

ಜಾನಪದ ಭೀಷ್ಮ ಎಂಬ ಬಿರುದಾಂಕಿತ ಮತಿಘಟ್ಟ ಕೃಷ್ಣಮೂರ್ತಿ ಅವರು ಕನ್ನಡ ನಾಡಿನ ಜಾನಪದ ಸಂಗ್ರಾಹಕರಲ್ಲಿ ಅಗ್ರಗಣ್ಯರು. 1912ರ ಜು. 12ರಂದು ಹಾಸನ ಜಿಲ್ಲೆ ಹಳೆಬೀಡು ಹೋಬಳಿಯ ಮತಿಘಟ್ಟ ಎಂಬ ಹಳ್ಳಿಯಲ್ಲಿ ಲಿಂಗಣ್ಣಯ್ಯ-ಚೆನ್ನಮ್ಮ ದಂಪತಿಯ ಪುತ್ರನಾಗಿ ಜನಿಸಿದ ಕೃಷ್ಣಮೂರ್ತಿ, ಜಾನಪದ ಸಾಹಿತ್ಯ ಸಂಗ್ರಹಕ್ಕಾಗಿಯೇ ತಮ್ಮ ಬದುಕನ್ನು ಮುಡಿಪಾಗಿಟ್ಟ ಮಹನೀಯರು. ಗಾಂಧೀಜಿ ಅವರ ಭಾಷಣದ ಪ್ರಭಾವಕ್ಕೆ ಒಳಗಾಗಿದ್ದ ಕೃಷ್ಣಮೂರ್ತಿ ತಮ್ಮ ಇಂಟರ್ವಿುೕಡಿಯೆಟ್ ಶಿಕ್ಷಣದ ದಿನಗಳಿಂದಲೂ ಖಾದಿ ಧರಿಸುತ್ತಿದ್ದರು. ಗಾಂಧಿ ತತ್ವವನ್ನು ಬಲವಾಗಿ ನಂಬಿದ್ದರು. ತಮ್ಮ ಹಳ್ಳಿಯಲ್ಲೂ ಖಾದಿ ಪ್ರಚಾರ, ವಯಸ್ಕರ ಶಿಕ್ಷಣ, ಹಳ್ಳಿಯ ರಸ್ತೆ ನಿರ್ಮಾಣ ಮುಂತಾದ ಸಮಾಜ ಕಲ್ಯಾಣ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು.
1937ರ ನಂತರ ಬೆಂಗಳೂರಿಗೆ ಬಂದರು. ಆರ್. ಕಲ್ಯಾಣಮ್ಮ ಅವರು ನಡೆಸುತ್ತಿದ್ದ ‘ಸರಸ್ವತಿ’ ಪತ್ರಿಕೆಗೆ ಲೇಖನ ಬರೆಯಲು ಪ್ರಾರಂಭಿಸಿದರು. ನಂತರದ ದಿನಗಳಲ್ಲಿ ‘ವಿಮಾ ವಾಣಿಜ್ಯ’ ಪತ್ರಿಕೆಯ ಸಹಾಯಕ ಸಂಪಾದಕ, ‘ವಿಶ್ವ ಕರ್ನಾಟಕ’ ವಾರ ಪತ್ರಿಕೆ ಹಾಗೂ ‘ಕನ್ನಡಪ್ರಭ’ ಪತ್ರಿಕೆಯ ಉಪಸಂಪಾದಕರಾಗಿ ಕಾರ್ಯ ನಿರ್ವಹಿಸಿದರು. 1942ರಲ್ಲಿ ‘ಮಯೂರ’ ಎಂಬ ಮಾಸಪತ್ರಿಕೆಯನ್ನು ಸ್ವತಂತ್ರವಾಗಿ ಸಂಪಾದಿಸಿ ಪ್ರಕಟಿಸಿದರು. ಇದೇ ಸಂದರ್ಭದಲ್ಲಿ ಸ್ವಾತಂತ್ರ್ಯ ಚಳವಳಿಯಲ್ಲಿಯೂ ಭಾಗವಹಿಸಿ ಹಾಸನದಲ್ಲಿ ಜೈಲುವಾಸ ಅನುಭವಿಸಿದರು.
ಅವರಿಗೆ ಬಾಲ್ಯದಿಂದಲೇ ಜನಪದ ಗೀತೆಗಳ ಬಗ್ಗೆ ಅಪಾರ ಒಲವಿತ್ತು. ತಮ್ಮ ತಾಯಿ ಚೆನ್ನಮ್ಮ ಮತ್ತಿತರ ಗ್ರಾಮೀಣ ಹೆಂಗಳೆಯರಿಂದ ಜಾನಪದ ಗೀತೆಗಳನ್ನು ಹಾಡಿಸಿ, ಕಲಿತು ಸಂಗ್ರಹ ಕಾರ್ಯವನ್ನು ಪ್ರಾರಂಭಿಸಿದ್ದರು. ಇವರು ‘ಗೃಹಿಣೀ ಗೀತೆಗಳು’ ಸಂಪುಟ-1 ಮತ್ತು ‘ಗೃಹಿಣೀ ಗೀತೆಗಳು’ ಸಂಪುಟ-2 ಎಂಬ 1000 ಪುಟಗಳಿಗೂ ಮೀರಿದ ಎರಡು ಬೃಹತ್ ಜಾನಪದ ಗ್ರಂಥಗಳನ್ನು ಸಂಗ್ರಹಿಸಿ ಪ್ರಕಟಿಸಿದ್ದಾರೆ.
ಪಚ್ಚೆತೆನೆ (ಕಥಾಗುಚ್ಛ), ಮರುಗಿ, ಸವೋದಯ (ಕಾದಂಬರಿ), ಗಂಡನ ಪೂಜೆ, ಹೊಂಬಾಳೆ, ಕಲ್ಯಾಣಿ (ರೇಡಿಯೋ ನಾಟಕಗಳು), ಹೊಸಹಳ್ಳಿ, ಭರತಪ್ಪನ ಸೊಂಟಕ್ಕೆ ಗಂಟೆ (ನಾಟಕಗಳು), ಶಕುನದ ಹಕ್ಕಿ ಮತ್ತಿತರ ಕಥೆಗಳು ಇನ್ನೂ ಮುಂತಾದ 58ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. 1950ರಲ್ಲಿ ‘ಕಳಸಾಪುರದ ಹುಡುಗರು’ ಎಂಬ ಪ್ರಪ್ರಥಮ ಮಕ್ಕಳ ಕಾದಂಬರಿ ರಚಿಸಿದ ಹೆಗ್ಗಳಿಕೆ ಇವರದು. ಅನೇಕ ಮುದ್ರಣಗಳನ್ನು ಕಂಡ ಈ ಪುಸ್ತಕದ ಬಗ್ಗೆ 1952ರಲ್ಲಿ ಆಗಿನ ಶಿಕ್ಷಣ ಸಚಿವರು ಸ್ವತಃ ಆಸಕ್ತಿ ತೋರಿಸಿ, ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಉಪ ಪಠ್ಯಪುಸ್ತಕವಾಗಿ ನಿಗದಿಪಡಿಸಿದ್ದರು. ಇದು ಈ ಕಾದಂಬರಿಯ ಮಹತ್ವ, ಮೌಲ್ಯ ಮತ್ತು ಪ್ರಸಿದ್ಧಿಗೆ ಸಾಕ್ಷಿಯಾಗಿದೆ.
ಇದಲ್ಲದೆ ಸುಮಾರು 4000 ಜಾನಪದ ಹಾಡುಗಳು ಮತ್ತು ಸುಮಾರು 150 ಕಥೆಗಳನ್ನು ಇವರು ಸಂಗ್ರಹಿಸಿದ್ದಾರೆ. ಅವು ಇನ್ನೂ ಅಪ್ರಕಟಿತ ಬರಹಗಳು. ಅವರ ಎಲ್ಲಾ ಕಾರ್ಯಗಳಲ್ಲೂ ಸಹಧರ್ವಿುಣಿ ಲಲಿತಮ್ಮ ಮತ್ತು ಜ್ಯೇಷ್ಠ ಪುತ್ರಿ ದಿ. ಉಮಾದೇವಿ ಅವರ ಸಹಕಾರ ಅಪಾರ. ಬೆಂಗಳೂರಿನಲ್ಲಿ ಆಕಾಶವಾಣಿ ಪ್ರಾರಂಭವಾಗುವುದಕ್ಕೂ ಮುನ್ನ ಚೆನ್ನೈನ ಆಕಾಶವಾಣಿಯಲ್ಲಿ ಪಿ. ಕಾಳಿಂಗರಾವ್ ಮತ್ತು ಸಂಗಡಿಗರಿಗೆ ಜಾನಪದ ಗೀತೆಗಳನ್ನು ಹೇಳಿಕೊಟ್ಟು ಹಾಡಿಸಿದ ಹೆಗ್ಗಳಿಕೆ ಕೃಷ್ಣಮೂರ್ತಿ ಅವರದು. ಅಷ್ಟೇ ಅಲ್ಲ, ಸುಮಾರು 70ಕ್ಕೂ ಹೆಚ್ಚು ರೇಡಿಯೋ ಕಾರ್ಯಕ್ರಮಗಳನ್ನು ನೀಡಿದ ಕನ್ನಡಿಗರಲ್ಲಿ ಕೃಷ್ಣಮೂರ್ತಿ ಮೊದಲಿಗರು. ನಂತರದ ಕಾಲಘಟ್ಟದಲ್ಲಿ ಬೆಂಗಳೂರು ಆಕಾಶ ವಾಣಿಯಲ್ಲಿಯೂ ಅನೇಕ ಪ್ರಬುದ್ಧ ಕಾರ್ಯಕ್ರಮಗಳನ್ನು ನೀಡಿದರು. ಮಕ್ಕಳ ಕಾರ್ಯಕ್ರಮಗಳನ್ನೂ ನಡೆಸಿಕೊಟ್ಟರು.
ಬಿ.ಕೆ. ಸುಮಿತ್ರಾ, ರತ್ನಮಾಲಾ ಪ್ರಕಾಶ್ ಮುಂತಾದ ಸಂಗೀತ ವಿದ್ವಾಂಸರಿಗೆ ಜಾನಪದ ಗೀತೆಗಳ ಗಾಯನ ಹೇಳಿ ಕೊಟ್ಟು, ಅವರೊಡನೆ ತಮ್ಮ ಮಕ್ಕಳಿಗೂ ಕಲಿಸಿ ‘ಉಯ್ಯಾಲೆ’, ‘ಝೇಂಕಾರ’ ಎಂಬ ಎರಡು ಧ್ವನಿ ಸುರುಳಿಗಳನ್ನು ಹೊರತರುವ ಸಾಹಸವನ್ನೂ ಕೃಷ್ಣಮೂರ್ತಿ ಮಾಡಿದ್ದಾರೆ. ಅನೇಕ ಸಂಘ ಸಂಸ್ಥೆಗಳಿಂದ, ಜಾನಪದ ಅಕಾಡೆಮಿಯಿಂದ ಮತ್ತು ಕರ್ನಾಟಕ ಸರ್ಕಾರದಿಂದಲೂ ಹಲವು ಪ್ರಶಸ್ತಿಗಳು ಕೃಷ್ಣಮೂರ್ತಿ ಅವರನ್ನು ಹುಡುಕಿಕೊಂಡು ಬಂದವು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ಜಾನಪದ ರತ್ನ ಪ್ರಶಸ್ತಿ ಮುಂತಾದ ಹತ್ತು ಹಲವು ಪುರಸ್ಕಾರಗಳು ಅವರ ಮುಕುಟವೇರಿವೆ.
65ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ, ಬೇಲೂರು, ಹಾಸನ, ಧಾರವಾಡ ಮುಂತಾದೆಡೆ ನಡೆದ ಜಾನಪದ ಸಮ್ಮೇಳನದ ಅಧ್ಯಕ್ಷತೆ, ಕಾರ್ಯಾಧ್ಯಕ್ಷ ಪದವಿ ಹೀಗೆ ಹತ್ತಾರು ಪ್ರತಿಷ್ಠಿತ ಸಮ್ಮೇಳನಗಳ ಅಧ್ಯಕ್ಷ ಸ್ಥಾನ ಗಳಿಸಿದ ಹಿರಿಮೆ ಅವರದು. ಮಕ್ಕಳು ಮೊಮ್ಮಕ್ಕಳು, ನೆಂಟರಿಂದ ತುಂಬಿದ ಮನೆಯಲ್ಲಿ ತುಂಬು ಜೀವನ ನಡೆಸಿದ ಕೃಷ್ಣಮೂರ್ತಿ ಅವರು 2006ರ ಜು. 27ರಂದು ಸ್ವರ್ಗಸ್ಥರಾದರು. ತಮ್ಮ ಅಪಾರ ಜ್ಞಾನ ಸಂಪತ್ತನ್ನು ಅವರು ನಮ್ಮೊಂದಿಗೆ ಬಿಟ್ಟು ಹೋಗಿದ್ದಾರೆ.