

ಕೋಲಾರ: ಮಾದಕ ವಸ್ತು ಸಾಗಾಟ ಮತ್ತು ಮಾರಾಟ ಮಾಡುತ್ತಿದ್ದ ಪೆಡ್ಲರ್ನನ್ನು ಸೈಬರ್ ಅಪರಾಧ ಪೊಲೀಸರು ಬಂಧಿಸಿದ್ದು, 50 ಲಕ್ಷ ರೂ. ಬೆಲೆಯ 806 ಗ್ರಾಂ ಎಂಡಿಎಂಎ ಮಾದಕ, ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ.
ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ನಿಖಿಲ್, ಮಾದಕ ಜಾಲ ಭೇದಿಸುವಲ್ಲಿ ಸೈಬರ್ ಅಪರಾಧ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಶ್ಲಾಘಿಸಿದರು.
ಬೆಂಗಳೂರಿನ ಸೋಲದೇವನಹಳ್ಳಿ ವಾಸಿ ಸೈಯದ್ ಪುರ್ಖಾನ್ ಬಂಧಿತ ಆರೋಪಿಯಾಗಿದ್ದು, ಬೆಂಗಳೂರಿನಲ್ಲಿ ವಾಸವಿರುವ ನೈಜೀರಿಯಾ ಮತ್ತು ಇತರ ದೇಶಗಳ ವ್ಯಕ್ತಿಗಳಿಂದ ಕಡಿಮೆ ಬೆಲೆಗೆ ಮಾದಕ ವಸ್ತು ಖರೀದಿಸಿ ಕೋಲಾರದ ಕೈಗಾರಿಕಾ ಪ್ರದೇಶ ಸೇರಿ ಕಾಲೇಜುಗಳ ಬಳಿ ಮಾರಾಟಕ್ಕೆ ಯತ್ನಿಸಿದ್ದ, ಈ ವೇಳೆ ಸೈಬರ್ ಕೆಂ ಪೊಲೀಸರು ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ ತಾಲೂಕಿನ ಮಡೇರಹಳ್ಳಿ ಬಳಿ ಮಾದಕ ವಸ್ತು ಸಮೇತ ವಶಕ್ಕೆ ಪಡೆದು ವಿಚಾರಣೆ ನಡೆಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ ಎಂದು ತಿಳಿಸಿದರು.
ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ತನಿಖಾ ತಂಡಕ್ಕೆ 10 ಸಾವಿರ ರೂ.ನಗದು ಬಹುಮಾನ ಘೋಷಿಸಿ, ಅಭಿನಂದಿಸಿದರು.
ಸೈಬರ್ ಕೆಂ ಪೋಲೀಸ್ ಠಾಣೆ ಡಿವೈಎಸ್ಪಿ ಆರ್.ರಾಜೇಶ್, ವೃತ್ತ ನಿರೀಕ್ಷ ಎಸ್.ಆರ್.ಜಗದೀಶ್ ನೇತೃತ್ವದಲ್ಲಿ ಸಿಬ್ಬಂದಿ ಅಂಬರೀಶ್, ಶಿವಾನಂದ, ಆನಂದ್ ಕುಮಾರ್, ಅರುಣ್ಕುಮಾರ್, ಶಂಕರಪ್ಪ, ಸಂತೋಷ್, ಬಾಲಾಜಿ, ನಪೀಜ್ ಖಾನ್, ವಿನಯ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಬಾಕ್ಸ್...
ಮಕ್ಕಳತ್ತ ಇರಲಿ ಗಮನ
ಮಾದಕ ವಸ್ತು ಎಂಡಿಎಂಎ ಸೇವನೆ ಕಂಡು ಹಿಡಿಯಲು ಕೊಂಚ ಕಷ್ಟಕರವಾಗಿದ್ದರೂ ಮಾತ್ರೆ ರೂಪದಲ್ಲಿ ಮನೆಗಳಲ್ಲಿ ಮಕ್ಕಳು ಸೇವಿಸುತ್ತಿರಬಹುದು. ತಲೆನೋವಿಗೋ ಅಥವಾ ಇನ್ಯಾವುದೋ ಕಾರಣಕ್ಕೆ ಮಕ್ಕಳು ಮಾತ್ರೆಗಳನ್ನು ಸೇವಿಸುತ್ತಿದ್ದಾರೆ ಎಂದುಕೊಳ್ಳದೆ ಪಾಲಕರು ಈ ಬಗ್ಗೆ ಗಮನಹರಿಸಬೇಕು. ಮಕ್ಕಳು ಏನು ಸೇವಿಸುತ್ತಿರುವ ವಸ್ತುಗಳ ಬಗ್ಗೆ ನಿಗಾ ವಹಿಸಬೇಕು. ಮಾದಕ ವಸ್ತು ಸೇವನೆ ಮಾಡುತ್ತಿರುವುದು ಕಂಡುಬಂದಲ್ಲಿ ಸ್ಥಳಿಯ ಠಾಣೆಗಳಿಗೆ ಮಾಹಿತಿ ನೀಡಿ ಮಕ್ಕಳನ್ನು ರಕ್ಷಣೆ ಮಾಡಬೇಕು ಎಂದು ಎಸ್ಪಿ ಬಿ.ನಿಖಿಲ್ ಕಿವಿಮಾತು ಹೇಳಿದರು.