

ಬೆಂಗಳೂರು: ಭೌಗೋಳಿಕ ಪ್ರದೇಶ ಮತ್ತು ಸಂಪನ್ಮೂಲ ಗಮನದಲ್ಲಿ ಇಟ್ಟುಕೊಂಡು ಜನರ ಸಹಭಾಗಿತ್ವದಲ್ಲಿ ಯೋಜನೆಗಳನ್ನು ರೂಪಿಸಲು ರಾಜ್ಯ ನೀತಿ ಮತ್ತು ಯೋಜನಾ ಆಯೋಗ ನಿರ್ಧರಿಸಿದೆ.
ವಿಕಾಸಸೌಧದಲ್ಲಿ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್. ಪಾಟೀಲ್ ಅಧ್ಯಕ್ಷತೆಯಲ್ಲಿ ಗುರುವಾರ ಸಭೆ ನಡೆದು, ಪ್ರತಿಯೊಂದು ಗ್ರಾಮದಲ್ಲಿ ಸಭೆ ನಡೆಸಿ ಯೋಜನೆ ರೂಪುಗೊಂಡು 2026-27ರ ಬಜೆಟ್‌ನಲ್ಲಿ ಸೇರಿಸಿ ಮಂಡನೆಯಾಗಬೇಕು. ನವೆಂಬರ್ 30ಕ್ಕೆ ಆಯೋಗದ ಯೋಜನೆ ಸಿದ್ಧಪಡಿಸಿ ಡಿ. 15ರ ಒಳಗಾಗಿ ಸರ್ಕಾರಕ್ಕೆ ಒಪ್ಪಿಸಬೇಕೆಂದು ವೇಳಾ ಪಟ್ಟಿ ಪ್ರಕಟಿಸಿ ಗುರಿ ನಿಗದಿಪಡಿಸಲಾಯಿತು.
ದೆಹಲಿಯಲ್ಲಿ ಯೋಜನೆ ಸಿದ್ಧವಾಗಿ ಹಳ್ಳಿಯಲ್ಲಿ ಅನುಷ್ಠಾನಗೊಂಡರೆ ಹಣ ಮತ್ತು ಯೋಜನೆ ಕೆಳಹಂತಕ್ಕೆ ತಲುಪದೆ ವಿಲವಾಗುತ್ತವೆ. ಇದಕ್ಕೆ ಜಲಜೀವನ್ ಮಿಷನ್ ತಾಜಾ ಉದಾಹರಣೆಯಾಗಿದೆ. ಮನೆ ಮನೆಗೆ ಪೈಪ್ ಲೈನ್, ನಳ ಅಳವಡಿಸಿದ್ದು, ಜಲ ಸಂಪನ್ಮೂಲದ ಕೊರತೆ ಬಗ್ಗೆ ಯೋಜನೆಯೇ ಮಾಡಿಲ್ಲ. ಆದ್ದರಿಂದ ಪ್ರತಿ ಗ್ರಾಮದಿಂದ ಜಿಲ್ಲೆಯ ಭೌಗೋಳಿಕ ಪ್ರದೇಶ ಮನದಲ್ಲಿ ಇಟ್ಟುಕೊಂಡು ಸ್ಥಳೀಯರಿಗೆ ಅನುಕೂಲ ಆಗುವಂತಹ ಯೋಜನೆ ರೂಪಿಸಬೇಕು. ಜನರ ಸಹಭಾಗಿತ್ವದಲ್ಲಿ ಅನುಷ್ಠಾನಗೊಳ್ಳುವಂತಹ ಯೋಜನೆ ಸಿದ್ಧವಾಗಬೇಕಾಗಿದೆ ಎಂದು ಅಧಿಕಾರಿಗಳಿಗೆ ಸಲಹೆ ನೀಡಲಾಯಿತು.
ಪ್ರತಿ ಮೂರು ತಿಂಗಳಿಗೆ ಒಂದೆ ಸಭೆ ನಡೆಯಬೇಕಿದೆ. ಕೇವಲ ರಸ್ತೆ, ಚರಂಡಿ, ಶಾಲೆ ಎಂದೇ ಹೆಚ್ಚು ಹೊತ್ತುಕೊಡಬೇಡಿ. ಶಿಕ್ಷಣಕ್ಕೆ ಇಷ್ಟೊಂದು ಅನುದಾನ ವ್ಯಯ ಮಾಡಿದರೂ ಸರ್ಕಾರಿ ಶಾಲೆಗೆ ಮಕ್ಕಳು ಬರುತ್ತಿಲ್ಲ. ಹೆಚ್ಚು ಮಕ್ಕಳು ಬರುವಂತೆ ಯೋಜನೆ ರೂಪಿಸಬೇಕು. ಅಂತರ್ಜಲ ಅಭಿವೃದ್ಧಿಗೆ ಪ್ರತಿವರ್ಷ 1 ಲಕ್ಷ ಗ್ಯಾಲನ್ ನೀರು ಸಂಗ್ರಹದ ಗುರಿ ಇರಲಿ. ಜಾಗತಿಕ ಸಮಸ್ಯೆಯಾದ ಹವಾಮಾನ ವೈಪರೀತ್ಯದಿಂದ ಹೊರಬರಬೇಕಿದೆ. ಕೃಷಿ ಅರಣ್ಯ ಪ್ರದೇಶಕ್ಕೆ ಉತ್ತೇಜನ, ಹೈನುಗಾರಿಕೆ, ಕೃಷಿ, ನೀರಾವರಿಗೆ ಉತ್ತೇಜನ ನೀಡುವಂತಹ ಯೋಜನೆ ರೂಪಿಸುವಂತೆ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್. ಪಾಟೀಲ್ ಸಲಹೆ ನೀಡಿದರು. ಮುಂದಿನ ಸಭೆ ವೇಳೆ ಯೋಜನೆ ರೂಪಿಸಿಕೊಂಡು ಬರುವಂತೆ ಸೂಚಿಸಿದರು.
ಆಯೋಗದ ಆಧ್ಯಕ್ಷರೂ ಆದ ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಆಯೋಗದ ಮೊದಲ ಸಭೆ ನಡೆದಿದ್ದು, ಇದು ಎರಡನೇ ಸಭೆಯಾಗಿದೆ. ಜಿಲ್ಲಾ ಮುಖ್ಯ ಯೋಜನಾ ಅಧಿಕಾರಿಗಳು (ಡಿಪಿಒ) ಸೇರಿ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.
ಜಿಲ್ಲಾ ಯೋಜನಾ ಸಭೆಗೆ ಸವಾಲು
ತಾಲೂಕು ಮತ್ತು ಜಿಲ್ಲಾ ಪಂಚಾಯಿತಿಗೆ ಚುನಾವಣೆ ನಡೆಯದ ಕಾರಣ ಜಿಲ್ಲಾ ಯೋಜನ ಸಮಿತಿ ರಚನೆಗೆ ತಾಂತ್ರಿಕ ಸಮಸ್ಯೆ ಎದುರಾಗಿದೆ. ನಗರ ಮತ್ತು ಗ್ರಾಮೀಣಾ ಭಾಗ ಎರಡೂ ಇರುವ ಕಡೆಗಳಲ್ಲಿ ಯಾವ ಭಾಗದಿಂದ ಎಷ್ಟು ಜನಪ್ರತಿನಿಧಿಗಳನ್ನು ಸಮಿತಿ ಒಳಗೆ ಸೇರಿಸಿಕೊಳ್ಳಬೇಕೆಂಬ ಮಾರ್ಗಸೂಚಿ ಸರ್ಕಾರದಿಂದ ಹೊರಡಿಸಿಲ್ಲ. ಹೊಸ ತಾಲೂಕು ರಚನೆ ಹಿನ್ನೆಲೆಯಲ್ಲಿ ಸಮಿತಿ ರಚಿಸಿಲ್ಲ. ಸರ್ಕಾರ ನೀಡುವ ಬಜೆಟ್‌ನಲ್ಲಿ ಶೇ.80 ಭಾಗ ವೇತನಕ್ಕೆ ವೆಚ್ಚಾಗುತ್ತಿದೆ. ಅಭಿವೃದ್ಧಿ ಯೋಜನೆಗೆ ಸಾಕಾಗುತ್ತಿಲ್ಲ. ಸರ್ಕಾರದ ಕೆಲ ಯೋಜನೆಗಳು ನೇರ ಜನರಿಗೆ ತಲುಪುತ್ತಿವೆ. ಗ್ರಾಮ ಸಭೆಯಲ್ಲಿ ಜನರ ಆಕರ್ಷಣೆ ಮಾಡಲು ಸಾಧ್ಯವಾಗುತ್ತಿಲ್ಲ. ಪ್ರತಿ ಗ್ರಾಮ ಸಭೆಯಲ್ಲಿ ಕೇವಲ ಕೇವಲ ರಸ್ತೆ, ಚರಂಡಿ, ನೀರಿನ ಬೇಡಿಕೆ ಬರುತ್ತಿದೆ ಎಂದು ಜಿಲ್ಲಾ ಯೋಜನ ಅಧಿಕಾರಿಗಳು ಆಯೋಗದ ಮುಂದೆ ಬಿಚ್ಚಿಟ್ಟರು.
ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಜನಪ್ರತಿನಿಧಿಗಳು ಒಳಗೊಂಡಂತೆ ಯೋಜನಾ ಸಮಿತಿ ಸಭೆ ನಡೆಸಿ ಒಪ್ಪಿಗೆ ಪಡೆದು ಸಲ್ಲಿಸುವುದು ಸೂಕ್ತ. ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ಆಗುವವರೆಗೂ ಕಾಯುವುದು ಬೇಡ.
ಬಿ.ಆರ್. ಪಾಟೀಲ್, ಉಪಾಧ್ಯಕ್ಷ, ರಾಜ್ಯ ನೀತಿ ಮತ್ತು ಯೋಜನಾ ಆಯೋಗ.