ರಫ್ತು ವಲಯ ರಕ್ಷಣೆಗೆ ಮಲ್ಟಿಲೇಯರ್ ಕಾರ್ಯತಂತ್ರ; ವಾಣಿಜ್ಯ ಸಚಿವಾಲಯ ಕ್ರಮ

photo (7)
Published on

ನವದೆಹಲಿ: ಅಮೆರಿಕದ ಸುಂಕದಿಂದ ರಫ್ತುದಾರರನ್ನು ರಕ್ಷಿಸಲು ಸಹಾಯವಾಗುವಂತೆ ಅಲ್ಪಾವಧಿ, ಮಧ್ಯಮಾವಧಿ ಮತ್ತು ದೀರ್ಘಾವಧಿ ಕಾರ್ಯಯೋಜನೆಗಳ ಮೇಲೆ ಕೇಂದ್ರ ವಾಣಿಜ್ಯ ಸಚಿವಾಲಯ ಕೆಲಸ ಮಾಡುತ್ತಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕೆಲವು ವಿಶೇಷ ಆರ್ಥಿಕ ವಲಯ (ಎಸ್​ಇಜೆಡ್) ನೀತಿ-ನಿಯಮ ಸಡಿಲಿಕೆ ಮಾಡಲಾಗುತ್ತಿದೆ. ಸರಳ ಲಾಜಿಸ್ಟಿಕ್ಸ್ ವ್ಯವಸ್ಥೆ, ಸುಲಭ ಅಂತಾರಾಜ್ಯ ಸಂಚಾರ, ಜಿಎಸ್​ಟಿ ವಾಪಸಾತಿ, ಇ-ಕಾಮರ್ಸ್ ರಫ್ತು ಕೇಂದ್ರಗಳ ಸ್ಥಾಪನೆ, ಹೊಸ ಮಾರುಕಟ್ಟೆಗಳ ಅನ್ವೇಷಣೆ, ಬ್ರಾ್ಯಂಡಿಂಗ್ ಉಪಕ್ರಮ ಮುಂತಾದ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ವಿವರಿಸಿದ್ದಾರೆ.

ಅಲ್ಪಾವಧಿಯಲ್ಲಿ ಹಣಹರಿವಿನ ಒತ್ತಡ ತಗ್ಗಿಸಲು, ದಿವಾಳಿತನ ತಪ್ಪಿಸಲು ಕ್ರಮಗಳಿವೆ. ಮಧ್ಯಮಾವಧಿಯಲ್ಲಿ, ಆಸ್ಟ್ರೇಲಿಯಾ, ಯುಎಇ, ಬ್ರಿಟನ್ ಮುಂತಾದ ದೇಶಗಳ ಜತೆಗಿನ ಮುಕ್ತ ವ್ಯಾಪಾರ ಒಪ್ಪಂದಗಳ ಬಳಕೆ, ಅಲ್ಲಿಗೆ ರಫ್ತುದಾರರ ನಿಯೋಗ ಕಳಿಸುವುದು, ಖರೀದಿದಾರ- ಮಾರಾಟಗಾರರ ಸಂಪರ್ಕ ವೃದ್ಧಿಗಾಗಿ ಸರಣಿ ಸಭೆಗಳ ಆಯೋಜನೆ, ಜಿಎಸ್​ಟಿ ಸುಧಾರಣೆ ಮೂಲಕ ಸ್ಪರ್ಧಾತ್ಮಕತೆ ಹೆಚ್ಚಳ ಮುಂತಾದ ಕ್ರಮಗಳಿವೆ. ಭಾರತ ಜಪಾನ್, ಕೊರಿಯಾ, ಆಸಿಯಾನ್ ಬ್ಲಾಕ್ ಸೇರಿದಂತೆ 11ಕ್ಕೂ ಹೆಚ್ಚು ದೇಶಗಳೊಂದಿಗೆ ವ್ಯಾಪಾರ ಒಪ್ಪಂದ ಮಾಡಿಕೊಂಡಿದೆ. ದೀರ್ಘಾವಧಿಯಲ್ಲಿ, ರಫ್ತು ಉತ್ತೇಜನ ಮಿಷನ್, ಎಸ್​ಇಜೆಡ್ ಸುಧಾರಣೆ, ಪೂರೈಕೆ ಸರಪಳಿ ಬಲಪಡಿಸುವುದು, ಬಲಿಷ್ಠ, ವೈವಿಧ್ಯಮಯ ಮತ್ತು ಜಾಗತಿಕ ಸ್ಪರ್ಧಾತ್ಮಕ ರಫ್ತು ಜಾಲ ನಿರ್ವಿುಸುವ ಕ್ರಮಗಳು ಸೇರಿವೆ ಎಂದು ಹೇಳಿದ್ದಾರೆ.

ಅಮೆರಿಕದ ಸುಂಕದ ಪರಿಣಾಮವಾಗಿ ರಫ್ತುದಾರರು ಹಣಪಾವತಿ ವಿಳಂಬ, ದೀರ್ಘಕಾಲ ಬಿಲ್​ಬಾಕಿ ಮತ್ತು ರದ್ದು ಆದೇಶ ಮುಂತಾದ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಇದೆ. ಕಾರ್ಯನಿರ್ವಹಣಾ ಬಂಡವಾಳದ ಒತ್ತಡ ತಪ್ಪಿಸಲು, ಉದ್ಯೋಗಗಳನ್ನು ರಕ್ಷಿಸಲು ಸರ್ಕಾರ ಕ್ರಮ ಕೈಗೊಳ್ಳಲಿದೆ. ಪ್ರಸ್ತಾಪಿತ ಜಿಎಸ್​ಟಿ ಸರಳೀಕರಣದಿಂದ ದೇಶೀಯ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚುವ ನಿರೀಕ್ಷೆ ಇದೆ. ಇದರಿಂದ ಭಾರತದಲ್ಲಿಯೇ ಹೆಚ್ಚಿನ ಮಾರಾಟಕ್ಕೆ ಅವಕಾಶ ಸೃಷ್ಟಿಯಾಗಿ, ರಫ್ತುದಾರರಿಗೆ ಸಹಾಯವಾಗಲಿದೆ ಎಂದಿದ್ದಾರೆ. ತ್ವರಿತ, ಸಮರ್ಪಕ ಮತ್ತು ಸಮಗ್ರ ಬಹುಪದರ (ಮಲ್ಟಿಲೇಯರ್) ತಂತ್ರದ ಮೂಲಕ ರಫ್ತುದಾರರನ್ನು ರಕ್ಷಿಸುವುದಷ್ಟೇ ಅಲ್ಲದೆ, ಜಾಗತಿಕ ಮಾರುಕಟ್ಟೆಗಳಲ್ಲಿ ಭಾರತದ ದೀರ್ಘಾವಧಿ ಸ್ಪರ್ಧಾತ್ಮಕತೆ ಬಲಪಡಿಸಲು ಸಹ ಕೇಂದ್ರ ಸರ್ಕಾರ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದ್ದಾರೆ.

ರಫ್ತು ವೈವಿಧ್ಯಕ್ಕೆ ರೂಪುರೇಷೆ

ಇದೇ ವೇಳೆ, ವಾಣಿಜ್ಯ ಸಚಿವಾಲಯ ಹಂತ ಹಂತವಾಗಿ ರಫ್ತು ವೈವಿಧಿ್ಯಕರಣ ಮಾಡುವುದಕ್ಕೆ ರೂಪುರೇಷೆ ಸಿದ್ಧಪಡಿಸಿದೆ. ಇದರಲ್ಲಿ ಪ್ರಮುಖ ಹಾರ್ವೆನೈಜ್ಡ್ ಸಿಸ್ಟಮ್ ಕೋಡ್​ಗಳು, ಕೈಗಾರಿಕಾ ಗುಚ್ಛಗಳು ಮತ್ತು ಪರ್ಯಾಯ ಮಾರುಕಟ್ಟೆಗಳನ್ನು ಗುರುತಿಸಲಾಗಿದೆ. ಈಗಿರುವ ಇಯು, ಯುಕೆ, ಯುಎಇ, ಜಪಾನ್, ಕೆನಡಾ, ಆಸ್ಟ್ರೇಲಿಯಾ ಮಾರುಕಟ್ಟೆಗಳಿಗೆ ರಫ್ತು ಹೆಚ್ಚಿಸುವುದು ಹಾಗೂ ಲ್ಯಾಟಿನ್ ಅಮೆರಿಕಾ, ಆಫ್ರಿಕಾ, ಪೂರ್ವ ಯುರೋಪ್ ಮತ್ತು ಪೂರ್ವ ಏಷ್ಯಾ ಸೇರಿದಂತೆ ಹೊಸ ಮಾರುಕಟ್ಟೆಗಳಿಗೆ ಪ್ರವೇಶಿಸುವುದು ಇದರಲ್ಲಿ ಸೇರಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net