

ಭುವನೇಶ್ವರ: ಒಡಿಯಾದ ಹಿರಿಯ ನಟ ಮಿಹಿರ್ ಕುಮಾರ್ ದಾಸ್ ಹೃದಾಯಾಘತದಿಂದ ನಿಧನರಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಭಾರತೀಯ ಚಿತ್ರರಂಗ ಸಂತಾಪ ಸೂಚಿಸಿದೆ.
ಮಿಹಿರ್ ಕುಮಾರ್ ದಾಸ್ ಅವರಿಗೆ 63 ವರ್ಷ ವಯಸ್ಸಾಗಿತ್ತು. ಕೆಲ ವರ್ಷದಿಂದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ದಾಸ್ರ ಆರೋಗ್ಯ ಸ್ಥಿತಿ ಮತ್ತಷ್ಟು ಹದಗೆಟ್ಟಿತ್ತು. ಅಲ್ಲದೆ ಲಘುಹೃದಯಾಘಾತವಾಗಿತ್ತು ಆದ್ದರಿಂದ ಕಳೆದ ವರ್ಷ ಅಂದರೆ 2021ರ ಡಿಸೆಂಬರ್ 9ರಂದು ಒರಿಸ್ಸಾದ ಕಟಕ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ನಿಗಾಘಟಕದಲ್ಲಿ ಇಟ್ಟು ವೈದ್ಯರು ಚಿಕಿತ್ಸೆ ನೀಡುತ್ತಿದ್ದರು. ಮಂಗಳವಾರ(ಜ.11) ಆಸ್ಪತ್ರೆಯಲ್ಲೇ ದಾಸ್ ಕೊನೆಯುಸಿರೆಳೆದಿದ್ದಾರೆ.
1959ರ ಫೆಬ್ರವರಿ 17ರಂದು ಮಯೂರ್‌ಭಂಜ್ ಜಿಲ್ಲೆಯಲ್ಲಿ ಜನಿಸಿದ್ದ ದಾಸ್, 'ಸ್ಕೂಲ್ ಮಾಸ್ಟರ್' ಸಿನಿಮಾ ಮೂಲಕ ಒಡಿಯಾ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು. 1998ರಲ್ಲಿ ತೆರೆಕಂಡ 'ಲಕ್ಷ್ಮಿ ಪ್ರತಿಮಾ' ಸಿನಿಮಾ ದಾಸ್ಗೆ ಹೆಚ್ಚು ಜನಮನ್ನಣೆ ಕೊಟ್ಟಿತು. ಇದೇ ಸಿನಿಮಾದ ಅಭಿನಯಕ್ಕಾಗಿ ದಾಸ್ಗೆ 'ಅತ್ಯುತ್ತಮ ನಟ' ಪ್ರಶಸ್ತಿಯೂ ಒಲಿದಿತ್ತು. 2005ರಲ್ಲಿ 'ಫೆರಿಯಾ ಮೋ ಸುನಾ ಭೌನಿ' ಸಿನಿಮಾಗೆ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ, 2007ರಲ್ಲಿ ತೆರೆಕಂಡ 'ಮು ಟೇಟ್ ಲವ್ ಕರುಚಿ' ಸಿನಿಮಾದಲ್ಲಿ ಅಭಿನಯಿಸಿದ್ದ ದಾಸ್ಗೆ ಅತ್ಯುತ್ತಮ ಹಾಸ್ಯನಟ ಪ್ರಶಸ್ತಿ ನೀಡಿ ರಾಜ್ಯ ಸರ್ಕಾರ ಗೌರವಿಸಿತ್ತು.
ಸಿನಿಮಾ ಜತೆಗೆ ರಾಜಕೀಯದತ್ತಲೂ ಆಸಕ್ತಿ ಹೊಂದಿದ್ದ ದಾಸ್, 2014ರಲ್ಲಿ ಬಿಜು ಜನತಾ ದಳಕ್ಕೆ ಸೇರಿದ್ದರು. 2019ರಲ್ಲಿ ಬಿಜೆಪಿ ಸೇರಿದ್ದರು. ಮಿಹಿರ್ ದಾಸ್ ಅವರ ಪತ್ನಿ, ಗಾಯಕಿ ಮತ್ತು ನಟಿ ಸಂಗೀತಾ ದಾಸ್ 2010ರಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ದಾಸ್ ಅವರಿಗೆ ಮಗ ಮತ್ತು ಸೊಸೆ ಇದ್ದಾರೆ.
'ಪ್ರಸಿದ್ಧ ಒಡಿಯಾ ನಟ ಶ್ರೀ ಮಿಹಿರ್ ದಾಸ್ ಜಿ ಅವರ ನಿಧನದ ಸುದ್ದಿ ಕೇಳಿ ದುಃಖವಾಗಿದೆ. ಅವರು ಸುದೀರ್ಘ ಚಲನಚಿತ್ರ ವೃತ್ತಿಜೀವನದಲ್ಲಿ ತಮ್ಮ ಸೃಜನಶೀಲ ಅಭಿನಯದಿಂದಲೇ ಸಹಸ್ರಾರು ಹೃದಯಗಳನ್ನು ಗೆದ್ದಿದ್ದಾರೆ. ಅವರಿಗೆ ಶಾಂತಿ ಸಿಗಲಿ' ಎಂದು ಪ್ರಧಾನಿ ಮೋದಿ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ.