

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಜಾಗತಿಕ ನಾಯಕರ ಮಾನ್ಯತೆಯ ಶ್ರೇಯಾಂಕದಲ್ಲಿ ಮತ್ತೊಮ್ಮೆ ಮೊದಲ ಸ್ಥಾನ ಪಡೆದಿದ್ದಾರೆ. ಮೋದಿ ಅವರು ಶೇ. 75 ಅನುಮೋದನೆಯೊಂದಿಗೆ ಅಗ್ರ ಸ್ಥಾನ ಪಡೆದಿದ್ದಾರೆ ಎಂದು ಮಾರ್ನಿಂಗ್ ಕನ್ಸಲ್ಟ್ ಸಮೀಕ್ಷೆ ತಿಳಿಸಿದೆ.
ಮೆಕ್ಸಿಕೊದ ಅಧ್ಯಕ್ಷ ಆಂಡ್ರೆಸ್ ಮ್ಯಾನುಯೆಲ್ ಲೋಪೇಜ್ ಒಬ್ರಡಾರ್ ಮತ್ತು ಇಟಲಿಯ ಪ್ರಧಾನಿ ಮಾರಿಯೋ ಡ್ರಾಘಿ ಕ್ರಮವಾಗಿ ಶೇ.63 ಮತ್ತು ಶೇ. 54 ರೇಟಿಂಗ್ಗಳೊಂದಿಗೆ ಎರಡನೇ ಮತ್ತು ಮೂರನೇ ಸ್ಥಾನ ಪಡೆದಿದ್ದಾರೆ. ಒಟ್ಟು 32 ವಿಶ್ವ ನಾಯಕರ ಹೆಸರನ್ನು ಒಳಗೊಂಡಿರುವ ಪಟ್ಟಿಯಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಶೇ.41 ರೇಟಿಂಗ್ನೊಂದಿಗೆ ಐದನೇ ಸ್ಥಾನದಲ್ಲಿದ್ದಾರೆ. ಕೆನಡಾ ಅಧ್ಯಕ್ಷ ಜಸ್ಟಿನ್ ಟ್ರುಡೊ ಶೇ.30, ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ ಶೇ.38ರಷ್ಟು ರೇಟಿಂಗ್ ಪಡೆದಿದ್ದಾರೆ. 2022ರ ಜನವರಿ ಮತ್ತು 2021ರ ನವೆಂಬರ್ನಲ್ಲಿ ನಡೆದ ಸಮೀಕ್ಷೆಯಲ್ಲೂ ಪ್ರಧಾನಿ ಮೋದಿ ಅತ್ಯಂತ ಜನಪ್ರಿಯ ವಿಶ್ವನಾಯಕರ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದರು.
ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಈ ಸರ್ವೇಯನ್ನು ನಡೆಸಲಾಗಿದ್ದು, ಆಯಾ ದೇಶಗಳಲ್ಲಿನ ವಯಸ್ಕರಿಂದ ಸುಮಾರು 7 ದಿನಗಳ ಕಾಲ ಸಂಗ್ರಹಿಸಿದ ಅಂಕಿ-ಅಂಶಗಳನ್ನು ಆಧರಿಸಿ ಈ ಫಲಿತಾಂಶ ಪ್ರಕಟಿಸಿದೆ.
ಏನಿದು ಮಾರ್ನಿಂಗ್ ಕನ್ಸಲ್ಟ್?: ಅಮೆರಿಕದ ಮಾನಿಂಗ್ ಕನ್ಸಲ್ಟ್ ಪೊಲಿಟಿಕಲ್ ಇಂಟೆಲಿಜೆನ್ಸ್ ಸಂಸ್ಥೆಯು ಪ್ರಸ್ತುತ ಆಸ್ಟ್ರೆಲಿಯಾ, ಆಸ್ಟ್ರಿಯಾ, ಬ್ರೆಜಿಲ್, ಜರ್ಮನಿ, ಭಾರತ, ಮೆಕ್ಸಿಕೊ, ನೆದರ್ಲೆಂಡ್, ದಣ ಕೊರಿಯಾ, ಸ್ಪೇನ್, ಸ್ವೀಡನ್ ಮತ್ತು ಅಮೆರಿಕದಲ್ಲಿ ಆಯಾಯ ದೇಶಗಳ ನಾಯಕರ ಅನುಮೋದನೆ ರೇಟಿಂಗ್ಗಳನ್ನು ಟ್ರ್ಯಾಕ್ ಮಾಡುವ ಕೆಲಸ ಮಾಡುತ್ತಿದೆ.