

ಶ್ರೀ ಪರಿಮಳಾಚಾರ್ಯರೆಂದೇ ಪ್ರಥಿತರಾದ ಗುರುರಾಯರು ಮಂಚಾಲೆಯ ಮೂಲಬೃಂದಾವನದಲ್ಲೂ, ಇನ್ನಿತರ ಮೃತ್ತಿಕಾಬೃಂದಾವನಗಳಲ್ಲೂ ಒಂದು ರೂಪದಿಂದಿದ್ದರೆ ತಮ್ಮ ಪರಿಮಳಾದಿಗ್ರಂಥಗಳಲ್ಲೂ ನೆಲೆಸಿ ಭಕುತರ, ಅಧ್ಯೇತೃಗಳ, ಜಿಜ್ಞಾಸುಗಳ ಹೃದಯಕಮಲಗಳಲ್ಲಿ ವಾಸಿಸುತ್ತಿರುವರು. ಅವರ ‘ಪರಿಮಳ’ ಗ್ರಂಥವನ್ನು ಹದಿನೆಂಟರ ಎಳವೆಯಲ್ಲೇ ಶ್ರೀ ವಿದ್ಯಾಮಾನ್ಯತೀರ್ಥರಿಂದ ಆಮೂಲಾಗ್ರವಾಗಿ ಅಭ್ಯಸಿಸಿ, ಗುರುರಾಯರ ಅಂತರಂಗಭಕ್ತರಾಗಿದ್ದ ಅಂದಿನ ಮೈಸೂರು ಮಹಾರಾಜ ಶ್ರೀ ಜಯಚಾಮರಾಜ ಒಡೆಯರಿಂದ ಸಮ್ಮಾನಿತರಾಗಿದ್ದವರೇ ಶ್ರೀ ವಿಶ್ವೇಶತೀರ್ಥ ಶ್ರೀಪಾದರು.
ನಿಜಾರ್ಥದಲ್ಲಿ ಭಿಕ್ಷುಗಳಾಗಿ ಗುರುರಾಯರಂತೆ ಊರೂರು ಸುತ್ತುತ್ತ ನಮ್ಮ ದೇಶದ ಉದ್ದಗಲಕ್ಕೂ ವಿವಿಧ ಪಾಠಶಾಲೆ, ವಿದ್ಯಾಪೀಠಗಳನ್ನು ಸಂಸ್ಥಾಪಿಸಿ ಅಲ್ಲಿ ನಿರಂತರವಾಗಿ ವಿವಿಧ ಶಾಸ್ತ್ರಗ್ರಂಥಗಳ ಅಧ್ಯಯನ-ಅಧ್ಯಾಪನಾದಿಗಳು ನಡೆವಂತೆ ನೋಡಿಕೊಂಡ ಮಹಾನ್ ಶಾಸ್ತ್ರಸಂರಕ್ಷಕರು. ಭಾರತದಾದ್ಯಂತ ಮಠಮಂದಿರಗಳನ್ನು ಸ್ಥಾಪಿಸಿ ಯಾತ್ರಿಕರಿಗೆಲ್ಲ ಉಳಿದುಕೊಳ್ಳಲು ಆವಾಸಗೃಹಗಳನ್ನೂ, ಶುಚಿರುಚಿಯಾದ ಗುರುರಾಯರ ತೀರ್ಥಪ್ರಸಾದಗಳನ್ನು ಅನೇಕ ದಶಕಗಳ ಹಿಂದೆಯೇ ವ್ಯವಸ್ಥೆಗೊಳಿಸಿರುವ ಮಹಾನ್ ದೂರದೃಷ್ಟಿಯ ನೇತಾರರು, ಮಾನವತಾವಾದಿಗಳು ಪೇಜಾವರ ಶ್ರೀಪಾದರು.
ಗುರುರಾಯರ ಪೂರ್ವಾವತಾರವೇ ಶ್ರೀ ವ್ಯಾಸರಾಯರದ್ದು. ವ್ಯಾಸರಾಯರು ಹೇಗೆ ಶ್ರೀಪಾದರಾಜರಿಂದ ಸಕಲ ಶಾಸ್ತ್ರಗಳನ್ನು ಅಧ್ಯಯನ ಮಾಡಿ ಶಾಸ್ತ್ರಜ್ಞರನ್ನೂ, ಹರಿದಾಸರನ್ನೂ, ರಾಜಕೀಯ ನಾಯಕರನ್ನೂ ಸೃಷ್ಟಿಸಿ ತಿರುಪತಿಯ ಶ್ರೀನಿವಾಸ, ಶ್ರೀರಂಗದ ರಂಗನಾಥ ಹಾಗೂ ಇನ್ನೂ ಹಲವು ಪ್ರಾಚೀನ ದೇಗುಲಗಳನ್ನೂ ಉಳಿಸಿ ನಮ್ಮ ದೇಶದ ಮಹಾನ್ ಯತಿಕುಲ ಚಕ್ರವರ್ತಿಗಳೆನಿಸಿರುವರೋ, ಅವರ ತರುವಾಯ ನಮ್ಮ ಕಣ್ಣೆದುರಲ್ಲೇ ಇದ್ದ ಮತ್ತೋರ್ವ ಯತಿಕುಲಚಕ್ರವರ್ತಿಗಳೆಂದರೆ ಶ್ರೀ ವಿಶ್ವೇಶತೀರ್ಥರು. ಶ್ರೀಮತಿ ಇಂದಿರಾಗಾಂಧಿಯವರಿಂದ ಹಿಡಿದು ಇಂದಿನ ರಾಷ್ಟ್ರಪತಿ, ಪ್ರಧಾನಮಂತ್ರಿಯೇ ಮೊದಲಾದ ದೇಶದ ನಾಯಕರಿಗೆ ಸದಾ ಸನ್ಮಾರ್ಗದರ್ಶನ ಮಾಡುತ್ತ ತನ್ನನ್ನು ವಿರೋಧಿಸಿದವರನ್ನೂ ಸ್ವವರ್ಚಸ್ಸಿನಿಂದ ಬಳಿ ಸೆಳೆದು ವಾತ್ಸಲ್ಯತೋರಿದ ಮಹಾನ್ ನೇತಾರ ಶ್ರೀ ವಿಶ್ವೇಶತೀರ್ಥರು. ಅಂದು ಗುರುರಾಯರು ಸ್ವಯಂ ಉದಂಥಗಳನ್ನು ಬರೆದಿದ್ದರೂ ತಮ್ಮ ಶಿಷ್ಯನಾದ ಲಕ್ಷಿ್ಮೕನಾರಾಯಣಾಚಾರ್ಯನು ಋಗ್ವೇದಕ್ಕೆ ವ್ಯಾಖ್ಯಾನ ಬರೆದಿರುವುದನ್ನು ಕಂಡು ಸಂತಸದಿ ಆತನನ್ನು ಪ್ರೋತ್ಸಾಹಿಸಿ ತಾವು ಬರೆಯಬೇಕೆಂದಿದ್ದ ವ್ಯಾಖ್ಯಾನವನ್ನೂ ಕೈಬಿಟ್ಟು ಔದಾರ್ಯ ಮೆರೆದಿದ್ದರು. ಅಂತೆಯೇ ಈ ಅಭಿನವವಾದಿರಾಜರೂ ತಮ್ಮ ಸಹಸ್ರಾರು ವಿದ್ಯಾರ್ಥಿಗಳಿಗೆ ವೇದ-ವೇದಾಂತ-ನ್ಯಾಯಶಾಸ್ತ್ರಗಳ ಉದಂಥಗಳನ್ನೂ ಪಾಠ ಹೇಳಿ, ಅವರುಗಳಿಂದ ಸಹಸ್ರಾರು ವ್ಯಾಖ್ಯಾನಾಖ್ಯಾನಗಳನ್ನು ಬರೆಯಿಸಿ ಕುಲಪತಿ, ಕುಲಾಧಿಪತಿಗಳ ಸ್ಥಾನಕ್ಕೆ ಕೊಂಡೊಯ್ದಿದ್ದಾರೆ. ಅಂದು ಗುರುರಾಯರು ಒಪ್ಪತ್ತೇ ಉಣುತ್ತಿದ್ದರೂ ಕೂಡ ಬಡಬಗ್ಗರಿಗೆ, ಭಗವದ್ಭಕ್ತರಿಗೆ, ಶಿಷ್ಯಕೋಟಿಗೆ ಪಂಚಭಕ್ಷ್ಯ ಪರಮಾನ್ನಗಳನ್ನೇ ಉಣಬಡಿಸುತ್ತಿದ್ದರು. ಅಂತೆಯೇ ಈ ವಾಮನಮೂರ್ತಿಯೂ ತನ್ನ ಹಿಂದೆ ಸದ್ವಿದ್ಯಾಭಿಲಾಷಿಗಳಾಗಿ ಬಂದ ಅದೆಷ್ಟೋ ನಿರಾಶ್ರಿತರಿಗಾಗಿ, ಹರಿಜನರಿಗಾಗಿ ಸದಾ ಊರೂರು ಸುತ್ತುತ್ತ ಭಿಕ್ಷೆ ಬೇಡಿ ಸುಖದ ಹೊಳೆಯನ್ನೇ ಹರಸಿದ್ದಾರೆ.
ಅಂದು ತಮಗೆ ಸಿದ್ದಿಮಸೂದಖಾನನು ನೀಡಿದ ಉಪಚಾರವನ್ನು ಪ್ರೀತಿಯಿಂದಲೇ ಸ್ವೀಕರಿಸಿ ಸರ್ವಧರ್ಮಸಮಭಾವವನ್ನು ರಾಯರು ತೋರಿದ್ದರೆ ನಮ್ಮೀ ಅಭಿನವರಾಘವೇಂದ್ರತೀರ್ಥರೂ ದಲಿತಕೇರಿಗಳಿಗೆ ತೆರಳಿ ಅವರು ಪ್ರೀತಿಯಿಂದ ಮಾಡಿದ ಪಾದಪೂಜೆಗಳನ್ನು, ನೀಡಿದ ಫಲಗಳನ್ನು ಸ್ವೀಕರಿಸಿ ಸರ್ವಾದರಣೀಯರೆನಿಸಿದರು. ಅಂದು ರಾಯರು ದೇಶದಾದ್ಯಂತ ಸುತ್ತಾಡಿ ಸತ್ತತ್ವಪ್ರಸಾರವನ್ನು ಮಾಡುತ್ತ ಅನೇಕ ಗ್ರಾಮಗಳನ್ನು ಉಂಬಳಿಯಾಗಿ ಪಡೆದಿದ್ದರೆ, ನಮ್ಮ ಈ ವಿಶ್ವೇಶತೀರ್ಥರೂ ಪಾಂಡಿತ್ಯ, ವಿನಯ, ಸಂವಹನ ಕೌಶಲ, ಬುದ್ಧಿಮತ್ತೆ, ಸಮರ್ಥ ನಾಯಕತ್ತಾ್ವದಿಗುಣಗಳಿಂದ ನಮ್ಮ ದೇಶದ ಎಲ್ಲ ರಾಜ್ಯಗಳಲ್ಲೂ ಅಗತ್ಯ ಸ್ಥಳಗಳನ್ನು ಉಡುಗೊರೆಯಾಗಿ ಆಯಾ ಸರ್ಕಾರಗಳಿಂದ ಪಡೆದು ಅಲ್ಲಲ್ಲಿ ಉಚಿತ ವಿದ್ಯಾಕೇಂದ್ರಗಳನ್ನೂ, ವೃದ್ಧಾಶ್ರಮಗಳನ್ನೂ, ಅಸ್ಪತ್ರೆಗಳನ್ನೂ, ವಸತಿಗೃಹಗಳನ್ನೂ ಸ್ಥಾಪಿಸಿರುವರು. ‘ನಾನಾ ಜನಸ್ಯ ಶುಶ್ರೂಷಾ ಕರ್ತವ್ಯಾ ಕರವನ್ಮಿತೇಃ’ - ‘ದೀನರ ಸೇವೆಯೇ ನಾವು ಭಗವಂತನಿಗೆ ಕೊಡುವ ಕರ’ ಎಂದು ಅವರೇ ಹೇಳುವಂತೆ ಜನತಾಜನಾರ್ದನನ ಸೇವೆಯಲ್ಲಿ ತಮ್ಮನ್ನು ಪರಿಪೂರ್ಣವಾಗಿ ತೊಡಗಿಸಿಕೊಂಡಿದ್ದರು. ಇಂಥ ಮಹಾನ್ ಯತಿಗಳು ಗುರುರಾಯರಂತೆ ಬೃಂದಾವನದೊಳಗಿದ್ದರೂ ನಮ್ಮ ಕಷ್ಟಕಾರ್ಪಣ್ಯಗಳಿಗೆ ಸ್ಪಂದಿಸುತ್ತ ನಮ್ಮನ್ನು ಸನ್ಮಾರ್ಗದಲ್ಲಿ ನಡೆಸಲಿ.