಂದು ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ರ ಬಳಿ ಕೇಳಿಕೊಂಡಿದ್ದಾರೆ. (ಏಜೆನ್ಸೀಸ್)