ಪಾಸ್​ಪೋರ್ಟ್​ ಪಡೆಯಲು ತಪ್ಪದ ಪರದಾಟ

pass prots
ಕೋಲಾರ ಜಿಲ್ಲೆಯ ಕೆಜಿಎಫ್​ ನಗರದಲ್ಲಿರುವ ಪಾಸ್​ ಪೋರ್ಟ್​ ಕೇಂದ್ರ.
Published on

ಕಿರುವಾರ ಎಸ್​. ಸುದರ್ಶನ್​ ಕೋಲಾರ
ಇತ್ತೀಚಿನ ದಿನಗಳಲ್ಲಿ ಸೇವೆ ಪಡೆಯಲು ಪಾಸ್​ಪೋರ್ಟ್​ ಪ್ರಮುಖ ದಾಖಲೆಯನ್ನಾಗಿ ಪರಿಗಣಿಸುತ್ತಿದ್ದು, ಹೊಸದಾಗಿ ಪಾಸ್​ಪೋರ್ಟ್​ ಪಡೆಯಲು ಪರದಾಟ ಶುರುವಾಗಿದೆ.

ವಿದೇಶಿ ಪ್ರವಾಸ ಕೈಗೊಳ್ಳಲು ಅವಶ್ಯಕವಾಗಿರುವ ಪಾಸ್​ಪೋರ್ಟ್​, ಆಧಾರ್​ ಕಾರ್ಡ್​ನಷ್ಟೇ ಮುಖ್ಯ ಗುರುತಿನ ಚೀಟಿಯಾಗಿದ್ದು, ವಿದೇಶಿ ಪ್ರವಾಸಕ್ಕೆ ಹೋಗುವ ಜಿಲ್ಲೆಯ ಜನಕ್ಕೆ ಸುಲಭವಾಗಿ ಪಾಸ್​ಪೋರ್ಟ್​ ಸಿಗಬೇಕು ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರವು 2019 ಫೆ 5ರಂದು ಜಿಲ್ಲೆಯ ಕೆಜಿಎ್​ ನಗರದ ಅಂಚೆ ಕಚೇರಿಯಲ್ಲಿ ಪಾಸ್​ಪೋರ್ಟ್​ ಸೇವಾ ಕೇಂದ್ರ ಆರಂಭಿಸಿತ್ತು. ಆದರೆ ಜಿಲ್ಲಾ ಕೇಂದ್ರ ಬಿಟ್ಟು ತಾಲೂಕು ಕೇಂದ್ರದಲ್ಲಿ ತೆರೆದಿರುವುದು ಗಡಿ ಗ್ರಾಮಗಳ ಜನತೆಗೆ ಅನನುಕೂಲವಾಗಿದೆ.
ಪಾಸ್​ಪೋರ್ಟ್​ ಸೇವಾ ಕೇಂದ್ರಗಳ ಮೂಲಕ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಪಾಸ್​ಪೋರ್ಟ್​ ವಿತರಿಸುತ್ತಿತ್ತು. ಇದೀಗ ಅಂಚೆ ಕಚೇರಿ ಮೂಲಕವೂ ಪಾಸ್​ಪೋರ್ಟ್​ ಪಡೆಯುವ ಅವಕಾಶ ಕಲ್ಪಿಸಿದ್ದು, ನಾಗರಿಕರಿಗೆ ಸುಲಭವಾಗಿ ದಾಖಲೆ ಲಭ್ಯವಾಗುತ್ತದೆ ಎಂಬ ನಿರೀೆಯಿತ್ತು. ಆದರೆ ಪಾಸ್​ಪೋರ್ಟ್​ ನೋಂದಣಿ ಮಾಡಿಸುವುದು, ದಾಖಲೆ ಪಡೆದುಕೊಳ್ಳುವುದು, ನವೀಕರಣ ಮಾಡಿಸುವುದು ಬಹಳಷ್ಟು ಸಮಯ ತೆಗೆದುಕೊಳ್ಳುತ್ತಿದೆ.
ಅಂಚೆ ಕಚೇರಿಯ ಸಾಮಾನ್ಯ ಸೇವಾ ಕೇಂದ್ರದಲ್ಲಿ ಅರ್ಜಿ ಸಲ್ಲಿಸುವ ಮೂಲಕ ಪಾಸ್​ಪೋರ್ಟ್​ ಪಡೆಯಬಹುದು. ದೇಶಾದ್ಯಂತ 424 ಅಂಚೆ ಕಚೇರಿಗಳಲ್ಲಿ ಪಾಸ್​ಪೋರ್ಟ್​ ಸೇವಾ ಕೇಂದ್ರ ಸ್ಥಾಪಿಸಲಾಗಿದ್ದು, ಆ ಪೈಕಿ ರಾಜ್ಯದಲ್ಲಿ 24 ಜಿಲ್ಲಾ ಕೇಂದ್ರಗಳಲ್ಲಿ ಪಾಸ್​ಪೋರ್ಟ್​ ಕೇಂದ್ರ ಕಾರ್ಯನಿರ್ವಹಿಸುತ್ತಿದೆ. ಆದರೆ ಕೋಲಾರ ಜಿಲ್ಲೆಯಲ್ಲಿ ಕೆಜಿಎಫ್​ ನಗರದ ಆಂಚೆ ಕಚೇರಿಯಲ್ಲಿ ಮಾತ್ರ ಪಾಸ್​ಪೋರ್ಟ್​ ಸೇವೆ ನೀಡಲಾಗುತ್ತಿದೆ. ಆದರೆ ಸಮರ್ಪಕವಾಗಿ ಸೇವೆ ದೊರೆಯದೆ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

  • ಜಿಲ್ಲಾಕೇಂದ್ರಕ್ಕೆ ಸ್ಥಳಾಂತರಿಸಲು ಒತ್ತಾಯ
    ರಾಜ್ಯದ ಬೇರೆ ಜಿಲ್ಲೆಗಳಲ್ಲಿ ಜಿಲ್ಲಾ ಕೇಂದ್ರದಲ್ಲೇ ಪಾಸ್​ಪೋರ್ಟ್​ ಸೇವಾ ಕೇಂದ್ರ ಕಾರ್ಯನಿರ್ವಹಿಸುತ್ತಿದೆ. ಇದರಿಂದಾಗಿ ತಾಲೂಕು, ಗ್ರಾಮಗಳಿಂದ ಕೇಂದ್ರಕ್ಕೆ ಬಂದು ಸೇವೆ ಪಡೆಯುವುದು ಸುಲಭವಾಗುತ್ತದೆ. ಆದರೆ ಜಿಲ್ಲಾ ಕೇಂದ್ರ ಬಿಟ್ಟು, ಕೆಜಿಎ್​ನಲ್ಲಿ ಇರುವುದರಿಂದ ಶ್ರೀನಿವಾಸಪುರ, ಕೋಲಾರ ತಾಲೂಕಿನ ಜನಕ್ಕೆ ತೊಂದರೆಯಾಗುತ್ತಿದೆ. ಆಂಧ್ರ ಗಡಿಯಿಂದ ತಮಿಳುನಾಡಿಗೆ ಹೋಗಿ ಬರುವಷ್ಟರಲ್ಲಿ ಹೆಚ್ಚು ಸಮಯ ಬೇಕಾಗುತ್ತದೆ. ಇದರಿಂದಾಗಿ ಕೆಜಿಎಫ್​ನಿಂದ ಕೋಲಾರ ಜಿಲ್ಲಾ ಕೇಂದ್ರಕ್ಕೆ ಪಾಸ್​ಪೋರ್ಟ್​ ಸೇವಾ ಕೇಂದ್ರ ಸ್ಥಳಾಂತರ ಮಾಡಬೇಕು ಎಂದು ಹಲವರು ಒತ್ತಾಯಯಿಸಿದ್ದಾರೆ.
  • ಶೇ.70ರಷ್ಟು ಪ್ರಗತಿ ಸಾಧನೆಯಿಲ್ಲ..?
    ವಾಸಸ್ಥಳ ಪ್ರಮಾಣ ಪತ್ರ, ಹುಟ್ಟಿದ ದಿನಾಂಕ ಸೇರಿ ವಿವಿಧ ದಾಖಲೆಗಳೊಂದಿಗೆ ಆನ್​ಲೈನ್​ನಲ್ಲಿ ಅರ್ಜಿ ಸಲ್ಲಿಸಬೇಕಿದೆ. ನಂತರ ಅರ್ಜಿ ಪರಿಶೀಲನೆ ಬಳಿಕ ವಿವಿಧ ಪ್ರಕ್ರಿಯೆ ನಡೆದು 30 ದಿನದಲ್ಲಿ ಪಾಸ್​ಪೋರ್ಟ್​ ಕೈ ಸೇರಲಿದೆ. ಒಂದು ದಿನಕ್ಕೆ 40 ಪಾಸ್​ಪೋರ್ಟ್​ ಆಪ್​ಲೋಡ್​ ಮಾಡಲು ಅವಕಾಶವಿದೆ. ಆದರೆ ಕೆಜಿಎ್​ನಲ್ಲಿ ಶೇ.70 ಪ್ರಗತಿ ಸಾಧನೆಯಾಗುತ್ತಿಲ್ಲ. ಪಾಸ್​ಪೋರ್ಟ್​ ಜತೆಗೆ ವೀಸಾ ಅಗತ್ಯ. ಪ್ರವಾಸ, ವ್ಯಾಪಾರ, ವಿದ್ಯಾಭ್ಯಾಸ, ಉದ್ಯೋಗ, ಸಮ್ಮೇಳನ ಸೇರಿ ಹಲವು ಕೆಲಸಗಳಿಗೆ ವೀಸಾ ಬೇಕು. ವಿದೇಶಕ್ಕೆ ಹೋಗಿ ಉಳಿದುಕೊಳ್ಳುವಷ್ಟು ದಿನಕ್ಕೂ ವಿದೇಶಾಂಗ ವ್ಯವಹಾರಗಳ ಸಚಿವಾಲಯದಿಂದ ಪಡೆದುಕೊಳ್ಳಬೇಕು.
  • ಸಬೂಬು, ನೆಪ ಹೇಳುವುದು ವಾಡಿಕೆ
    ಕೆಜಿಎ್​ನಲ್ಲಿರುವ ಪಾಸ್​ಪೋರ್ಟ್​ ಕೇಂದ್ರದ ಸಿಬ್ಬಂದಿಯೇ ಅರ್ಜಿದಾರರಿಗೆ ಸಮಯ ಹಾಗೂ ಟೋಕನ್​ ನೀಡಿ ಬರಲು ಹೇಳುತ್ತಾರೆ. ನಿಗದಿತ ಸಮಯಕ್ಕೆ ಹೋದರೂ ತಾಸುಗಟ್ಟಲೇ ಕಾಯಿಸಿ ಸತಾಯಿಸುತ್ತಾರೆ. ತಡ ಏಕೆ ಎಂದು ಪ್ರಶ್ನಿಸಿದರೆ ನಮಗೆ ಇರುವ ನಿಯಮವೇ ಹಾಗೆ ಎಂದು ಕೇಂದ್ರದಲ್ಲಿನ ನಿರ್ವಾಹಕ ಸಬೂಬು ಹೇಳುತ್ತಾರೆ. ಕೇಂದ್ರಕ್ಕೆ ಪ್ರತಿದಿನ 25 ರಿಂದ 30 ಮಂದಿ ಹೊಸ ಪಾಸ್​ಪೋರ್ಟ್​ ಹಾಗೂ ನವೀಕರಣಕ್ಕಾಗಿ ಆಗಮಿಸಿದರೂ ಯಾರಿಗೂ ಸಮಯಕ್ಕೆ ಸರಿಯಾಗಿ ಸೇವೆ ಸಿಗುತ್ತಿಲ್ಲ. ಅರ್ಜಿಗಳನ್ನು ವಿಲೇವಾರಿ ಮಾಡದೆ ಬಾಕಿ ಉಳಿಸಿಕೊಳ್ಳುತ್ತಾರೆ. ಇದರಿಂದಾಗಿ ಕಾರ್ಯ ಒತ್ತಡ ಹೆಚ್ಚಾಗುತ್ತದೆ. ಕಷ್ಟವನ್ನು ತಪ್ಪಿಸಿಕೊಳ್ಳಲು ಸರ್ವರ್​, ಸಿಬ್ಬಂದಿ ಕೊರತೆ, ಕಂಪ್ಯೂಟರ್​ ಸರಿಯಿಲ್ಲ ಎಂದು ನೆಪ ಹೇಳುವುದು ಸಾಮಾನ್ಯವಾಗಿದೆ.

ಕೋಟ್​….
ಪಾಸ್​ಪೋರ್ಟ್​ ನವೀಕರಣಕ್ಕಾಗಿ ಕೆಜಿಎ್​ನಲ್ಲಿರುವ ಸೇವಾ ಕೇಂದ್ರಕ್ಕೆ ಸಿಬ್ಬಂದಿ ಹೇಳಿದ ಸಮಯಕ್ಕೆ ಬೆಳಗ್ಗೆ 10.30ಕ್ಕೆ ಹೋಗಿದ್ದೆ, ಆದರೆ ಅಲ್ಲಿನ ಸಿಬ್ಬಂದಿ ನನಗೆ ದಾಖಲೆ ನೀಡಿದ್ದು ಮಧ್ಯಾಹ್ನ 1.45ಕ್ಕೆ. ತಡ ಯಾಕೆ ಮಾಡುತ್ತೀರ ಎಂದು ಕೇಳಿದರೆ ಸ್ಪಂದಿಸುವುದಿಲ್ಲ. ವಿನಾಕಾರಣ ಸಬೂಬು ಹೇಳುತ್ತಾರೆ.

- ಎನ್​.ನಾಗರಾಜ್​, ಪಾಸ್​ಪೋರ್ಟ್​ ಅರ್ಜಿದಾರ, ಕೋಲಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net