ನಾಪತ್ತೆಯಾಗಿದ್ದ ಹೆಣ್ಣುಮಗು; ಮರುದಿನ ಪಾಲಕರ ಮಡಿಲಿಗೆ

missing
Published on

ಬೆಂಗಳೂರು: ಮನೆಯ ಮುಂದೆ ಆಟವಾಡುವಾಗ ನಾಪತ್ತೆಯಾಗಿದ್ದ ಎರಡೂವರೆ ವರ್ಷದ ಹೆಣ್ಣುಮಗುವನ್ನು ವೈಯಾಲಿಕಾವಲ್ ಪೊಲೀಸರು ಪತ್ತೆಹಚ್ಚಿ ಪಾಲಕರ ಮಡಿಲು ಸೇರಿಸಿದ್ದಾರೆ.

ಹುಲಿಯೂರುದುರ್ಗ ಮೂಲದ ಸುಜಾತಾ ಎಂಬಾಕೆ ಮಗುವನ್ನು ಕರೆದುಕೊಂಡು ಹೋಗಿದ್ದಳು. ಈಕೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಮಾನಸಿಕ ಅಸ್ವಸ್ಥೆ ಎಂಬುದು ತಿಳಿದುಬಂದಿದೆ. ಆಕೆಯ ಕುಟುಂಬದವರನ್ನು ಠಾಣೆಗೆ ಕರೆಸಿ ಚಿಕಿತ್ಸೆ ಕೊಡಿಸುವಂತೆ ಸೂಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಲ್ಲೇಶ್ವರ ಪೈಪ್‌ಲೈನ್ ರಸ್ತೆ ನಿವಾಸಿ ದಿವ್ಯಾಭಾರತಿಗೆ ಇಬ್ಬರು ಮಕ್ಕಳಿದ್ದಾರೆ. ಗುರುವಾರ ಬೆಳಗ್ಗೆ ಮೊದಲ ಮಗುವನ್ನು ಶಾಲೆಗೆ ಕಳುಹಿಸಲು ತಯಾರಿ ಮಾಡುತ್ತಿದ್ದರು. 2ನೇ ಮಗು ಮನೆ ಬಳಿ ಆಟವಾಡುತ್ತಿದ್ದಾಗ ಏಕಾಏಕಿ ನಾಪತ್ತೆ ಆಗಿತ್ತು. ಮಗಳು ಕಾಣದೆ ಇದ್ದಾಗ ಪಾಲಕರು ಎಲ್ಲೆಡೆ ಹುಡುಕಾಡಿ ಕೊನೆಗೆ ವೈಯಾಲಿಕಾವಲ್ ಠಾಣೆಗೆ ಗುರುವಾರ ರಾತ್ರಿ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದರು. ಬಾಲಕಿ ಮನೆ ಮತ್ತು ಸುತ್ತಮುತ್ತಲ ಸಿಸಿ ಕ್ಯಾಮರಾಗಳನ್ನು ಪರಿಶೀಲನೆ ನಡೆಸಿದಾಗ ದೃಶ್ಯಾವಳಿ ಲಭ್ಯವಾಗಿದೆ.

ಮನೆ ಬಳಿ ಆಟವಾಡುತ್ತಿದ್ದ ಮಗು ಅರ್ಧ ಕಿ.ಮೀ. ಮುಂದಕ್ಕೆ ನಡೆದುಕೊಂಡು ಹೋಗಿದ್ದು, ವಾಪಸ್ ಬರಲು ದಾರಿ ಗೊತ್ತಾಗದೆ ಗಾಬರಿಗೊಂಡಿತ್ತು. ಇದೇ ಸಮಯಕ್ಕೆ ರಸ್ತೆಯಲ್ಲಿ ಬರುತ್ತಿದ್ದ ಸುಜಾತಾಳನ್ನು ಅಮ್ಮ ಎಂದು ಕೈಹಿಡಿದುಕೊಂಡಿತ್ತು. ಸುಜಾತಾ ಆ ಮಗುವನ್ನು ಕರೆದುಕೊಂಡು 1 ಕಿ.ಮೀ. ಮುಂದಕ್ಕೆ ತೆರಳಿದ್ದಳು. ಮಗುವನ್ನು ಕರೆದೊಯ್ಯಲು ಯಾರಾದರು ಬರಬಹುದು ಎಂದು ಕಾದು ನೋಡಿದ್ದಳು. ಆದರೆ, ಯಾರೊಬ್ಬರು ಬರಲಿಲ್ಲ. ಕೊನೆಗೆ ಮಧ್ಯಾಹ್ನ ಆ ಮಗುವಿಗೆ ಊಟ ಮಾಡಿಸಿ ತನ್ನ ಜತೆಗೆ ಇರಿಸಿಕೊಂಡಿದ್ದಳು. ರಾತ್ರಿ ಪರಿಚಿತರೊಬ್ಬರ ಮನೆಯಲ್ಲಿ ಮಗುವಿನೊಂದಿಗೆ ಉಳಿದುಕೊಂಡಿದ್ದಳು.

ಮತ್ತೊಂದಡೆ ಸಿಸಿ ಕ್ಯಾಮರಾ ದೃಶ್ಯಾವಳಿ ಆಧರಿಸಿ ಮಗು ಪತ್ತೆಗೆ ಪೊಲೀಸರು ಮುಂದಾಗಿದ್ದರು. ಮಹಿಳೆಯೊಬ್ಬರು ಮಗುವನ್ನು ಕರೆದುಕೊಂಡು ಹೋಗುತ್ತಿರುವ ದೃಶ್ಯ ಸೆರೆಯಾಗಿತ್ತು. ಇದರ ಆಧಾರದ ಮೇಲೆ ಪೊಲೀಸರು ಹುಡುಕಾಟ ಮುಂದುವರಿಸಿದಾಗ ಶುಕ್ರವಾರ ಬೆಳಗ್ಗೆ ಸುಜಾತಾ ಮಗುವನ್ನು ಕರೆದುಕೊಂಡು ದೇವಯ್ಯ ಪಾರ್ಕ್ ಬಳಿ ಬರುತ್ತಿದ್ದಳು. ಈ ಬಗ್ಗೆ ಮಾಹಿತಿ ಸಂಗ್ರಹಿಸಿದ ಪೊಲೀಸರು, ಸ್ಥಳಕ್ಕೆ ದೌಡಾಯಿಸಿ ಮಗುವನ್ನು ವಶಕ್ಕೆ ಪಡೆದಿದ್ದಾರೆ.

ಸುಜಾತಾಳನ್ನು ವಶಕ್ಕೆ ಪಡೆದು ಠಾಣೆಗೆ ಕರೆತಂದು ವಿಚಾರಣೆ ಮಾಡಿದಾಗ, ಮಾನಸಿಕ ಅಸ್ವಸ್ಥೆ ಎಂಬುದು ಗೊತ್ತಾಗಿದೆ. ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net