AI generated baby: ಸೋಶಿಯಲ್ ಮೀಡಿಯಾದಲ್ಲಿ ದಿನಕ್ಕೊಂದು ಟ್ರೆಂಡಿಂಗ್ ವಿಡಿಯೋ ವೈರಲ್ ಆಗುವುದು ಮಾಮೂಲಿ. ಆದರೆ ಈಗ ನೆಟ್ಟಿಗರ ನಿದ್ದೆಗೆಡಿಸಿರುವುದು ಒಂದು ನವಜಾತ ಶಿಶುವಿನ ವಿಡಿಯೋ! ಹುಟ್ಟುತ್ತಲೇ ಮಗುವಿನ ಮುಖದ ಮೇಲೆ ಹಿರಿಯರಂತೆ ದಟ್ಟ ಮೀಸೆ-ಗಡ್ಡ ಮೂಡಿರುವುದನ್ನು ಕಂಡು ಸೋಷಿಯಲ್ ಮೀಡಿಯಾ ಮಂದಿ ಫುಲ್ ಶಾಕ್ ಆಗಿದ್ದಾರೆ.
ಟಿಕ್‌ಟಾಕ್ ಬಳಕೆದಾರರೊಬ್ಬರು ಹಂಚಿಕೊಂಡಿದ್ದಾರೆನ್ನಲಾದ ಈ ವಿಡಿಯೋದಲ್ಲಿ, ಆಸ್ಪತ್ರೆಯ ಹಾಸಿಗೆಯ ಮೇಲೆ ನೀಲಿ ಬಣ್ಣದ ಚಾದರ ಹೊದಿಸಿ ಮಲಗಿಸಿರುವ ಮಗುವನ್ನು ಕಾಣಬಹುದು. ಮಗು ಕಣ್ಣು ಬಿಡುತ್ತಾ, ತಲೆ ಅಲ್ಲಾಡಿಸುತ್ತಾ ಶಾಂತವಾಗಿ ಮಲಗಿದೆ. ಮಹಿಳೆಯೊಬ್ಬರು ಮಗುವನ್ನು ಸ್ಪರ್ಶಿಸಿದಾಗ ಅದು ಸಣ್ಣಗೆ ನಗುವುದನ್ನು ವಿಡಿಯೋದಲ್ಲಿ ಕಾಣಬಹುದು.
ಆದರೆ ಎಲ್ಲರ ಗಮನ ಸೆಳೆದಿರುವುದು ಮಗುವಿನ ಮುಖದಲ್ಲಿರುವ ಕೂದಲು. ಮಗುವಿನ ಮೇಲ್ತುಟಿಯ ಮೇಲೆ ದಟ್ಟವಾದ ಕಪ್ಪು ಮೀಸೆ ಹಾಗೂ ಗಲ್ಲದ ಮೇಲೆ ಸಣ್ಣ ಗಡ್ಡದಂತಹ ಕೂದಲು ಎದ್ದು ಕಾಣಿಸುತ್ತಿದೆ. ಜತೆಗೆ ಮಗುವಿನ ಹುಬ್ಬುಗಳು ಮತ್ತು ಮುಖಭಾವ ಹಿರಿಯ ವ್ಯಕ್ತಿಯಂತೆ ಕಾಣುತ್ತಿದ್ದು, ನೆಟ್ಟಿಗರು ಇದನ್ನು ಕಂಡು ರಂಜಿತರಾಗಿದ್ದಾರೆ. "ಈ ಮಗು ಹುಟ್ಟುತ್ತಲೇ ಹಾಲಿನ ಬೆಲೆ ಏರಿಕೆಯ ಬಗ್ಗೆ ಯೋಚಿಸುತ್ತಿರುವಂತೆ ಕಾಣುತ್ತಿದೆ" ಎಂದು ಕೆಲವರು ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ.
ಈ ವಿಡಿಯೋ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದ್ದರೂ, ಇದರ ಸತ್ಯಾಸತ್ಯತೆಯ ಬಗ್ಗೆ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ. ಈ ವಿಡಿಯೋವನ್ನು ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಬಳಸಿ ಎಡಿಟ್ ಮಾಡಲಾಗಿದೆಯೇ ಅಥವಾ ಇದು ನಿಜವಾದ ವಿಡಿಯೋವೇ ಎಂಬುದು ಇನ್ನು ದೃಢಪಟ್ಟಿಲ್ಲ. ವಿಡಿಯೋ ಎಲ್ಲಿ ಮತ್ತು ಎಂದು ಚಿತ್ರೀಕರಿಸಲಾಗಿದೆ ಎಂಬುದರ ಬಗ್ಗೆಯೂ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.