ಆಧುನಿಕ ಚಿಕಿತ್ಸಾ ವಿಧಾನ ಅಗತ್ಯ

1
Published on

ಅಯೋಕ್ಕಾನ್​-24ನಲ್ಲಿ ಸಾಹೇ ವಿವಿಯ ಕುಲಾಧಿಪತಿ ಡಾ.ಜಿ.ಪರಮೇಶ್ವರ ಅಭಿಪ್ರಾಯ

ವಿಜಯವಾಣಿ ಸುದ್ದಿಜಾಲ ತುಮಕೂರು
ಮನುಷ್ಯನ ಕಿವಿ, ಮೂಗು, ಗಂಟಲಿನ ಅನೇಕ ಸಮಸ್ಯೆಗಳಿಗೆ ಸಮರ್ಪಕವಾದ ಆಧುನಿಕ ಚಿಕಿತ್ಸಾ ವಿಧಾನಗಳನ್ನು ಅಳವಡಿಸಿಕೊಳ್ಳುವ ಅವಶ್ಯಕತೆ ಇದೆ ಎಂದು ಗೃಹಸಚಿವ ಹಾಗೂ ಸಾಹೇ ವಿವಿಯ ಕುಲಾಧಿಪತಿ ಡಾ.ಜಿ.ಪರಮೇಶ್ವರ ಅಭಿಪ್ರಾಯಪಟ್ಟರು. ನಗರದ ಶ್ರೀ ಸಿದ್ಧಾರ್ಥ ವೈದ್ಯಕಿಯ ಆಸ್ಪತ್ರೆ ಮತ್ತು ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ 41ನೇ ರಾಜ್ಯ ಮಟ್ಟದ ಇಎನ್​ಟಿ ಸಮ್ಮೇಳನ "ಅಯೋಕ್ಕಾನ್​-24' ಉದ್ಘಾಟಿಸಿ ಮಾತನಾಡಿ, ಬ್ಯಾಕ್ಟೀರಿಯಲ್​ -ವೈರಲ್​ ರೋಗ ಲಕ್ಷಣ ಹೆಚ್ಚಾಗಿದ್ದು, ಇವುಗಳಿಗೆ ಚಿಕಿತ್ಸೆ ಕಂಡುಕೊಳ್ಳಬೇಕಿದೆ ಎಂದರು.


ಪ್ರತಿನಿತ್ಯ ಕಂಡು ಬರುವ ಕಿವಿ ಮೂಗು ಗಂಟಲಿನ ಸೂಕ್ಷ್ಮ ರೀತಿಯ ಕಾಯಿಲೆಗಳಿಗೆ ಶೇ.75ರಷ್ಟು ಜನರು ತುತ್ತಾಗುತ್ತಿದ್ದು, ಇವುಗಳಿಗೆ ಅನುಗುಣವಾಗಿ ಗುಣಾತ್ಮಕ ಪರಿಹಾರ ಕಂಡುಹಿಡಿಯುವ ನಿಟ್ಟಿನಲ್ಲಿ ಸಿದ್ಧಾರ್ಥ ಹೈಯರ್​ ಆಫ್​ ಎಜುಕೇಶನ್​ ಸಹಯೋಗದೊಂದಿಗೆ ನಡೆಯುತ್ತಿರುವ ರಾಜ್ಯಮಟ್ಟದ ಐಎನ್​ಟಿ ಸಮ್ಮೇಳನ ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಇತ್ತೀಚೆಗೆ ಹೆಚ್ಚಾಗುತ್ತಿರುವ ಬ್ಯಾಕ್ಟೀರಿಯಲ್​ ಮತ್ತು ವೈರಲ್​ ಡಿಸೀಸ್​ಗಳು ವೈದ್ಯರಿಗೂ ಸವಾಲಿನವಾಗಿವೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ರೋಗಗಳ ಬಗ್ಗೆ ಸಂಶೋಧನೆ ಮತ್ತು ಅಧ್ಯಯನ ನಡೆಯುತ್ತಿವೆ. ಮಾರಣಾಂತಿಕವಾಗಿ ಪರಿಣಮಿಸುವ ಈ ಕಾಯಿಲೆಗಳಿಗೆ ತಾಂತ್ರಿಕವಾಗಿ ಗುಣಪಡಿಸುವ ಚಿಕಿತ್ಸಾ ವಿಧಾನಗಳ ಅಳವಡಿಕೆ ಹೆಚ್ಚಾಗಬೇಕಾಗಿದೆ ಎಂದು ತಿಳಿಸಿದರು.


ಕಿವಿ ಮೂಗು ಗಂಟಲು ಸಂಬಂಧಿತ ಕಾಯಿಲೆಗಳಿಗೆ ಆವಿಷ್ಕಾರವಾದ ಔಷಧಗಳು ಚಿಕಿತ್ಸಾ ವಿಧಾನಗಳು ಉತ್ತಮ ರೀತಿಯಲ್ಲಿ ಸುಧಾರಿಸಬೇಕಾಗಿದೆ. ಸಮ್ಮೇಳನ ವಿಚಾರ ಸಂಕಿರಣ, ಚರ್ಚೆಗಳು ಸೇರಿದಂತೆ ಪ್ರತಿಷ್ಠಿತ ಆಸ್ಪತ್ರೆಗಳ ಇಎನ್​ಟಿ ನುರಿತ ವೈದ್ಯರುಗಳಿಂದ ಉತ್ತರ ಕಂಡುಕೊಳ್ಳಬೇಕಾಗಿದೆ. ಈ ಬಗ್ಗೆ ಇಂದಿನ ಯುವ ವೈದ್ಯರುಗಳಿಗೆ ಅರಿವು ಮೂಡಿಸಬೇಕಾಗಿದೆ. ಈಗಾಗಲೇ ಅನೇಕ ಯುವ ವೈದ್ಯರು ಅನೇಕ ಆವಿಷ್ಕಾರಗಳನ್ನು ನಡೆಸಿ ಹೊಸ ತಾಂತ್ರಿಕ ಚಿಕಿತ್ಸಾ ವಿಧಾನಗಳನ್ನು ಜಗತ್ತಿಗೆ ಪರಿಚಯಿಸಿದ್ದಾರೆ. ಈ ಪ್ರಯತ್ನಗಳು ಮುಂದುವರಿಯಬೇಕು ಎಂದರು.


ಅಯೋಕ್ಕಾನ್​ ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷ ಡಾ.ಶಂಕರ್​ ಬಿ.ಮೇದಿಕೇರಿ ಮಾತನಾಡಿ, ರಾಜ್ಯದ ಪ್ರತಿಷ್ಠಿತ ಆಸ್ಪತ್ರೆಗಳ ಇಎನ್​ಟಿ ನುರಿತ ವೈದ್ಯರುಗಳು ಆಗಮಿಸಿದ್ದು, ತುಮಕೂರಿನಲ್ಲಿಯೇ ರಾಜ್ಯಮಟ್ಟದ ಸಮ್ಮೇಳನ ನಡೆಯುತ್ತಿರುವುದು ಪ್ರಶಂಸನೀಯವಾಗಿದೆ. ಸಮ್ಮೇಳನದ ಸದುಪಯೋಗ ಪಡೆದುಕೊಳ್ಳುವಂತೆ ವೈದ್ಯರಲ್ಲಿ ವಿನಂತಿಸಿದರು. ಸಾಹೇ ವಿವಿಯ ಉಪಕುಲಪತಿ ಡಾ.ಬಿ.ಕೆ.ಲಿಂಗೇಗೌಡ, ಸಿದ್ಧಾರ್ಥ ವೈದ್ಯಕಿಯ ಕಾಲೇಜು ಪ್ರಾಚಾರ್ಯ ಡಾ.ಸಾಣಿಕೊಪ್ಪ, ಉಪಪ್ರಾಂಶುಪಾಲ ಡಾ.ಪ್ರಭಾಕರ್​, ಸಮ್ಮೇಳನ ಸಮಿತಿ ಸಂಚಾಲಕ ಡಾ.ಜ್ಯೋತಿ ಸ್ವರೂಪ್​, ಡಾ.ಕೆ.ಜಿ.ರಾಘವೇಂದ್ರ, ಡಾ.ಬಿ.ಎಸ್​.ಇಂದುಶೇಖರ್​ಸಿಂಗ್​, ಡಾ.ಸಿ.ಜಿ.ರವಿಕುಮಾರ್​, ಡಾ.ಜಿ.ಬಿ.ಮುನೀಶ್ವರ ಸೇರಿದಂತೆ ರಾಜ್ಯದ ವಿವಿಧ ಪ್ರತಿಷ್ಠಿತ ಆಸ್ಪತ್ರೆಗಳ ವೈದ್ಯರ ತಂಡ ಹಾಗೂ ಸಿಬ್ಬಂದಿಗಳು ಇದ್ದರು.

ಸಮ್ಮೇಳನದಲ್ಲಿ ಮಾಹಿತಿಗಾಗಿ ಮಳಿಗೆ
ಇಎನ್​ಟಿ ಸಂಬಂಧಿತ ಕಾಯಿಲೆಗಳ ಶಸ್ತ್ರಚಿಕಿತ್ಸೆಗೆ ಅನುಕೂಲವಾಗುವ ವೈದ್ಯಕಿಯ ಉಪಕರಣಗಳ ಮಳಿಗೆಗಳನ್ನು ತೆರೆಯಲಾಗಿತ್ತು. ವಿವಿಧ ಆಸ್ಪತ್ರೆಗಳ ವೈದ್ಯರುಗಳು ಮಳಿಗೆಗೆ ಭೇಟಿ, ಉಪಕರಣಗಳನ್ನು ಖರೀದಿಸಲು ಮುಂದಾಗಿದ್ದರು. ಅಯೋಕ್ಕಾನ್​-&24ರಲ್ಲಿ ವೈದ್ಯಕಿಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ವಿವಿಧ ಸ್ಪರ್ಧೆಗಳು, ಭಾಷಣಗಳು, ಆಹ್ವಾನಿತ ಮಾತುಕತೆಗಳು, ಚರ್ಚೆಗಳು, ವೈಜ್ಞಾನಿಕ ವಿಷಯ ಮಂಡನೆಗಳು, ವೈಜ್ಞಾನಿಕ ವೀಡಿಯೋ ಪ್ರಸ್ತುತಿ, ಇಪೋಸ್ಟರ್​ ಪ್ರಸ್ತುತಿ, ಏಕಲವ್ಯ ರಸಪ್ರಶ್ನೆ ,ಭಾಷಣಗಳು, ಆಹ್ವಾನಿತ ಮಾತುಕತೆಗಳು, ಪ್ಯಾನಲ್​ ಚರ್ಚೆಗಳು, ಮುಕ್ತ ಸಭೆಗಳು ನಾಲ್ಕು ದಿನಗಳ ವೈದ್ಯಕಿಯ ಸಮ್ಮೇಳನದಲ್ಲಿ ಹಮ್ಮಿಕೊಳ್ಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net