ಬೊಕ್ಕಸ ತುಂಬಿಸದ ಬಹುಮಹಡಿ ಕಟ್ಟಡ

klr town
ಕೋಲಾರ ನಗರದ ನೋಟ.
Published on

ಕಿರುವಾರ ಎಸ್​. ಸುದರ್ಶನ್​ ಕೋಲಾರ

ಜಿಲ್ಲೆಯಲ್ಲಿ ಇತ್ತೀಚೆಗೆ ಬಹುಮಹಡಿ ಕಟ್ಟಡಗಳು ನಾಯಿ ಕೊಡೆಗಳಂತೆ ತಲೆಯೆತ್ತುತ್ತಿದ್ದು, ನಿಯಮ ಉಲ್ಲಂನೆಯಿಂದ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂ. ನಷ್ಟವಾಗುತ್ತಿದೆ.

ಸ್ಥಳಿಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬಹುಮಹಡಿ ಕಟ್ಟಡಗಳು ಕಾನೂನು ಬಾಹಿರವಾಗಿ ನಿರ್ಮಾಣವಾಗುತ್ತಿವೆ. ನಗರಸಭೆ, ಪುರಸಭೆಯಲ್ಲಿ ಅನುಮತಿ ಪಡೆದುಕೊಂಡಿದ್ದಕ್ಕಿಂತಲೂ ಹೆಚ್ಚಿನ ಅಂತಸ್ತು ನಿರ್ಮಿಸುತ್ತಿದ್ದಾರೆ. ಇನ್ನು ಕೆಲವರು ಅನುಮತಿ ಪಡೆದುಕೊಳ್ಳದೇ ನಿರ್ಮಾಣ ಮಾಡುತ್ತಿದ್ದಾರೆ. ಆದರೆ ಅಧಿಕಾರಿಗಳು ನೆಪ ಮಾತ್ರಕ್ಕೆ ನೋಟಿಸ್​ ಕೊಟ್ಟು ಸುಮ್ಮನಾಗುತ್ತಿದ್ದಾರೆ.

ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಕಟ್ಟಡ ನಿರ್ಮಾಣಕ್ಕೆ ಸರ್ಕಾರ ನಿಯಮ ರೂಪಿಸಿದೆ. ಆದರೆ ನಿಯಮ ಉಲ್ಲಂಘಿಸಿ ಪ್ರಭಾವಿಗಳು ಬಹುಮಹಡಿ ಕಟ್ಟಡ ನಿರ್ಮಿಸುತ್ತಿದ್ದಾರೆ. ಆದರೆ, ಹೆಚ್ಚುವರಿ ಕಟ್ಟಡಗಳಿಂದ ಸರ್ಕಾರದ ಬೊಕ್ಕಸಕ್ಕೆ ಸೇರಬೇಕಾದ ಆದಾಯ ಅಧಿಕಾರಿಗಳ ಪಾಲಾಗುತ್ತಿದೆ. ಆರ್ಥಿಕ ಮತ್ತು ರಾಜಕೀಯವಾಗಿ ಬಲಾಡ್ಯರೇ ಹೆಚ್ಚು ನಿಯಮ ಉಲ್ಲಂಘಿಸುತ್ತಿದ್ದಾರೆ ಎಂಬ ಆರೋಪಗಳು ವ್ಯಾಪಕವಾಗಿವೆ.

* ಮೂರು ಅಂತಸ್ತಿಗೆ ಅವಕಾಶ

ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ನೆಲ ಮಹಡಿ ಸೇರಿ ಮೂರು ಅಂತಸ್ತು ಅಥವಾ ವಾಣಿಜ್ಯ ಉದ್ದೇಶದ ಕಟ್ಟಡ ನಿರ್ಮಿಸಲು ಅವಕಾಶ ಇದೆ. ಆದರೆ, ನಗರದ ಹಲವೆಡೆ ನಿಯಮ ಗಾಳಿಗೆ ತೂರಿ ಐದಕ್ಕೂ ಹೆಚ್ಚು ಅಂತಸ್ತಿನ ಕಟ್ಟಡಗಳ ಕಾಮಗಾರಿ ಎಗ್ಗಿಲ್ಲದೆ ನಡೆಯುತ್ತಿದೆ.

ಈ ಬಗ್ಗೆ ಅಧಿಕಾರಿಗಳ ಬಳಿ ಮಾಹಿತಿ ಇದ್ದರೂ ಕ್ರಮಕ್ಕೆ ಮುಂದಾಗುತ್ತಿಲ್ಲ. ಬಹುಮಹಡಿ ಕಟ್ಟಡ ಕಟ್ಟುವವರೆಲ್ಲರೂ ಬಲಾಢ್ಯರಾಗಿರುವುದೇ ಇದಕ್ಕೆ ಮೂಲ ಕಾರಣ. ಆದರೆ, ಇಂತಹ ಕಟ್ಟಡಗಳಿಂದ ಅವಘಡಗಳು ಸಂಭವಿಸಿದರೆ ಹೊಣೆ ಯಾರು ಎನ್ನುವ ಪ್ರಶ್ನೆ ಎದುರಾಗಿದೆ. ಜಿಲ್ಲೆಯಲ್ಲಿ ನೂರಾರು ಕೈಗಾರಿಕೆಗಳು ಸ್ಥಾಪನೆಯಾಗಿದ್ದು, ಲಾಂತರ ಮಂದಿ ಕಾರ್ಮಿಕರು ಹೊರ ರಾಜ್ಯ, ಜಿಲ್ಲೆಗಳಿಂದ ಆಗಮಿಸಿದ್ದಾರೆ. ಇದರಿಂದಾಗಿ ವಸತಿಗಾಗಿ ಬೇಡಿಕೆ ಹೆಚ್ಚಾಗಿರುವ ಕಾರಣ, ಇದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವರು ಬಹುಮಹಡಿ ನಿರ್ಮಿಸಲು ಮುಂದಾಗಿದ್ದಾರೆ.

* ವಸತಿಗೆ ಅನುಮತಿ, ವಾಣಿಜ್ಯ ಉದ್ದೇಶಕ್ಕೆ ಬಳಕೆ!

ನಗರ, ಪಟ್ಟಣಗಳಲ್ಲಿ ಬಹುತೇಕರು ವಸತಿ ಉದ್ದೇಶಕ್ಕಾಗಿ ಅನುಮತಿ ಪಡೆದು ವಾಣಿಜ್ಯ ಉದ್ದೇಶಕ್ಕೆ ಕಟ್ಟಡ ನಿರ್ಮಿಸುತ್ತಿರುವುದು ಕಂಡು ಬಂದಿದೆ. ಆಸ್ಪತ್ರೆ, ವಾಣಿಜ್ಯ, ಶಾಲೆ, ಪಿಜಿಯನ್ನಾಗಿ ಬಳಕೆ ಮಾಡಲಾಗುತ್ತಿದೆ. ಇಲ್ಲೂ ನಗರಸಭೆಗೆ ತೆರಿಗೆ ವಂಚನೆ ಮಾಡಲಾಗುತ್ತಿದೆ.

* ಕಟ್ಟಡ ನಿರ್ಮಾಣಕ್ಕಿರುವ ಷರತ್ತುಗಳೇನು?

ನಗರ, ಪುರಸಭೆ, ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಕಂದಾಯ ಜಮೀನುಗಳನ್ನೇ ಅವೈಜ್ಞಾನಿಕವಾಗಿ ಬಡಾವಣೆ ನಿರ್ಮಾಣ ಮಾಡಿದ್ದಾರೆ. ನೆಲ ಮಹಡಿ ಸೇರಿ ಮೂರು ಅಂತಸ್ತು ನಿರ್ಮಾಣಕ್ಕೆ ಅವಕಾಶವಿದೆ. ಆದರೆ ಅದಕ್ಕಿಂತ ಹೆಚ್ಚಿನ ಅಂತಸ್ತು ನಿರ್ಮಿಸಬೇಕಾದರೆ ನಗರಾಭಿವೃದ್ಧಿ ಪ್ರಾಧಿಕಾರ (ಕೆಯುಡಿಎ), ಅಗ್ನಿಶಾಮಕ, ಬೆಸ್ಕಾಂ ಮತ್ತುಮಾಲಿನ್ಯ ನಿಯಂತ್ರಣ ಮಂಡಳಿಗಳಿಂದ ನಿರಾಕ್ಷೇಪಣಾ ಪತ್ರವನ್ನು ಮಾಲೀಕರು ಕಡ್ಡಾಯವಾಗಿ ಪಡೆದುಕೊಳ್ಳಬೇಕು. ಜತೆಗೆ ನೆಲ ಮಹಡಿ ಸೇರಿ ಮೂರು ಅಂತಸ್ತಿನ ಕಟ್ಟಡ ನಿರ್ಮಾಣವಾಗುವ ಪ್ರದೇಶದಲ್ಲಿ 40 ಅಡಿ ರಸ್ತೆ, ತಳಮಹಡಿ ಸೇರಿ ಐದು ಅಂತಸ್ತಿನ ಕಟ್ಟಡ ನಿರ್ಮಿಸುವ ಪ್ರದೇಶದಲ್ಲಿ 60ಅಡಿ ರಸ್ತೆ ಹಾಗೂ ಅದಕ್ಕಿಂತ ಹೆಚ್ಚಿನ ಮಹಡಿ ನಿರ್ಮಿಸಬೇಕಾದರೆ 80 ಅಡಿ ರಸ್ತೆಯಿರಬೇಕು. ಆದರೆ, ಬಹು ಮಹಡಿ ಹೊಂದಿರುವ ಬಡಾವಣೆಗಳಲ್ಲಿ ರಸ್ತೆಗಳು ಕಿರಿದಾಗಿವೆ. ಅನಾಹುತಗಳು ಸಂಭವಿಸಿದರೆ ಆಂಬುಲೆನ್ಸ್​, ಅಗ್ನಿಶಾಮಕ ವಾಹನ ತೆರಳಲು ಸಾಧ್ಯವಾಗದ ಪರಿಸ್ಥಿತಿ ಇದೆ.

ಕೋಟ್​...

ಕಟ್ಟಡ ನಿರ್ಮಾಣ ಮಾಡುವ ಮಾಲೀಕರು ಕಡ್ಡಾಯವಾಗಿ ಸ್ಥಳಿಯ ಸಂಸ್ಥೆಗಳಿಂದ ಅನುಮತಿ ಪಡೆದುಕೊಳ್ಳಬೇಕು. ಅನುಮತಿ ನೀಡುವ ಮುಂಚೆ ನಿಯಮಗಳ ಪಾಲನೆ ಕುರಿತು ಪರಿಶೀಲಿಸಿ ಅನುಮತಿ ನೀಡಬೇಕು. ಈ ಬಗ್ಗೆ ನಗರಸಭೆಗೆ ಪತ್ರ ಬರೆಯಲಾಗುವುದು.

- ಶ್ರೀನಾಥ್​, ಆಯುಕ್ತ, ಕೆಯುಡಿಎ

ಕೋಟ್​..

ನಗರ ವ್ಯಾಪ್ತಿಯಲ್ಲಿ ಬಹುಮಡಿ ಕಟ್ಟಡಗಳು ನಿರ್ಮಾಣವಾಗುತ್ತಿವೆ. ಇದರಿಂದಾಗಿ ನಗರಸಭೆಗೆ ಬರಬೇಕಾದ ತೆರಿಗೆ ವಂಚನೆಯಾಗುತ್ತಿದೆ. ಸಾಕಷ್ಟು ಮಂದಿ ಅನುಮತಿ ಪಡೆಯದೆ ಕಟ್ಟಡಗಳನ್ನು ನಿರ್ಮಿಸುತ್ತಿದ್ದು, ತೆರಿಗೆ ವಂಚನೆಯಾಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಇನ್ನಾದರು ಕ್ರಮಕೈಗೊಳ್ಳಲು ಮುಂದಾಗಬೇಕು.

- ರಾಕೇಶ್​, ನಗರಸಭೆ ಸದಸ್ಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net