

ಪೇಶಾವರ(ಪಾಕಿಸ್ತಾನ): ಪಾಕಿಸ್ತಾನದ ಪೇಶಾವರದಲ್ಲಿ ಮಸೀದಿಯೊಂದರಲ್ಲಿ ಶುಕ್ರವಾರ ಪ್ರಾರ್ಥನೆ ವೇಳೆ ಬಾಂಬ್ ಸ್ಫೋಟಗೊಂಡಿದ್ದು, 30ಕ್ಕೂ ಹೆಚ್ಚು ಜನರು ದುರ್ಮಣಕ್ಕೀಡಾಗಿದ್ದಾರೆ. 50ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯವಾಗಿದ್ದು, ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಗಾಯಾಳುಗಳ ಪೈಕಿ 10 ಜನರ ಸ್ಥಿತಿ ಚಿಂತಾಜನಕವಾಗಿದೆ.
ಶುಕ್ರವಾರವಾದ ಹಿನ್ನೆಲೆ ಎಂದಿನಂತೆ ವಿಸ್ಸಾ ಖ್ವಾನಿ ಬಜಾರ್ ಪ್ರದೇಶದಲ್ಲಿರುವ ಜಾಮಿಯಾ ಮಸೀದಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಮರು ಸೇರಿದ್ದರು. ಪ್ರಾರ್ಥನೆ ಮಾಡುತ್ತಿದ್ದ ವೇಳೆ ಬಾಂಬ್ ಸ್ಫೋಟಗೊಂಡಿದೆ.
ಪ್ರಾಥಮಿಕ ಮಾಹಿತಿ ಪ್ರಕಾರ ಮಸೀದಿಯೊಳಗೆ ಪ್ರವೇಶಿಸಲು ದಾಳಿಕೋರರಿಬ್ಬರು ಯತ್ನಿಸಿದ್ದು, ಈ ವೇಳೆ ತಡೆದ ಪೊಲೀಸರ ಮೇಲೆ ಆ ದಾಳಿಕೋರರು ಗುಂಡು ಹಾರಿಸಿದ್ದು, ನೋಡನೋಡುತ್ತಿದ್ದಂತೆ ಪ್ರಾರ್ಥನಾ ಮಂದಿರದಲ್ಲಿ ಬಾಂಬ್ ಸ್ಫೋಟಗೊಂಡಿದೆ.