

ಪಟನಾ: ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಸಿಂಹಪಾಲು ಸ್ಥಾನಗಳು ಬೇಕೆಂದು ಪಟ್ಟು ಹಿಡಿದಿರುವ ಬಿಹಾರದ ಜನತಾದಳ ಸಂಯುಕ್ತ ಮೈತ್ರಿ ಪಕ್ಷದ ಉಪಾಧ್ಯಕ್ಷ ಮತ್ತು ಚುನಾವಣಾ ಚಾಣಕ್ಯ ಎಂದೇ ಹೆಸರಾಗಿರುವ ಪ್ರಶಾಂತ್ ಕಿಶೋರ್ ವಿರುದ್ಧ ಬಿಜೆಪಿ ಹರಿಹಾಯ್ದಿದೆ.
ಚುನಾವಣಾ ದತ್ತಾಂಶ ಸಂಗ್ರಹಿಸಿಕೊಂಡು ಚೌಕಟ್ಟು ರೂಪಿಸುವಂತಹ ಕಂಪನಿಯನ್ನು ನಡೆಸುವುದರೊಂದಿಗೆ ರಾಜಕೀಯಕ್ಕೆ ಪ್ರವೇಶ ಪಡೆದವರು ತಮ್ಮ ಟೀಕೆಗಳ ಮೂಲಕ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ(ಎನ್ಡಿಎ)ಕ್ಕೆ ನೋವುಂಟು ಮಾಡುತ್ತಿದ್ದಾರೆ. ವೈಯಕ್ತಿಕ ಲಾಭಕ್ಕಾಗಿ ಬಿಸಿನೆಸ್ ನಡೆಸುವವರು ಮೊದಲು ತಮ್ಮ ಮಾರುಕಟ್ಟೆಯನ್ನು ನಿರ್ಮಿಸಿಕೊಳ್ಳಲು ಪ್ರಯತ್ನ ಪಡುತ್ತಾರೆ. ಬಳಿಕ ದೇಶದ ಕಲ್ಯಾಣದ ಬಗ್ಗೆ ಚಿಂತಿಸುತ್ತಾರೆ ಎಂದು ಪ್ರಶಾಂತ್ ಕಿಶೋರ್ ಹೆಸರು ಹೇಳದೆ ಬಿಜೆಪಿ ನಾಯಕ ಸುಶೀಲ್ ಮೋದಿ ಟ್ವೀಟ್ ಮೂಲಕ ತಿರುಗೇಟು ನೀಡಿದ್ದಾರೆ.
ಬಿಹಾರದಲ್ಲಿ ನಡೆದ ವಿಧಾನಸಭಾ ಚುನಾವಣಾ ವೇಳೆ ಬಿಜೆಪಿ ಮತ್ತು ಜೆಡಿಯು ಸಮಾನವಾದ ಸ್ಥಾನಗಳಲ್ಲಿ ಸ್ಪರ್ಧಿಸಿದ್ದವು. ಇದನ್ನೇ ಮುಂದುವರಿಸಲು ಬಿಜೆಪಿ ಅಪೇಕ್ಷಿಸಿತ್ತು ಎನ್ನಲಾಗಿದೆ. ಆದಾಗ್ಯೂ ಪ್ರಶಾಂತ್ ಕಿಶೋರ್, ಹಿಂದಿನ ಚುನಾವಣೆಯ ಪಾಲುದಾರಿಕೆಯ ಆಧಾರಕ್ಕಿಂತ ಜೆಡಿಯು ಹೆಚ್ಚಿನ ಅಭ್ಯರ್ಥಿಗಳನ್ನು ಪಡೆಯಬೇಕೆಂದು ಹೇಳಿಕೆ ನೀಡಿದ್ದರು.
ಪ್ರಧಾನಿ ನರೇಂದ್ರ ಮೋದಿ ಮತ್ತು ಸಿಎಂ ನಿತೀಶ್ ಕುಮಾರ್ ನೇತೃತ್ವದಲ್ಲಿ ಮುಂದಿನ ಚುನಾವಣೆ ನಡೆಯುವುದಾಗಿ ಈಗಾಗಲೇ ನಿರ್ಧಾರವಾಗಿದೆ. ಸಮಯ ಬಂದಾಗ ಸ್ಥಾನ ಹಂಚಿಕೆಯ ಬಗ್ಗೆ ನಾಯಕರು ನಿರ್ಧಾರ ತೆಗೆದುಕೊಳ್ಳುತ್ತಾರೆ. ಸದ್ಯ ಯಾವುದೇ ತೊಂದರೆ ಇಲ್ಲವೆಂದು ಟ್ವೀಟ್ ಮೂಲಕ ಪ್ರಶಾಂತ್ಗೆ ಟಾಂಗ್ ನೀಡಿದ್ದಾರೆ. (ಏಜೆನ್ಸೀಸ್)