ಒಳ್ಳೇ ಕೆಲ್ಸ ಮಾಡೋಕೆ ಟೈಂ ಕೇಳಿದ ಬೀಗತಿ: ಮನನೊಂದು ಆತ್ಮಹತ್ಯೆಗೆ ಯತ್ನಿಸಿದ ಪಟ್ಟಣ ಪಂಚಾಯಿತಿ ಸದಸ್ಯೆ!

New Project (22)
Published on

ಎನ್.ಆರ್.ಪುರ: ನನ್ನ ಸಾವಿಗೆ ನಮ್ಮ ಪಕ್ಷದ ಮುಖಂಡರೇ ಕಾರಣ ಎಂದು ಪಟ್ಟಣ ಪಂಚಾಯಿತಿ ಸದಸ್ಯೆಯೊಬ್ಬರು ವಾಟ್ಸ್ಆ್ಯಪ್​ ಸ್ಟೇಟಸ್​ ಹಾಕಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಚಿಕ್ಕಮಗಳೂರು ಜಿಲ್ಲೆ ಎನ್‌ಆರ್ ಪುರದಲ್ಲಿ ಸಂಭವಿಸಿದೆ.

ಎನ್​.ಆರ್​.ಪುರದ ಪಟ್ಟಣ ಪಂಚಾಯಿತಿ ಸದಸ್ಯೆ ಜುಬೇದಾ ಆತ್ಮಹತ್ಯೆಗೆ ಯತ್ನಿಸಿದವರು. ಶುಕ್ರವಾರ ಸಂಜೆ ನನ್ನ ಸಾವಿಗೆ ಪಕ್ಷದ ಮುಖಂಡರೇ ಕಾರಣ ಎಂದು ವಾಟ್ಸ್‌ಆ್ಯಪ್ ಸ್ಟೇಟಸ್ ಹಾಕಿಕೊಂಡು ನಿದ್ರೆ ಮಾತ್ರೆ ಸೇವಿಸಿದ್ದರು. ವಿಷಯ ತಿಳಿಯುತ್ತಿದ್ದಂತೆ ಅವರಿಗೆ ಪಟ್ಟಣದ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬದುಕಿಸಿದ್ದು ಮೊಬೈಲ್ ಸ್ಟೇಟಸ್: ಜುಬೇದಾ ಅವರಿಗೆ ನಿದ್ರೆ ಮಾತ್ರೆ ತೆಗೆದುಕೊಳ್ಳುವ ಅಭ್ಯಾಸ ಇತ್ತು ಎನ್ನಲಾಗಿದ್ದು, ಗುರುವಾರ ಸಂಜೆ ಅವರು ನನ್ನ ಸಾವಿಗೆ ಕಾಂಗ್ರೆಸ್ ಮುಖಂಡರೇ ಕಾರಣ ಎಂದು ಸ್ಟೇಟಸ್ ಹಾಕಿಕೊಂಡಿದ್ದರಿಂದ ಅವರನ್ನು ರಕ್ಷಣೆ ಮಾಡಲು ಸಾಧ್ಯವಾಯಿತು. ಇಲ್ಲವಾದರೆ ಅಭ್ಯಾಸದಂತೆ ನಿದ್ರೆ ಮಾತ್ರೆ ಸೇವಿಸಿರಬಹುದು ಎಂದು ಭಾವಿಸಿ ಸುಮ್ಮನಾಗುತ್ತಿದ್ದರು ಎಂದು ಹೇಳಲಾಗಿದೆ.

ಏನಿದು ಘಟನೆ?: ಎನ್​.ಆರ್.ಪುರ ಪಟ್ಟಣ ಪಂಚಾಯಿತಿಯಲ್ಲಿ ಅಧ್ಯಕ್ಷೆಯಾಗಿ ಸುರಯ್ಯ ಭಾನು ಇದ್ದಾರೆ. ಈ ಹಿಂದೆ ಪಕ್ಷದಲ್ಲಿ ಆಗಿದ್ದ ಆಂತರಿಕ ಒಪ್ಪಂದದ ಪ್ರಕಾರ ನ.7ರಂದು ಇವರ ಅವಧಿ ಪೂರ್ಣಗೊಂಡಿದೆ. ಈ ಒಪ್ಪಂದದಂತೆ ಅವರು ರಾಜೀನಾಮೆ ನೀಡಿಲ್ಲ. ಗುರುವಾರ ಚರ್ಚೆ ನಡೆಸಿ ಅಧಿಕಾರ ಹಸ್ತಾಂತರಿಸಿಕೊಡುವುದಾಗಿ ಪಕ್ಷದ ಮುಖಂಡರು ಭರವಸೆ ನೀಡಿದ್ದರು. ಆದರೆ ಶುಕ್ರವಾರವೂ ಯಾವುದೇ ಕ್ರಮ ಕೈಗೊಳ್ಳದಿದ್ದರಿಂದ ಜುಬೇದಾ ಬೇಸರಗೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ. ವಿಶೇಷ ಎಂದರೆ ಈಗ ಅಧ್ಯಕ್ಷೆಯಾಗಿರುವ ಸುರಯ್ಯ ಭಾನು ಹಾಗೂ ಒಪ್ಪಂದದ ಪ್ರಕಾರ ಎರಡನೇ ಅವಧಿಗೆ ಅಧ್ಯಕ್ಷೆಯಾಗಬೇಕಿದ್ದ ಜುಬೇದಾ ಅವರಿಬ್ಬರೂ ಬೀಗರು.ಆಂತರಿಕ ಒಪ್ಪಂದದ ಪ್ರಕಾರ ರಾಜೀನಾಮೆ ನೀಡಬೇಕಿದ್ದ ಸುರಯ್ಯ ಭಾನು ಅವರು ಕರೊನಾ

ಸೇರಿದಂತೆ ಹಲವು ಕಾರಣಗಳಿಗೆ ನಿರೀಕ್ಷಿತ ಅಭಿವೃದ್ಧಿ ಕಾರ್ಯ ಮಾಡಲು ಸಾಧ್ಯವಾಗಿಲ್ಲ. ಹೀಗಾಗಿ ಇನ್ನೂ ಸ್ವಲ್ಪ ದಿನ ಅಧಿಕಾರದಲ್ಲಿ ಮುಂದುವರಿಯಲು ಅವಕಾಶ ಕೊಡಿ ಎಂದು ಮುಖಂಡರ ಬಳಿ ಇತ್ತೀಚಿಗೆ ಮನವಿ ಮಾಡಿಕೊಂಡಿದ್ದರು.

ಜುಬೇದಾ ಅವರಿಗೆ ಪ್ರತಿದಿನ ಒಂದು ನಿದ್ರೆ ಮಾತ್ರೆ ತೆಗೆದುಕೊಳ್ಳುವ ಅಭ್ಯಾಸ ಇತ್ತು. ಗುರುವಾರ ಮೊಬೈಲ್ ಸ್ಟೇಟಸ್ ಹಾಕಿಕೊಳ್ಳದಿದ್ದರೆ ರಕ್ಷಣೆ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಸ್ಟೇಟಸ್ ನೋಡಿದ ತಕ್ಷಣ ಬಾಗಿಲು ತೆಗೆದು ಆಸ್ಪತ್ರೆಗೆ ದಾಖಲು ಮಾಡಲಾಯಿತು.

|ರಿಯಾಜ್ ಜುಬೇದಾ ಅವರ ಅಳಿಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net