

ಶಿವಮೊಗ್ಗ: ಕಾಯಿಲೆಗಳಿಗೆ ಬರೀ ಔಷಧ ಕೊಡುವುದು ವೈದ್ಯರ ಕೆಲಸವಲ್ಲ. ಅದಕ್ಕೆ ನೂರಾರು ವೈದ್ಯರಿದ್ದಾರೆ. ಆದರೆ ಬದುಕಲು ರೋಗಿಗಳಿಗೆ ಅದಮ್ಯ ಶಕ್ತಿ ತುಂಬುವರೇ ನಿಜವಾದ ವೈದ್ಯರು. ಆ ಕೆಲಸವನ್ನು ಡಾ. ಪಿ.ನಾರಾಯಣ ಆರು ದಶಕದಿಂದ ಮಾಡಿಕೊಂಡು ಬಂದಿದ್ದಾರೆ ಎಂದು ಪದ್ಮಶ್ರೀ ಪುರಸ್ಕೃತ, ಸಿನಿಮಾ ನಿರ್ದೇಶಕ ಗಿರೀಶ್ ಕಾಸರವಳ್ಳಿ ಶ್ಲಾಘಿಸಿದರು.
ನಗರದ ಕುವೆಂಪು ರಂಗಮಂದಿರದಲ್ಲಿ ಶನಿವಾರ ಡಾ. ಪಿ.ನಾರಾಯಣ ಅಭಿನಂದನಾ ಸಮಿತಿಯಿಂದ ಆಯೋಜಿಸಿದ್ದ ಹಿರಿಯ ವೈದ್ಯ, ಎನ್‌ಇಎಸ್ ಸಹ ಕಾರ್ಯದರ್ಶಿ ಡಾ. ಪಿ.ನಾರಾಯಣ ಅವರಿಗೆ ಜನ ವೈದ್ಯನ ಮನ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿ, ರೋಗಿಗಳ ಮನಸ್ಸಿನಲ್ಲಿ ಬದುಕುವ ಶಕ್ತಿ, ಆತ್ಮ ಸ್ಥೈರ್ಯ ತುಂಬುವುದು ಮುಖ್ಯ. ಇಂದು ಎಲ್ಲ ಕ್ಷೇತ್ರಗಳಂತೆ ವೈದ್ಯಕೀಯ ಕ್ಷೇತ್ರವೂ ಉದ್ಯಮವಾಗಿ ಪರಿವರ್ತನೆಯಾಗಿದೆ. ವೈದ್ಯರಿಗೆ ರೋಗಿಗಳ ಜತೆ ಮಾನವೀಯ ಸಂಬಂಧವೇ ಇರುವುದಿಲ್ಲ. ಅದಕ್ಕೆ ಪರ್ಯಾಯವಾಗಿ ಡಾ. ನಾರಾಯಣ ಇದ್ದಾರೆ. ಅವರು ಮಾತನಾಡುವಾಗಲೇ ರೋಗಿಗಳ ಅರ್ಧ ಕಾಯಿಲೆ ಗುಣಮುಖ ಆಗಿರುತ್ತದೆ ಎಂದು ತಿಳಿಸಿದರು. ಅಭಿವೃದ್ಧಿ ರಾಷ್ಟ್ರಗಳಲ್ಲಿ ಶಿಕ್ಷಣ ಮತ್ತು ಶಿಕ್ಷಣ ಕ್ಷೇತ್ರ ಸರ್ಕಾರದ ಅಧೀನದಲ್ಲಿರುತ್ತದೆ. ಆದರೆ ಭಾರತದಂತಹ ರಾಷ್ಟ್ರಗಳು ಮಾತ್ರ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರ ಪ್ರತ್ಯೇಕಿಸಿ ಉದ್ಯಮವನ್ನಾಗಿ ಮಾಡಿವೆ. ಸರ್ಕಾರದಿಂದ ಸಿಗಬೇಕಾದ ಮನ್ನಣೆ ಡಾ. ನಾರಾಯಣ ಅವರಿಗೆ ಇನ್ನೂ ಸಿಕ್ಕಿಲ್ಲ. ಅವರ ಸಾಧನೆ, ಶ್ರಮವನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಮೆ ಪರಿಚಯಿಸಿದರೆ ರಾಜ್ಯೋತ್ಸವ ಮತ್ತು ಪದ್ಮಶ್ರೀ ಪುರಸ್ಕಾರಗಳು ಲಭಿಸುವ ಕಾಲ ದೂರವಿಲ್ಲ ಎಂದು ಹೇಳಿದರು. ಪದ್ಮಶ್ರೀ ಪುರಸ್ಕೃತ, ಶೃಂಗೇರಿ ಶ್ರೀ ಶಾರದಾ ಪೀಠದ ಆಡಳಿತಾಧಿಕಾರಿ ವಿ.ಆರ್.ಗೌರಿಶಂಕರ್, ಎನ್‌ಇಎಸ್ ಅಧ್ಯಕ್ಷ ಜಿ.ನಾರಾಯಣರಾವ್ ಮಾತನಾಡಿದರು. ಸಮಿತಿ ಸಂಚಾಲಕ ಡಾ. ಎಚ್.ಎಸ್.ನಾಗಭೂಷಣ್, ಹಿರಿಯ ವೈದ್ಯ ಡಾ. ಪಿ.ನಾರಾಯಣ ಉಪಸ್ಥಿತರಿದ್ದರು.
ಕುಟುಂಬದ ವೈದ್ಯರೊಂದಿಗಿನ ಆತ್ಮೀಯತೆ ನಿಜಕ್ಕೂ ಸಂಜೀವಿನಿ ಇದ್ದಂತೆ. ಸಮಾಜದ ಎಷ್ಟು ಹದಗೆಟ್ಟಿದೆ ಎಂಬುದನ್ನು ಊಹಿಸಲು ಸಾಧ್ಯವಿಲ್ಲ. ನಮ್ಮ ಹೊಸ ತಲೆಮಾರಿನ ಮಕ್ಕಳಿಗೆ ಯಾವ ಆದರ್ಶಗಳನ್ನು ಬಿಟ್ಟು ಹೋಗುತ್ತಿದ್ದೇವೆ ಎಂಬ ಆತಂಕ ಕಾಡುತ್ತಿದೆ. ಅಂತಹ ಆತಂಕಗಳ ನಡುವೆ ಭರವಸೆಯ ಬೆಳಕಾಗಿ ನಿಲ್ಲುವವರು ಡಾ. ನಾರಾಯಣ ಅವರಂತಹ ವ್ಯಕ್ತಿತ್ವಗಳು. - ವಿ.ಆರ್.ಗೌರಿಶಂಕರ್, ಶೃಂಗೇರಿ ಶ್ರೀ ಶಾರದಾ ಪೀಠದ ಆಡಳಿತಾಧಿಕಾರಿ