

ಬೆಂಗಳೂರು: ಬನಶಂಕರಿಯಲ್ಲಿ ಸ್ತಪತಿ ಕ್ರಿಯೇಷನ್ಸ್ ಸಂಸ್ಥೆಯಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರ ಕಂಚಿನ ಪ್ರತಿಮೆ ತಯಾರಿಕೆ ಕೆಲಸ ಶೇ.90 ಕೆಲಸ ಮುಗಿದಿದೆ.
ನಟ ರಾಘವೇಂದ್ರ ರಾಜ್ಕುಮಾರ್, ಮಾಜಿ ಮೇಯರ್ ಜೆ.ಹುಚ್ಚಪ್ಪ, ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಅಮೃತ್ ರಾಜ್ ಮತ್ತಿತರರು ಮಂಗಳವಾರ ಪ್ರತಿಮೆ ವೀಕ್ಷಣೆ ಮಾಡಿದರು. ಬಳಿಕ ಮಾತನಾಡಿದ ರಾಘವೇಂದ್ರ ರಾಜ್ಕುಮಾರ್, ಅಂದು ಬಿಬಿಎಂಪಿ ಆವರಣದಲ್ಲಿ ಅಪ್ಪಾಜಿಯ ಪ್ರತಿಮೆ ಅನಾವರಣಕ್ಕೆ ಅಪ್ಪು ಹೋಗಿದ್ದ, ಆದ್ರೆ ಈಗ ಅಪ್ಪು ಪ್ರತಿಮೆಯೂ ಅಪ್ಪಾಜಿ ಪಕ್ಕ ಸ್ಥಾಪನೆ ಆಗ್ತಿದೆ.. ಎನ್ನುತ್ತಲೇ ಭಾವುಕರಾದರು.
ಪುನೀತ್ ರಾಜ್ಕುಮಾರ್ ನಮ್ಮ ಕುಟುಂಬಕ್ಕಿಂತ ಹೆಚ್ಚು ಪ್ರೀತಿಯನ್ನು ಅಭಿಮಾನಿಗಳಿಂದ ಸಂಪಾದನೆ ಮಾಡಿದ್ದಾರೆ. ಅಪ್ಪು ನಮ್ಮಿಂದ ದೂರವಾಗಿ 20 ದಿನ ಕಳೆದರೂ ಜನರ ನೋವು ಮಾತ್ರ ಕಡಿಮೆ ಆಗಿಲ್ಲ. ಅಪ್ಪು ಮಾಡಿದ ಸಮಾಜ ಸೇವಾ ಕಾರ್ಯಗಳನ್ನು ನಾವು ಮುನ್ನೆಡಿಸಿಕೊಂಡು ಹೋಗುತ್ತೇವೆ. ಪುನೀತ್ ರಾಜ್ಕುಮಾರ್ ಎಲ್ಲೂ ಹೋಗಿಲ್ಲ. ಅವರು ನಮ್ಮ ಜತೆಯಲ್ಲೇ ಇದ್ದಾರೆ. ಅಪ್ಪು ಪ್ರತಿಮೆ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಅಂತಿಮ ರೂಪ ನೀಡದಾಗ ಎದುರಲ್ಲಿ ನಮ್ಮ ಜೊತೆ ಅಪ್ಪುನೇ ನಿಂತಂತೆ ಭಾಸವಾಗುತ್ತದೆ ಎಂದು ರಾಘವೇಂದ್ರ ರಾಜ್ಕುಮಾರ್ ಹೇಳಿದರು.