

ಚಿಕ್ಕಬಳ್ಳಾಪುರ: ಕಾಂಗ್ರೆಸ್ ಪಕ್ಷವನ್ನು ತ್ಯಜಿಸಿ ಬಿಜೆಪಿ ಸೇರಿದ್ದಕ್ಕೆ ಸಚಿವ ಎಂಟಿಬಿ ನಾಗರಾಜ್ ಬಹಿರಂಗವಾಗಿಯೇ ತೀವ್ರ ವಿಷಾದ ವ್ಯಕ್ತಪಡಿಸಿದ್ದಾರೆ. ಜೀವ ಕಾಂಗ್ರೆಸ್, ದೇಹ ಬಿಜೆಪಿ ಅಂತ ಪರೋಕ್ಷವಾಗಿ ನೊಂದಕೊಂಡಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಎಂಟಿಬಿ ನಾಗರಾಜ್, ಸಾರ್ವಜನಿಕ ಜೀವನದಲ್ಲಿ ಒಂದು ಪಕ್ಷ ಬಿಟ್ಟು ಮತ್ತೊಂದು ಪಕ್ಷ ಸೇರಿದ್ದೇ ನಾನು ಮಾಡಿದ ದೊಡ್ಡ ತಪ್ಪು ಎಂದರು. ಪ್ರಸಕ್ತ ರಾಜಕೀಯ ವ್ಯವಸ್ಥೆ ಕುರಿತು ಬಹಿರಂಗವಾಗಿ ಅಸಮಾಧಾನ ಹೊರ ಹಾಕಿದರು.
ರಾಜಕೀಯದಲ್ಲಿ ದುಡ್ಡು ಮಾಡಲು ನಾನು ಬಂದಿಲ್ಲ. ನನ್ನ ಬಳಿಯೇ ಸಾಕಷ್ಟು ಹಣವಿದೆ. ಜನರ ಸೇವೆ ಮಾಡೋಕೆ ರಾಜಕೀಯಕ್ಕೆ ಬಂದಿದ್ದೇನೆ. ನಾನಾಗಲೀ ನನ್ನ ಮಕ್ಕಳಾಗಲಿ ಜನಸೇವೆ ಮಾಡಲೆಂದೇ ಬರೋದು. ಈಗಾಗಲೇ ಮುಂಬರುವ ಚುನಾವಣೆಗೆ ಸ್ಪರ್ಧಿಸಲು ಆಕಾಂಕ್ಷಿಗಳ ಸಂಖ್ಯೆ ಹೆಚ್ಚುತ್ತಿದೆ ಎಂಬುದು ನನ್ನ ಗಮನಕ್ಕೆ ಬಂದಿದೆ. ಎಲ್ಲವನ್ನೂ ಹೈಕಮಾಂಡ್ ನಿರ್ಧರಿಸಲಿದೆ ಎಂದರು.
ಆ ಪಕ್ಷ(ಕಾಂಗ್ರೆಸ್) ಬಿಟ್ಟು ಈ ಪಕ್ಷ(ಬಿಜೆಪಿ) ಸೇರಿ ತಪ್ಪು ಮಾಡಿದೆ ಎಂದ ಎಂಬಿಟಿಬಿ ನಾಗರಾಜ್ರ ಮಾತಿಗೆ ಸಾರ್ವಜನಿಕ ವಲಯದಲ್ಲಿ ತರೇಹವಾರಿ ಚರ್ಚೆಗಳಾಗುತ್ತಿವೆ. ಮೂರೇ ವರ್ಷಕ್ಕೆ ನಾಗರಾಜ್ ಅವರಿಗೆ ಬಿಜೆಪಿ ಸಾಕು ಸಾಕು... ಅನ್ನಿಸ್ತಾ? ಮರಳಿ ಕಾಂಗ್ರೆಸ್ ಸೇರಲು ಸಜ್ಜಾಗಿದ್ದಾರಾ? ಕಾಂಗ್ರೆಸ್ ಹೈಕಮಾಂಡ್ನಿಂದ ಆಹ್ವಾನ ಬಂದ್ರೆ ಕೈ ಹಿಡೀತಾರಾ ಎಂಟಿಬಿ? ಕಾಂಗ್ರೆಸ್ ವರಿಷ್ಠರು ಗ್ರೀನ್ ಸಿಗ್ನಲ್ ಕೊಟ್ರೆ ಎಂಟಿಬಿ ನಾಗರಾಜ್ ಮರಳಿ ಕಾಂಗ್ರೆಸ್ ಸೇರೋದು ಖಚಿತ!... ಎಂಬ ಮಾತುಗಳು ಕೇಳಿಬರುತ್ತಿದೆ.