ಅಡಕೆ ತೋಟವಾಯ್ತು ರಾಗಿ ಹೊಲ

30. Pyp..001
ಪಿರಿಯಾಪಟ್ಟಣ ತಾಲೂಕಿನ ಲಿಂಗಾಪುರ ಗ್ರಾಮದ ಪ್ರಗತಿಪರ ಕೃಷಿಕ ಪೋಕ್ಕುಳಂಡ ವಸಂತ್ ಕುಮಾರ್ ರವರ ಕಾಫಿ ತೋಟ.
Published on

ಪಿರಿಯಾಪಟ್ಟಣ: ರಾಗಿ, ಜೋಳದ ಬೆಳೆಗೆ ಸೀಮಿತವಾಗಿದ್ದ ಜಮೀನನ್ನು ಫಲವತ್ತತೆಗೊಳಿಸಿ ಉತ್ತಮ ಇಳುವರಿ ಪಡೆಯುವ ಕಾಫಿ ಮತ್ತು ಅಡಕೆ ತೋಟವನ್ನಾಗಿ ಪರಿವರ್ತಿಸುವ ಮೂಲಕ ತಾಲೂಕಿನ ಲಿಂಗಾಪುರ ಗ್ರಾಮದ ಪ್ರಗತಿಪರ ರೈತ ಪೋಕ್ಕುಳಂಡ ವಸಂತ್‌ಕುಮಾರ್ ತಮ್ಮ ಪರಿಶ್ರಮದ ಮೂಲಕ ಗಮನ ಸೆಳೆದಿದ್ದಾರೆ.

ಕೃಷಿಯಲ್ಲಿ ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು ಮಿಶ್ರ ಬೆಳೆ ಬೇಸಾಯ ಪದ್ಧತಿಯನ್ನು ಅನುಸರಿಸಿದಲ್ಲಿ ಒಳ್ಳೆಯ ಲಾಭಾಂಶವನ್ನು ಪಡೆಯಬಹುದು ಎಂಬುದನ್ನು ಸಾಬೀತುಪಡಿಸಿದ್ದಾರೆ.

ಕೊಡಗಿನ ವಿರಾಜಪೇಟೆ ಮೂಲದ ಪಿ.ಕೆ.ಲಿಂಗಪ್ಪ ಮತ್ತು ಬೆಳ್ಳಿಯವ್ವ ದಂಪತಿ 1965ರ ಆಸುಪಾಸಿನಲ್ಲಿ ಲಿಂಗಾಪುರ ಗ್ರಾಮದ ಬಳಿ 20 ಎಕರೆ ಜಮೀನನ್ನು ಖರೀದಿಸಿ ತಮ್ಮ ವಾಸ್ತವ್ಯವನ್ನು ಕೊಡಗಿನಿಂದ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಲಿಂಗಾಪುರ ಗ್ರಾಮಕ್ಕೆ ಬದಲಿಸಿದರು. ಕಾಡಂಚಿಗೆ ಹೊಂದಿಕೊಂಡಿರುವ ಜಮೀನಿನಲ್ಲಿ ರಾಗಿ, ಜೋಳ ಬೆಳೆಯುತ್ತಿದ್ದರೂ ಕಾಡು ಪ್ರಾಣಿಗಳ ನಿರಂತರ ಉಪಟಳದಿಂದಾಗಿ ಹೈರಾಣಾಗಿದ್ದರು. ಇಬ್ಬರು ಗಂಡು ಮತ್ತು ಇಬ್ಬರು ಹೆಣ್ಣು ಮಕ್ಕಳೊಂದಿಗೆ ಸುಖಿ ಕುಟುಂಬದ ನೊಗವನ್ನು ಹೊತ್ತಿದ್ದ ಪಿ.ಕೆ.ಲಿಂಗಪ್ಪ ಮತ್ತು ಬೆಳ್ಳಿಯವ್ವ ದಂಪತಿಗೆ ತಮ್ಮ ಜಮೀನಿನನ್ನು ಕೊಡಗಿನ ರೀತಿಯಲ್ಲಿ ಕಾಫಿ ತೋಟವನ್ನಾಗಿ ಪರಿವರ್ತಿಸಬೇಕೆಂಬ ಮಹದಾಸೆ ಹೊಂದಿದ್ದರೂ ಆರ್ಥಿಕ ಪರಿಸ್ಥಿತಿ ಮತ್ತು ಅನುಕೂಲಕರವಲ್ಲದ ಪ್ರಕೃತಿಯು ಅವಕಾಶವನ್ನು ನೀಡಿರಲಿಲ್ಲ. ಆದರೂ ಧೃತಿಗೆಡದ ದಂಪತಿ ತಮ್ಮ ಮಕ್ಕಳೆಲ್ಲರಿಗೂ ಮದುವೆ ಮಾಡುವ ಮೂಲಕ ತಮ್ಮ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದರು.

ತನ್ನ ಸಹೋದರನ ಅಕಾಲಿಕ ಮರಣ ಮತ್ತು ತಂದೆಯವರ ಕಾಲಾನಂತರ ಕುಟುಂಬದ ನಿರ್ವಹಣೆ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತ ವಸಂತ್‌ಕುಮಾರ್ ಮಳೆಯಾಶ್ರಿತ ಬೆಳೆಗೆ ಸೀಮಿತವಾಗಿದ್ದ ತಮ್ಮ ಜಮೀನನ್ನು ಕಾಫಿ, ಅಡಕೆ ಮತ್ತಿತರ ವಾಣಿಜ್ಯ ಬೆಳೆಗಳ ಕಣಜವನ್ನಾಗಿ ಮಾಡಲು ದೃಢ ಸಂಕಲ್ಪ ತೊಟ್ಟರು. ಆರಂಭದಲ್ಲಿ ಶುಂಠಿ ಬೆಳೆಯಲು ಪ್ರಾರಂಭಿಸಿದರು. 12 ಎಕರೆ ಜಮೀನಿನಲ್ಲಿ ಶುಂಠಿ ನಡುವೆ ಕಾಫಿ ಗಿಡಗಳನ್ನು ನೆಟ್ಟು ಪೋಷಿಸುತ್ತಾ ಬಂದಿದ್ದಾರೆ. ಪ್ರತಿವರ್ಷ 300 ಚೀಲ ಕಾಫಿ ಇಳುವರಿ ಪಡೆಯುತ್ತಿದ್ದು, ಇದರ ಮಾರಾಟದಿಂದ 15 ರಿಂದ 20 ಲಕ್ಷ ರೂ. ಗಳಿಸಲು ಸಾಧ್ಯವಾಗಿದೆ.

ಪ್ರತಿವರ್ಷ ಸರಾಸರಿ ಮೂರು ಎಕರೆಯಲ್ಲಿ ಶುಂಠಿ ಬೆಳೆಯುತ್ತಿದ್ದು 400 ರಿಂದ 500 ಕ್ವಿಂಟಾಲ್ ಶುಂಠಿ ಉತ್ಪಾದನೆ ಆಗುತ್ತಿತ್ತು. ಕಾಫಿ ಗಿಡಗಳು ದೊಡ್ಡದಾದ ಬಳಿಕ ಶುಂಠಿ ಬೆಳೆಯುವುದನ್ನು ನಿಲ್ಲಿಸಲಾಗಿದೆ. ಕಾಫಿ ಬೆಳೆಗಳ ನಡುವೆ ಅಡಕೆಯನ್ನು ಬೆಳೆಯಲಾಗಿದ್ದರೂ ಪ್ರತ್ಯೇಕವಾಗಿ 6 ಎಕರೆ ಜಮೀನನ್ನು ಅಡಕೆ ಬೆಳೆಗಾಗಿಯೇ ಸೀಮಿತಗೊಳಿಸಲಾಗಿದೆ. ವರ್ಷಕ್ಕೆ 150 ರಿಂದ 200 ಕ್ವಿಂಟಾಲ್ ಅಡಕೆ ಉತ್ಪಾದನೆ ಆಗುತ್ತಿದ್ದು, ಇದರ ಮಾರಾಟದಿಂದ 8 ರಿಂದ 10 ಲಕ್ಷ ರೂ. ಗಳಿಕೆಯಾಗುತ್ತಿದೆ. ಅವರ ಪರಿಶ್ರಮಕ್ಕೆ ಭೂತಾಯಿ ಎಂದಿಗೂ ಮೋಸ ಮಾಡಲಿಲ್ಲ, ಕೈ ಕೆಸರಾದರೆ ಬಾಯಿ ಮೊಸರು ಎಂಬ ನಾಣ್ನುಡಿಯಂತೆ ಉತ್ತಮ ಆದಾಯವನ್ನೇ ಗಳಿಸುತ್ತಿದ್ದಾರೆ.

ಮಿಶ್ರ ಬೆಳೆಗೆ ಒತ್ತು: ಮಿಶ್ರ ಬೆಳೆ ಬೇಸಾಯ ಪದ್ಧತಿಗೆ ಹೆಚ್ಚಿನ ಒತ್ತು ನೀಡುತ್ತಿರುವ ವಸಂತ್ ಕುಮಾರ್ ತಮ್ಮ 20 ಎಕರೆ ಜಮೀನಿನಲ್ಲಿ ಕಾಫಿ, ಅಡಕೆ, ತೆಂಗು ಬೆಳೆದಿದ್ದಾರೆ. ಸಾಂದರ್ಭಿಕ ಬೆಳೆಯಾಗಿ ಬಾಳೆಯನ್ನೂ ಬೆಳೆಯುತ್ತಿದ್ದಾರೆ. ಕಾಫಿ ತೋಟದಲ್ಲಿ ನೆರಳಿಗೆ ನೆಡಲಾಗಿದ್ದ ಸಿಲ್ವರ್ ಮರಗಳಿಗೆ ಕರಿಮೆಣಸು ಬಳ್ಳಿಯನ್ನೂ ಹಬ್ಬಿಸಿದ್ದಾರೆ. ಇದರೊಂದಿಗೆ ಹಣ್ಣಿನ ಗಿಡಗಳಾದ ಬಟರ್ ಫ್ರೂಟ್, ಸಪೋಟ, ಕಿತ್ತಲೆ, ಮೂಸಂಬಿ, ಚಕ್ಕೋತ, ಮಾವು, ಹಲಸು, ಪಪ್ಪಾಯ, ನೇರಳೆ, ಸೀಬೆ ಮತ್ತಿತರ ಹಣ್ಣಿನ ಗಿಡಗಳನ್ನು ಬೆಳೆಸಿದ್ದಾರೆ. ಸ್ಪ್ರಿಂಕ್ಲರ್ ಪದ್ಧತಿ ಮೂಲಕ ಸಮರ್ಪಕವಾಗಿ ನೀರು ಹಾಯಿಸಲಾಗುತ್ತಿದೆ. ಬೇಸಿಗೆಯಲ್ಲಿಯೂ ಜಮೀನಿನಲ್ಲಿ ತೇವಾಂಶ ಉಳಿಯುವಂತೆ ಎಚ್ಚರ ವಹಿಸಲಾಗಿದೆ. ಪ್ರತಿ ವರ್ಷ 3 ರಿಂದ 4 ಕ್ವಿಂಟಾಲ್ ಕರಿಮೆಣಸು ಕೈ ಸೇರುವ ಮೂಲಕ ಆದಾಯವನ್ನು ವೃದ್ಧಿಸಿದೆ. ಕಾಳುಮೆಣಸಿನ ಬಳ್ಳಿಗೆ ಕಾಡುವ ಸೊರಗು ರೋಗದಿಂದ ಕೆಲವು ಬಳ್ಳಿಗಳು ಹಾನಿಗೀಡಾಗಿದ್ದು, ಕರಿಮೆಣಸಿನ ಉತ್ಪಾದನೆಯಲ್ಲಿ ಕೊಂಚ ಕುಸಿತವಾಗಿದೆ.

ಕಾಡು ಪ್ರಾಣಿಗಳ ಆತಂಕ: ಮುತ್ತೂರು ಮೀಸಲು ಅರಣ್ಯದ ಪ್ರದೇಶಕ್ಕೆ ಹೊಂದಿಕೊಂಡಂತಿರುವ ಜಮೀನಿಗೆ ಕೆಲವೊಮ್ಮೆ ಕಾಡಾನೆಗಳು ಮತ್ತು ಕಾಡು ಹಂದಿಗಳು ದಾಳಿ ನಡೆಸಿ ಫಸಲನ್ನು ನಾಶಪಡಿಸುತ್ತವೆ. ಹುಲಿ ದಾಳಿಯೂ ಆಗಾಗ್ಗೆ ಕಂಡು ಬರುತ್ತಿದ್ದು, ರಾತ್ರಿ ಸಮಯದಲ್ಲಿ ಮನೆಯಿಂದ ಹೊರಬರಲು ಭಯವಿದೆ. ಕಾಡು ಪ್ರಾಣಿಗಳು ಕಾಡಿನಿಂದ ದಾಟಿ ನಾಡಿನತ್ತ ಬರದಂತೆ ತಡೆಯಲು ಅರಣ್ಯ ಇಲಾಖೆಯ ವತಿಯಿಂದ ಅರಣ್ಯ ಪ್ರದೇಶದ ಅಂಚಿನಲ್ಲಿ ಆನೆ ಕಂದಕಗಳ ನಿರ್ಮಾಣ ಮತ್ತು ಸೋಲಾರ್ ತೂಗು ತಂತಿ ಬೇಲಿ ಅಳವಡಿಸಿದ್ದರೂ ಸೋಲಾರ್ ತೂಗು ತಂತಿಯ ಮೇಲೆ ಮರದ ದಿಮ್ಮಿಗಳನ್ನು ಬೀಳಿಸಿ ಕಾಡಾನೆಗಳು ನುಸುಳುತ್ತವೆ.

ತೋಟದ ಮಧ್ಯಭಾಗದಲ್ಲಿ ಸುಂದರವಾದ ಮನೆಯನ್ನು ನಿರ್ಮಿಸಿರುವ ವಸಂತ್‌ಕುಮಾರ್ ತಮ್ಮ ತಾಯಿ ಬೆಳ್ಳಿಯವ್ವ, ಪತ್ನಿ ಬೀನಾ, ಅತ್ತಿಗೆ ಕೆ.ಬಿ.ಮಿನಿ ಹಾಗೂ ಮಕ್ಕಳೊಂದಿಗೆ ವಾಸವಿದ್ದು, ಮನೆಯ ಮುಂಭಾಗದಲ್ಲಿ ನಿರ್ಮಿಸಿರುವ ಗಾರ್ಡನಿಂಗ್ ಆಕರ್ಷಣೀಯವಾಗಿದೆ. ಕೃಷಿಯೊಂದಿಗೆ ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ವಸಂತ್‌ಕುಮಾರ್ ತಾಲೂಕು ಕೊಡಗು ಗೌಡ ಸಮಾಜದ ಅಧ್ಯಕ್ಷರಾಗಿ ಹಾಗೂ ಮುತ್ತೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.

20 ಎಕರೆ ಜಮೀನಿನಲ್ಲಿ ಮಿಶ್ರಬೆಳೆ ಬೇಸಾಯ ಪದ್ಧತಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ. ಆಧುನಿಕ ಕೃಷಿ ಪದ್ಧತಿ ಮತ್ತು ತಾಂತ್ರಿಕತೆಯನ್ನು ಅಳವಡಿಸಿಕೊಂಡು ಕೃಷಿಯಲ್ಲಿ ತೊಡಗಿಸಿಕೊಂಡರೆ ಉತ್ತಮ ಲಾಭ ಪಡೆಯಬಹುದು. ಕೃಷಿ ಮತ್ತು ತೋಟಗಾರಿಕಾ ಬೆಳೆಗಳ ಉತ್ತೇಜನಕ್ಕಾಗಿ ಸರ್ಕಾರದ ಕೃಷಿ ಸಂಬಂಧಿತ ಇಲಾಖೆಗಳಿಂದ ದೊರಕುವ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಕಾಡಂಚಿನ ಗ್ರಾಮಗಳ ಜಮೀನಿನಲ್ಲಿ ಕಾಡುಪ್ರಾಣಿಗಳಿಂದ ಉಂಟಾಗುತ್ತಿರುವ ಉಪಟಳವನ್ನು ತಡೆಯಲು ಅರಣ್ಯ ಇಲಾಖೆಯು ಸೂಕ್ತ ಕ್ರಮ ಕೈಗೊಳ್ಳಬೇಕು.
-ಪೋಕ್ಕುಳಂಡ ವಸಂತ್‌ಕುಮಾರ್, ಪ್ರಗತಿಪರ ಕೃಷಿಕ, ಲಿಂಗಾಪುರ ಗ್ರಾಮ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net