

ನವದೆಹಲಿ: ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರನ್ನು ದೇಶದ ನೂತನ ಮುಖ್ಯ ಚುನಾವಣಾ ಆಯುಕ್ತರನ್ನಾಗಿ (ಸಿಇಸಿ) ಕೇಂದ್ರ ಸರ್ಕಾರ ನೇಮಕ ಮಾಡಿದೆ.
ಮೇ 14ರಂದು ಹಾಲಿ ಸಿಇಸಿ ಸುಶೀಲ್ ಚಂದ್ರ ಅವರ ಅಧಿಕಾರಾವಧಿ ಮುಗಿಯಲಿದ್ದು, 15ರಂದು ಅಂದರೆ ಭಾನುವಾರ ಸಿಇಸಿ ಆಗಿ ರಾಜೀವ್ ಕುಮಾರ್ ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ಕೇಂದ್ರ ಕಾನೂನು ಮತ್ತು ಸಂಸದೀಯ ಸಚಿವಾಲಯ ಅಧಿಸೂಚನೆ ಹೊರಡಿಸಿದೆ. ನೂತನ ಸಿಇಸಿ ನೇಮಕ ಅಧಿಸೂಚನೆಯ ಪ್ರತಿಯನ್ನು ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿರುವ ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು, ಮುಂದಿನ ಸಿಇಸಿ ರಾಜೀವ್ ಕುಮಾರ್ ಎಂದು ಘೋಷಿಸಿದ್ದಾರೆ.
1984ರ ಬ್ಯಾಚ್ನ ಐಎಎಸ್ ಅಧಿಕಾರಿಯಾಗಿರುವ ರಾಜೀವ್ ಕುಮಾರ್, ಜಾರ್ಖಂಡ್ ಮತ್ತು ಬಿಹಾರ ಕೇಡರ್ನ ಹಿರಿಯ ಅಧಿಕಾರಿ. 36 ವರ್ಷ ವಿವಿಧ ಸರ್ಕಾರಿ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ್ದ ರಾಜೀವ್ ಅವರು 2020ರ ಫೆಬ್ರವರಿಯಲ್ಲಿ ನಿವೃತ್ತರಾದರು. ಅದೇ ವರ್ಷ ಅಂದರೆ 2020ರ ಸೆಪ್ಟೆಂಬರ್ 1ರಂದು ಚುನಾವಣಾ ಆಯುಕ್ತರಲ್ಲಿ ಒಬ್ಬರಾಗಿ ಅಧಿಕಾರ ಸ್ವೀಕರಿಸಿದ್ದರು. ಚುನಾವಣಾ ಆಯುಕ್ತರಲ್ಲಿ ಅತಿ ಹಿರಿಯರಾಗಿರುವ ಐಎಎಸ್ ಅಧಿಕಾರಿ ರಾಜೀವ್ ಅವರಿಗೆ ಇದೀಗ ಸಿಇಸಿ ಸ್ಥಾನ ಒಲಿದಿದೆ.