ಮಗಳೇ ನೀನಿನ್ನೂ ಚಿಕ್ಕವಳು, ಬೇಡ ಕಣವ್ವಾ ಅಂದ್ರೂ ಕೇಳಲಿಲ್ಲ... ಬಾಳಿ ಬದುಕಬೇಕಿದ್ದವರ ಬಾಳಲ್ಲಿ ನಡೆಯಿತು ಘೋರ ದುರಂತ

lovers
Published on

ರಾಮನಗರ: ಅವಳ ವಯಸ್ಸಿನ್ನೂ 16 ವರ್ಷ. ಎಸ್ಸೆಸ್ಸೆಲ್ಸಿ ಓದತ್ತಿದ್ದಾಕೆ ಪ್ರೀತಿಯ ಬಲೆಗೆ ಸಿಲುಕಿಬಿಟ್ಟಳು. ಮಗಳೇ ನಿನಗಿನ್ನೂ ಚಿಕ್ಕ ವಯಸ್ಸು, ಬೇಡ ಕಣವ್ವಾ.. ಎಂದು ಹೆತ್ತವರು ಗೋಗರೆದರೂ ಆಕೆ ಮನಸ್ಸು ಆತನಿಗಾಗಿಯೇ ತೊರೆಯುತ್ತಿತ್ತು. ಕೊನೆಗೆ ಪ್ರಿಯಕರನೊಂದಿಗೇ ದುರಂತ ಅಂತ್ಯಕಂಡಿದ್ದಾಳೆ.

ಇಂತಹ ಮನಕಲಕುವ ಘಟನೆ ರಾಮನಗರ ಹೊರವಲಯದ ರಾಮದೇವರಬೆಟ್ಟದಲ್ಲಿ ಸಂಭವಿಸಿದೆ. ರಾಮನಗರ ತಾಲೂಕಿನ ಸುಗ್ಗನಹಳ್ಳಿಯ 16 ವರ್ಷದ ಕಾವ್ಯ ಮತ್ತು ದೇವರಸೇಗೌಡನದೊಡ್ಡಿಯ 26 ವರ್ಷದ ಹರೀಶ್​ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಹರೀಶ್​ ವೃತ್ತಿಯಲ್ಲಿ ಕಾರು ಚಾಲಕನಾಗಿದ್ದ.

ಓದುವ ವಯಸ್ಸಲ್ಲಿ ಮಗಳು ಪ್ರೀತಿಯ ಬಲೆಗೆ ಸಿಲುಕಿದ್ದ ವಿಷ್ಯ ತಿಳಿದು ಪಾಲಕರು ಆತಂಕಕ್ಕೀಡಾಗಿದ್ದರು. ನಮ್ಮಿಬ್ಬರಿಗೂ ಮದುವೆ ಮಾಡಿ ಎಂದು ಪ್ರೇಮಿಗಳು ಕುಟುಂಬಸ್ಥರನ್ನು ಕೇಳಿದಾಗ, ಇದಕ್ಕೆ ಒಪ್ಪಿಗೆ ಸಿಕ್ಕಿರಲಿಲ್ಲ. ಬಾಲಕಿ ಇನ್ನೂ ಅಪ್ರಾಪ್ತಳಾಗಿದ್ದ ಕಾರಣ ಎರಡೂ ಮನೆಯಲ್ಲಿ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರು. ಇದಕ್ಕೆ ಮನನೊಂದ ಪ್ರೇಮಿಗಳು ಭಾನುವಾರ ಮನೆಯಿಂದ ಹೊರ ಹೋಗಿ ಮದುವೆ ಮಾಡಿಕೊಂಡಿದ್ದಾರೆ. ನಂತರ ರಾಮದೇವರ ಬೆಟ್ಟಕ್ಕೆ ತೆರಳಿದ್ದಾರೆ.

ಅತ್ತ ಮನೆಯಲ್ಲಿ ಬಾಲಕಿ ನಾಪತ್ತೆ ಆಗಿದ್ದ ಕಾರಣ, ಪಾಲಕರು ಮಹಿಳಾ ಠಾಣೆಗೆ ನಾಪತ್ತೆ ದೂರು ದಾಖಲಿಸಿದ್ದರು. ಈ ವೇಳೆ ಹುಡುಕಾಟ ನಡೆಸಿದಾಗ ರಾಮದೇವರ ಬೆಟ್ಟದ ಮರವೊಂದಕ್ಕೆ ಪ್ರೇಮಿಗಳಿಬ್ಬರೂ ನೇಣುಬಿಗಿದುಕೊಂಡು ಮೃತಪಟ್ಟಿರುವುದು ಸೋಮವಾರ ಬೆಳಕಿಗೆ ಬಂದಿದೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net