ವಿವಾಹಿತ ಮಹಿಳೆಯ ಹಿಂದೆ ಬಿದ್ದಿದ್ದವನಿಗೆ ಇರಿತ

Crime Logo
Published on

ಬೆಂಗಳೂರು: ವಿವಾಹಿತ ಮಹಿಳೆಯ ಹಿಂದೆ ಬಿದ್ದು ಕಾಟ ಕೊಡುತ್ತಿದ್ದ ಆರೋಪದ ಮೇರೆಗೆ ಆಟೋ ಚಾಲಕನಿಗೆ ಮಹಿಳೆಯ ಪತಿ ಹಾಗೂ ಸಹೋದರ ಚಾಕುವಿನಿಂದ ಇರಿದು ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ನಾಯಂಡಹಳ್ಳಿ ಪಂತರಪಾಳ್ಯದಲ್ಲಿ ಈ ಘಟನೆ ನಡೆದಿದೆ. ಹಲ್ಲೆಗೊಳಗಾಗಿರುವ ಕಾರ್ತಿಕ್ ಆಸ್ಪತ್ರೆಗೆ ದಾಖಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಹೊಸಗುಡ್ಡದಹಳ್ಳಿಯ ಕಾರ್ತಿಕ್, ಪಂತರಪಾಳ್ಯದ ವಿವಾಹಿತ ಮಹಿಳೆಯ ಹಿಂದೆ ಬಿದ್ದಿದ್ದ. ಒಂದು ಮಗುವಿನ ತಾಯಿಯಾಗಿರುವ ಆ ಮಹಿಳೆಯು ಬುದ್ಧಿ ಹೇಳಿದರೂ ಕಾರ್ತಿಕ್, ಸದಾ ಅವರನ್ನು ಹಿಂಬಾಲಿಸಿ ಪ್ರೀತಿಸುವಂತೆ ಪೀಡಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಕಾರ್ತಿಕ್, ಆಗಾಗ್ಗೆ ಮಹಿಳೆಯ ಮನೆ ಬಳಿ ಹೋಗಿ ಅಸಭ್ಯವಾಗಿ ವರ್ತಿಸುತ್ತಿದ್ದ. ಮಹಿಳೆ ಎಲ್ಲೇ ಹೋದರೂ ಅವರನ್ನು ಹಿಂಬಾಲಿಸಿಕೊಂಡು ಹೋಗಿ ಮಾತನಾಡುತ್ತಿದ್ದ. ಈ ವಿಚಾರ ತಿಳಿದ ಮಹಿಳೆಯ ಪತಿ ಸತೀಶ್ ಮತ್ತು ಸಹೋದರ ವಿನೋದ್, ಕಾರ್ತಿಕ್‌ಗೆ ಬುದ್ಧಿ ಹೇಳಿದ್ದರು. ಆದರೂ ಆತ ತನ್ನ ಕೆಟ್ಟ ಚಾಳಿಯನ್ನು ಮುಂದುವರಿಸಿದ್ದ ಎನ್ನಲಾಗಿದೆ. ಮಂಗಳವಾರ ಕಾರ್ತಿಕ್ ಮತ್ತೆ ಮಹಿಳೆಯ ಮನೆ ಬಳಿ ಹೋಗಿದ್ದ. ಆಗ ಮನೆಯಲ್ಲೇ ಇದ್ದ ಸತೀಶ್ ಮತ್ತು ವಿನೋದ್, ಸ್ನೇಹಿತ ಸೂರ್ಯ ಜತೆ ಸೇರಿ ಕಾರ್ತಿಕ್ ಮೇಲೆ ಹಲ್ಲೆ ನಡೆಸಿ ಹೊಟ್ಟೆ ಹಾಗೂ ತಲೆಯ ಭಾಗಕ್ಕೆ ಚಾಕು ಇರಿದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆ ಸಂಬಂಧ ಕಾರ್ತಿಕ್ ಸಹೋದರ ದೂರು ನೀಡಿದ್ದು. ದೂರಿನನ್ವಯ ಬಂಧನ ಭೀತಿಯಿಂದ ಪರಾರಿಯಾಗಿರುವ ಸತೀಶ್, ವಿನೋದ್ ಮತ್ತು ಸೂರ್ಯ ಪತ್ತೆಗೆ ಶೋಧ ನಡೆಸಿದಲಾಗಿದೆ. ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net