ಇನ್ನೇನು ತಾಳಿಕಟ್ಟಬೇಕು… ವರನಿಗೆ ಬಂದ ಆ ಒಂದೇ ಒಂದು ಫೋನ್​ ಕರೆಯಿಂದ ಮುರಿದುಬಿತ್ತು ಮದುವೆ!

ವಿಜಯವಾಣಿ - 2024-07-11T203747.625
Published on

ಅಮ್ರೋಹ: ತಾಳಿ ಕಟ್ಟುವ ಶುಭವೇಳೆಗೆ ಕೈಯಲ್ಲಿ ಹೂವಿನ ಮಾಲೆ ಹಿಡಿದು ಒಬ್ಬರನೊಬ್ಬರು ಕಣ್ಣಿನಲ್ಲೇ ಖುಷಿ ಹಂಚಿಕೊಳ್ಳುವ ನವದಂಪತಿ, ಹೊಸ ದಾಂಪತ್ಯ ಜೀವನಕ್ಕೆ ಕಾಲಿಡುವ ತಮಗೆ ಬಂಧು-ಮಿತ್ರರು, ಸಂಬಂಧಿಕರ ಶುಭಹಾರೈಕೆ, ಆರ್ಶಿವಾದಕ್ಕಾಗಿ ಎದುರುನೋಡುತ್ತಿರುತ್ತಾರೆ. ನವಜೋಡಿಗಳನ್ನು ಕಣ್ತುಂಬಿಕೊಳ್ಳಲು ಕುಟುಂಬ ಸಮೇತ ಆಗಮಿಸುವವರಿಗೆ ಮದುವೆ ಅರ್ಧಕ್ಕೆ ನಿಂತು ಹೋದರೆ, ದೊಡ್ಡ ಆಘಾತವೇ ಉಂಟಾಗುತ್ತದೆ. ಇದೇ ರೀತಿ ಇಲ್ಲಿಯೂ ಕೂಡ ನಡೆದಿದ್ದು, ಇನ್ನೇನು ತಾಳಿಕಟ್ಟಬೇಕು ಅಷ್ಟರೊಳಗೆ ವರನಿಗೆ ಬಂದ ಆ ಒಂದೇ ಒಂದು ದೂರವಾಣಿ ಕರೆ, ವಿವಾಹವನ್ನೇ ಮುರಿದುಹಾಕಿದೆ.

ಉತ್ತರಪ್ರದೇಶದ ಅಮ್ರೋಹದಲ್ಲಿ ಈ ಘಟನೆ ವರದಿಯಾಗಿದ್ದು, ತಾಳಿಕಟ್ಟುವ ವೇಳೆಗೆ ಇನ್ನೇನು ಕೆಲವೇ ಕ್ಷಣಗಳು ಬಾಕಿ ಉಳಿದಿದೆ ಎನ್ನುವಷ್ಟರೊಳಗೆ ವರನ ಮೊಬೈಲ್​ಗೆ ಒಂದು ದೂರವಾಣಿ ಕರೆ ಬರುತ್ತದೆ. ಕಾಲ್​ ಸ್ವೀಕರಿಸಿದಾಗ, ನೀನು ಮದುವೆಯಾಗುತ್ತಿರುವ ಹುಡುಗಿ ನನ್ನವಳು. ಅವಳು ಮತ್ತು ನಾನು ಪರಸ್ಪರ ಪ್ರೀತಿಸಿದ್ದೆವು. ಈ ಕೂಡಲೇ ಅಲ್ಲಿಂದ ಹೊರಡು, ಆಕೆ ನನ್ನ ಪ್ರಿಯತಮೆ ಎಂದಿದ್ದಾನೆ. ಇದಕ್ಕೆ ಪ್ರತಿಕ್ರಿಯಿಸಿದ ವರ, ಇದೆಲ್ಲಾ ನಾನು ನಂಬುವುದಿಲ್ಲ. ನೀವು ಹೇಳುವುದಕ್ಕೆ ಸಾಕ್ಷಿಯೇನು? ಎಂದು ಪ್ರಶ್ನಿಸಿದ್ದಾನೆ.

ತಕ್ಷಣವೇ ವರನ ಮೊಬೈಲ್​ಗೆ ಕರೆ ಮಾಡಿದ್ದ ಕಮಲ್ ಸಿಂಗ್​, ಯುವತಿಯೊಂದಿಗೆ ಪಾರ್ಕ್​, ಹೋಟೆಲ್​ ಸೇರಿದಂತೆ ಇತರೆ ಸ್ಥಳಗಳಲ್ಲಿ ಸುತ್ತಾಡಿದ್ದ ಖಾಸಗಿ ಕ್ಷಣಗಳ ಫೋಟೋ ಹಾಗೂ ವಿಡಿಯೋಗಳನ್ನು ಕಳಿಸಿದ್ದಾನೆ. ಇದನ್ನೆಲ್ಲಾ ನೋಡಿದ ವರನಿಗೆ ಆಘಾತವಾಗಿದ್ದು, ಏಕಾಏಕಿ ತನ್ನ ಪೋಷಕರಿಗೆ ಮದುವೆ ನಿಲ್ಲಿಸುವಂತೆ ಹೇಳಿದ್ದಾನೆ. ವಧುವಿನ ಆಟ ಬಯಲಾಗಿದೆ ಎಂದು ಆತ ಕಳುಹಿಸಿದ ದೃಶ್ಯಾವಳಿಗಳನ್ನು ತನ್ನ ಹೆತ್ತವರಿಗೆ ತೋರಿಸಿ, ವಿವಾಹವನ್ನು ಅರ್ಧಕ್ಕೆ ನಿಲ್ಲಿಸಿದ್ದಾನೆ.

ಘಟನೆ ಬಗ್ಗೆ ಮಾಹಿತಿ ಪಡೆದ ಸ್ಥಳೀಯ ಪೊಲೀಸರು, ವರನಿಗೆ ಕರೆ ಮಾಡಿದ ಕಮಲ್ ಸಿಂಗ್ ಎಂಬ ವ್ಯಕ್ತಿಯ ವಿರುದ್ಧ ಎಫ್​ಐಆರ್​ ದಾಖಲಿಸಿಕೊಂಡು, ತನಿಖೆ ನಡೆಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net