

ರಾಯಚೂರು: ರಾಜ್ಯ ಸರ್ಕಾರದ ವಿರುದ್ಧ ‘ಪೇಸಿಎಂ’ ಪೋಸ್ಟರ್ ಅಂಟಿಸಿ ಕಾಂಗ್ರೆಸ್ ಅಭಿಯಾನ ನಡೆಸಿದರೆ, ಅತ್ತ ಬಿಜೆಪಿಯೂ ಸೋನಿಯಾ ಗಾಂಧಿ ಫೋಟೋ ಸಹಿತ ‘ಪೇ ಟು ಮೇಡಂ’ ಪೋಸ್ಟರ್ ಹಾಕಿ ಪರಸ್ಪರ ಸಮರ ನಡೆಸಿವೆ. ಇದೀಗ ಈ ಎರಡೂ ಪಕ್ಷಗಳಿಗೆ ಕೌಂಟರ್ ಕೊಡಲು ರೆಡಿಯಾಗಿರುವ ಜೆಡಿಎಸ್, ಹೊಸ ಮಾದರಿಯ ಕ್ಯಾಂಪೇನ್ ಶುರು ಮಾಡಲು ಸಜ್ಜಾಗಿದೆ.
ರಾಯಚೂರು ನಗರದಲ್ಲಿ ಜೆಡಿಎಸ್ನಿಂದ 'ಪಬ್ಲಿಕ್' ಪೋಸ್ಟರ್ ಕ್ಯಾಂಪೇನ್ಗೆ ಭರದ ಸಿದ್ಧತೆ ನಡೆಯುತ್ತಿದೆ. ಕ್ಯೂ ಆರ್ ಕೋಡ್ ಮಾದರಿಯಲ್ಲಿ ಪಬ್ಲಿಕ್ ಪೋಸ್ಟರ್ ಅನ್ನು ಅಭಿವೃದ್ಧಿ ಪಡಿಸುವ ಕಾರ್ಯ ನಡೆದಿದೆ. ಈ ಕ್ಯೂ ಆರ್ ಕೋಡ್ ಅನ್ನು ಸ್ಕ್ಯಾನ್ ಮಾಡುತ್ತಿದ್ದಂತೆ ಎಚ್.ಡಿ.ಕುಮಾರಸ್ವಾಮಿ ಅವರ ಆಡಳಿತ ಅವಧಿಯ ಸಾಧನೆಗಳು, ಮುಂಬರುವ ಚುನಾವಣಾ ಯೋಜನೆಗಳ ಮಾಹಿತಿ ಸಿಗಲಿದೆ. ರಾಷ್ಟ್ರೀಯ ಪಕ್ಷಗಳ ಹಗರಣಗಳ ಬಗ್ಗೆಯೂ ಇದರಲ್ಲಿ ಮಾಹಿತಿ ಇರಲಿದೆ. ಸೆ.30ರಂದು ಮಾಜಿ ಸಿಎಂ ಕುಮಾರಸ್ವಾಮಿ ಅವರು ಅಧಿಕೃತ ಪೋಸ್ಟರ್ನ ಕ್ಯೂ ಆರ್ ಕೋಡ್ ಬಿಡುಗಡೆ ಮಾಡಲಿದ್ದಾರೆ. ರಾಯಚೂರಿನಿಂದಲೇ ಅಭಿಯಾನ ಆರಂಭವಾಗಲಿದೆ.
ಕಳೆದ ವಾರ ರಾತ್ರೋರಾತ್ರಿ ಬೆಂಗಳೂರಲ್ಲಿ ಪೇಸಿಎಂ ಪೋಸ್ಟರ್ ಅಂಟಿಸಿ ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ ಅಭಿಯಾನ ನಡೆಸಿತ್ತು. ಇದಕ್ಕೆ ಪ್ರತಿಯಾಗಿ ಪೇಟಿಎಂ ಕ್ಯೂ ಆರ್ ಕೋಡ್ ಮಾದರಿಯಲ್ಲಿ ಸಿದ್ದರಾಮಯ್ಯ ಮತ್ತು ಡಿಕೆಶಿ ಅವರ ಫೋಟೋ ಹಾಕಿ ‘ರಾಜ್ಯವನ್ನ ಲೂಟಿ ಮಾಡಿ ಹಾಳು ಮಾಡಿರುವ ಈ ಭ್ರಷ್ಟ ಜೋಡಿಯನ್ನ ರಾಜ್ಯದಿಂದ ಕಿತ್ತೆಸೆಯಲು ಇದನ್ನ ಸ್ಕ್ಯಾನ್ ಮಾಡಿ ಎಂದಿತ್ತು. ‘ಸ್ಕ್ಯಾಮ್ ರಾಮಯ್ಯ’ ಹೆಸರಿನಲ್ಲಿ ಪುಸ್ತಕ ಬಿಡುಗಡೆ ಮಾಡಿ ಆಕ್ರೋಶ ಹೊರ ಹಾಕಿತ್ತು. ಅಲ್ಲದೆ ಸೋನಿಯಾ ಗಾಂಧಿ ಅವರ ಫೋಟೋ ಸಹಿತ ‘ಪೇ ಟು ಮೇಡಂ’ ಪೋಸ್ಟರ್ ಬಿಡುಗಡೆ ಮಾಡಿತ್ತು. ಆದರೂ ಸುಮ್ಮನಾಗದ ಕಾಂಗ್ರೆಸ್ನಲ್ಲಿ ಸದನದಲ್ಲಿ 40% ಕಮಿಷನ್ ಎಂದು ಬರೆದಿದ್ದ ಪ್ಲಕಾರ್ಡ್ ಹಿಡಿದು ಧರಣಿ ನಡೆಸಿತ್ತು. ಆದರೂ ಈ ಎರಡೂ ಪಕ್ಷಗಳ ವಾರ್ ನಿಂತಿಲ್ಲ. ಮೊನ್ನೆ ಈ ಎರಡೂ ಪಕ್ಷಕ್ಕೂ ಚಾಟಿ ಬೀಸಿದ್ದ ರೈತ ಸಂಘ, ‘PAY FARMER’ ಅಭಿಯಾನ ಶುರು ಮಾಡಿತ್ತು.