ದಿನನಿತ್ಯ ಪತ್ನಿ ಜತೆ ಜಗಳದಿಂದ ಬೇಸತ್ತ ಆತ ಫ್ಲೈಓವರ್​ನಿಂದ ಜೋತು ಬಿದ್ದು ಆತ್ಮಹತ್ಯೆಗೆ ಯತ್ನಿಸಿದ... ಮುಂದೇನಾಯಿತು...?

flyover
Published on

ನವದೆಹಲಿ: ಪ್ರತಿದಿನ ಒಂದಿಲ್ಲೊಂದು ವಿಷಯಕ್ಕೆ ಪತ್ನಿ ಜಗಳ ತೆಗೆಯುತ್ತಿದ್ದರಿಂದ ಬೇಸತ್ತ 32 ವರ್ಷದ ಆತ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದೆ. ಲಾಕ್​ಡೌನ್​ನಿಂದಾಗಿ ನಿರ್ಜನವಾಗಿರುವ ಫ್ಲೈಒವರ್​ ಮೇಲೆ ಹೋಗಿ ರಾತ್ರಿ 9 ಗಂಟೆಯಲ್ಲಿ ಸೇತುವೆಯ ತಡೆಗೋಡೆಯ ರೇಲಿಂಗ್​ ಹಿಡಿದು ಜೋತುಬಿದ್ದ.... ಮುಂದೇನಾಯಿತು?

ಸರಿಯಾಗಿ ಅದೇ ಸಮಯಕ್ಕೆ ಬೈಕ್​ ಪೆಟ್ರೋಲಿಂಗ್​ ಮೇಲೆ ಬಂದ ಇಬ್ಬರು ಪೊಲೀಸರು ಫ್ಲೈಓವರ್​ ತಡೆಗೋಡೆಯಿಂದ ಜೋತು ಬಿದ್ದಿದ್ದ ಈತನನ್ನು ಗಮನಿಸಿದರು. ತಕ್ಷಣವೇ ಹತ್ತಿರದಲ್ಲೇ ನಾಕಾಬಂದಿ ಕಾರ್ಯದಲ್ಲಿ ನಿರತರಾಗಿದ್ದ ತಮ್ಮ ಮೂವರು ಸಹೋದ್ಯೋಗಿಗಳನ್ನು ಫ್ಲೈಓವರ್​ನ ಕೆಳಭಾಗಕ್ಕೆ ಕರೆಯಿಸಿಕೊಂಡರು.

ಹಾಗೆ ಬಂದ ಮೂವರು ಸಿಬ್ಬಂದಿ, ಅದೇ ಮಾರ್ಗದಲ್ಲಿ ಕಸ ತುಂಬಿಕೊಂಡು ಬಂದ ದೆಹಲಿ ಮುನ್ಸಿಪಲ್​ ಟ್ರಕ್​ ಅನ್ನು ವ್ಯಕ್ತಿ ಜೋತು ಬಿದ್ದಿದ್ದ ಸ್ಥಳದ ಕೆಳಗೆ ನಿಲ್ಲಿಸಿ, ಬಿದ್ದರೂ ಆತನ ಪ್ರಾಣಕ್ಕೆ ಅಪಾಯವಾಗದಂತೆ ಮುನ್ನೆಚ್ಚರಿಕೆ ಕೈಗೊಂಡರು.

ಬಳಿಕ ಫ್ಲೈಓವರ್​ ಮೇಲಿದ್ದ ಇಬ್ಬರು ಪೊಲೀಸರು, ಜೋತು ಬಿದ್ದಿದ್ದ ವ್ಯಕ್ತಿಯ ಕೈಗಳನ್ನು ಹಿಡಿದು ಮೇಲೆತ್ತಿ ಆತನ ಪ್ರಾಣ ಕಾಪಾಡಿದರು. ನಂತರ ವಿಚಾರಿಸಿದಾಗ, ಜಗಳಗಂಟಿ ಪತ್ನಿಯ ವೃತ್ತಾಂತ ವಿವರಿಸಿದನಂತೆ.

ಇದಾಗಿದ್ದು ದೆಹಲಿಯಲ್ಲಿ. ಆದರೆ ಯಾವ ಫ್ಲೈಓವರ್​ ಮೇಲೆ ಎಂಬ ಮಾಹಿತಿಯನ್ನು ದೆಹಲಿ ಪೊಲೀಸರು ಬಹಿರಂಗಪಡಿಸಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net