

ಬೆಂಗಳೂರು: ಸರ್ಕಾರಿ ಶಾಲೆಗಳ ಮೂಲಸೌಲಭ್ಯ ಕುರಿತು ಹೈಕೋರ್ಟ್‌ನ ತೀವ್ರ ಆಕ್ಷೇಪಕ್ಕೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ಶಿಕ್ಷಕರ ನೇಮಕ, ಮೂಲಸೌಲಭ್ಯ ಮೇಲ್ದರ್ಜೆಗೇರಿಸಲು ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಸರ್ಕಾರಿ ಶಾಲೆಗಳಲ್ಲಿ ಶೌಚಾಲಯ ಮತ್ತು ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ರಾಜ್ಯ ಸರ್ಕಾರ ಮುತುವರ್ಜಿ ತೋರದೇ ಇರುವುದು ಖಾಸಗಿ ಶಿಕ್ಷಣ ಸಂಸ್ಥೆಗಳ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು.
ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆ ವೇಳೆ ಹೈಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದ್ದು, ಈ ವೇಳೆ ರಾಜ್ಯದ 464 ಸರ್ಕಾರಿ ಶಾಲೆಗಳಲ್ಲಿ ಶೌಚಾಲಯ ಇಲ್ಲ. 87 ಶಾಲೆಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ ಎಂದು ಹಿರಿಯ ವಕೀಲ ಕೆ.ಎನ್ ಫಣೀಂದ್ರ ಕೋರ್ಟ್‌ಗೆ ತಿಳಿಸಿದ್ದರು.
ಆದರೆ, ನಾವು ಅಧಿಕಾರಕ್ಕೆ ಬಂದು 140 ದಿನವಾಗಿದೆ. ನಾವು ಶೌಚಾಲಯ ಹಾಳು ಮಾಡಿಲ್ಲ ಎಂದು ಮಧು ಬಂಗಾರಪ್ಪ ಮಾಧ್ಯಮಗಳಿಗೆ ಸ್ಪಷ್ಟಪಡಿಸಿದರು.
ಸಕಾರಿ ಶಾಲೆ ತೊರೆದು ಖಾಸಗಿ ಶಾಲೆಗೆ ಹೋಗುವುದನ್ನು ಒಪ್ಪಲು ಸಾಧ್ಯವಿಲ್ಲ. ನಮ್ಮ ಶಾಲೆಗಳಲ್ಲಿ ಮೂಲಸೌಕರ್ಯವಿದ್ದರೆ ಖಾಸಗಿ ಶಾಲೆಗೆ ಹೋಗುವ ಪ್ರಮೇಯ ಇರುವುದಿಲ್ಲ. ಇದೇ ಕಾರಣಕ್ಕೆ ಕರ್ನಾಟಕ ಪಬ್ಲಿಕ್ ಶಾಲೆಯ ಸಂಖ್ಯೆಯನ್ನು ಹೆಚ್ಚಿಸಲಾಗುತ್ತಿದೆ. ಅನೇಕ ಕಡೆ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಹೆಚ್ಚಾಗಿದೆ. ಮುಂದಿನ ಆರ್ಥಿಕ ವರ್ಷದಲ್ಲಿ 500 ಸಂಖ್ಯೆ ಪಬ್ಲಿಕ್ ಶಾಲೆ ಆರಂಭಿಸುವ ಉದ್ದೇಶವಿದೆ ಎಂದು ವಿವರಿಸಿದರು.
ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ ಎಲ್ಲ ರೀತಿತ ಮೂಲಸೌಕರ್ಯಗಳಿರುತ್ತದೆ. ಸಂಗೀತ, ದೈಹಿಕ ಶಿಕ್ಷಣ, ಒಳ್ಳೆಯ ಶೌಚಾಲಯ ಎಲ್ಲವೂ ನೀಡಬಹುದು. ವಾಹನ ವ್ಯವಸ್ಥೆ ಮಾಡಿ ಕನಿಷ್ಠ ನಾಲ್ಕೈದು ಕಿಮೀ ವ್ಯಾಪ್ತಿಯಿಂದ ಮಕ್ಕಳನ್ನು ಕರೆತರಲು ವ್ಯವಸ್ಥೆ ಮಾಡಲಾಗುತ್ತದೆ ಎಂದರು.
ಶಿಕ್ಷಕರ ಕೊರತೆ ನೀಗಿಸಲು ಕ್ರಮಕೈಗೊಳ್ಳಲಾಗುತ್ತದೆ. ಕೋರ್ಟ್‌ನಲ್ಲಿರುವ 13 ಸಾವಿರ ಶಿಕ್ಷಕರ ನೇಮಕ ಸಂಬಂಧ ವ್ಯಾಜ್ಯದ ವಿಚಾರಣೆ ಅಂತಿಮ ಹಂತಕ್ಕೆ ಬಂದಿದೆ. ಸರ್ಕಾರದ ಕಡೆಯಿಂದ ಹೇಳಬೇಕಾಗಿದ್ದನ್ನು ಹೇಳಿ ಮುಗಿಸಲಾಗಿದೆ. ಅಂತಿಮ ತೀರ್ಪು ಬರುವುದು ಬಾಕಿ ಇದೆ. ತೀರ್ಪು ಪ್ರಕಟವಾಗುತ್ತಿದ್ದಂತೆ ನೇಮಕ ಪ್ರಕ್ರಿಯೆ ಮುಗಿಸಿ ಶಾಲೆಗಳಿಗೆ ನಿಯೋಜನೆ ಮಾಡಲಾಗುತ್ತದೆ ಎಂದು ವಿವರಿಸಿದರು.
ರಾಜ್ಯದಲ್ಲಿ 53 ಸಾವಿರ ಶಿಕ್ಷಕರ ಕೊರತೆ ಇದ್ದು, ಈ 13 ಸಾವಿರ ಶಿಕ್ಷಕರ ನೇಮಕ ಪ್ರಕ್ರಿಯೆ ಹೊರತಾಗಿ ಇನ್ನೂ 20 ಸಾವಿರ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ನಾವು ಬೇಡಿಕೆ ಇಡುತ್ತಿದ್ದೇವೆ. ಮುಖ್ಯಮಂತ್ರಿಯವರು ಒಪ್ಪಿಗೆ ಕೊಡುತ್ತಾರೆಂಬ ವಿಶ್ವಾಸವಿದೆ ಎಂದರು.
ಶಿಕ್ಷಕರ ನೇಮಕ ಮಾಡಿ ಕೊರತೆ ನೀಗಿಸಿ, ಅಜೀಂ ಪ್ರೇಮ್‌ಜೀ ಫೌಂಡೇಷನ್‌ನಿಂದ ಶಿಕ್ಷಕರಿಗೆ ತರಬೇತಿ ಕೊಡಿಸಿ ವಾರ್ಷಿಕ ಎರಡೂವರೆ ಸಾವಿರ ಕೋಟಿಯಷ್ಟು ಸಿಎಸ್‌ಆರ್ ಬಳಸಿಕೊಂಡು ಮೂಲಸೌಲಭ್ಯ ಕಲ್ಪಿಸಿ ಸರ್ಕಾರಿ ಶಾಲೆಗಳಿಗೆ ಯೋಗ್ಯತೆ ಬರುವಂತೆ ಮಾಡಲಾಗುತ್ತದೆ. ಇದರಿಂದ ರಾಜ್ಯ ಸರ್ಕಾರಿ ಶಾಲೆ ವ್ಯವಸ್ಥೆ ಬೇರೆ ಮಟ್ಟಕ್ಕೆ ಹೋಗಲಿದೆ ಎಂದು ಹೇಳಿದರು.