ಚಾಲನೆಗೊಳ್ಳದ ಯಂತ್ರಧಾರೆ ಯಂತ್ರ!

krushi yanthradhare
ಕೇಂದ್ರದಲ್ಲೆ ತುಕ್ಕು ಹಿಡಿಯುತ್ತಿರುವ ಯಂತ್ರಗಳು.
Published on

ಕಿರುವಾರ ಎಸ್​.ಸುದರ್ಶನ್​ ಕೋಲಾರ

ಕೃಷಿ, ತೋಟಗಾರಿಕೆ ಚಟುವಟಿಕೆಗಳಿಗೆ ಉತ್ತೇಜನ ನೀಡಲು ಸರ್ಕಾರ ಜಾರಿಗೆ ತಂದಿರುವ ಕೃಷಿ ಯಂತ್ರಧಾರೆ ಯೋಜನೆಯಡಿ ತೆರೆಯಲಾಗಿದ್ದ 21 ಕೇಂದ್ರಗಳು ಸ್ಥಗಿತಗೊಂಡಿದ್ದು, ಯೋಜನೆಯ ಉದ್ದೇಶವೇ ಬುಡಮೇಲಾದಂತಿದೆ.

ಕೃಷಿ ಯಂತ್ರೋಪಕರಣ ಬಾಡಿಗೆ ಆಧಾರದಲ್ಲಿ ರೈತರಿಗೆ ದೊರಕಿಸಿಕೊಡುವ ಉದ್ದೇಶದಿಂದ ಪ್ರತಿ ಹೋಬಳಿ ಕೇಂದ್ರದಲ್ಲಿ ಕೃಷಿ ಯಂತ್ರಧಾರೆ ಕೇಂದ್ರಗಳನ್ನು ಕೃಷಿ ಇಲಾಖೆಯಡಿ 2014&15ರಲ್ಲೇ ಆಗಿನ ಕೃಷಿ ಸಚಿವ ಕೃಷ್ಣಬೈರೇಗೌಡ ಅವಧಿಯಲ್ಲಿ ಸ್ಥಾಪನೆ ಮಾಡಲಾಗಿತ್ತು. ಅಂತೆಯೇ ಜಿಲ್ಲೆಯಲ್ಲಿ ಸುಮಾರು 27 ಕೇಂದ್ರ ಸ್ಥಾಪನೆ ಮಾಡಲಾಗಿದ್ದು, ಆ ಪೈಕಿ ಒಂದು ಸಂಸ್ಥೆ 12, ಇನ್ನೊಂದು ಸಂಸ್ಥೆ 9 ಕೇಂದ್ರ ಸ್ಥಗಿತಗೊಳಿಸಿದ್ದು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಸ್ಥೆ 6 ಕೇಂದ್ರ ನಡೆಸಿಕೊಂಡು ಬರುತ್ತಿದೆ.

ಸಣ್ಣ ಮತ್ತು ಮಧ್ಯಮ ವರ್ಗದ ರೈತರಿಗೆ ಕಡಿಮೆ ಬಾಡಿಗೆ ದರದಲ್ಲಿ ಕೃಷಿ ಯಂತ್ರೋಪಕರಣ ಒದಗಿಸುವ ಮೂಲಕ ಕೃಷಿ ಚಟುವಟಿಕೆಗಳಿಗೆ ಅನುಕೂಲ ಮಾಡಿಕೊಡುವುದು, ಹೆಚ್ಚಿನ ಇಳುವರಿ ಪಡೆಯಲು ಸಹಾಯ ಮಾಡುವುದು ಯೋಜನೆಯ ಪ್ರಮುಖ ಉದ್ದೇಶ. ಆದರೆ, ಗುತ್ತಿಗೆ ಪಡೆದ ಖಾಸಗಿ ಸಂಸ್ಥೆಯವರು ಸಮರ್ಪಕ ನಿರ್ವಹಣೆ ಮಾಡದೆ ಕೇಂದ್ರಗಳನ್ನು ಸ್ಥಗಿತಗೊಳಿಸಿದ್ದಾರೆ. ಸರಿಯಾದ ಸಮಯಕ್ಕೆ ಕೃಷಿ ಇಲಾಖೆ ಅಧಿಕಾರಿಗಳು ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡದಿರುವುದರಿಂದ ಯೋಜನೆಯು ಹಳ್ಳ ಹಿಡಿಯಲು ಕಾರಣವಾಗಿದೆ.

ರಾಜ್ಯ ಸರ್ಕಾರದ ಶೇ.70 ಮತ್ತು ಖಾಸಗಿ ಸಂಸ್ಥೆಯ ಶೇ.30 ಸಹಭಾಗಿತ್ವದಲ್ಲಿ ಕೃಷಿ ಯಂತ್ರಧಾರೆ ಕೇಂದ್ರಗಳನ್ನು ತೆರೆಯಲಾಗಿತ್ತು. ರೈತರಿಗೆ ಅಗತ್ಯವಿರುವ ಯಂತ್ರಗಳನ್ನು ದೈನಂದಿನ ಅಥವಾ ತಾಸು ಲೆಕ್ಕದಲ್ಲಿ ಬಾಡಿಗೆ ಕಳುಹಿಸಲಾಗುತ್ತಿತ್ತು. ಆದರೆ, ಈಗ ಜಿಲ್ಲೆಯಲ್ಲಿ 21 ಕೇಂದ್ರಗಳು 5 ವರ್ಷಗಳಿಂದ ಬಂದ್​ ಆಗಿರುವುದು ಕೃಷಿ ಕೈಂಕರ್ಯಕ್ಕೆ ಪೆಟ್ಟು ನೀಡಿದೆ.

* ಬಾಡಿಗೆಗೆ ಸಿಗುತ್ತಿದ್ದ ಯಂತ್ರಗಳು

ಟ್ರಾ$್ಯಕ್ಟರ್​, ಪವರ್​ ಟಿಲ್ಲರ್​, ರೋಟರಿ ಟಿಲ್ಲರ್​, ನೇಗಿಲು, ರೋಟಾವೇಟರ್​, ಡಿಸ್ಕ್​ ನೇಗಿಲು, ಡಿಸ್ಕ್​ ಹ್ಯಾರೋ, ನೇಗಿಲು, ಕಬ್ಬಿನ ಸ್ಟಬಲ್​ ಶೇವರ್​, ಲೆವೆಲ್ಲರ್​ ಬ್ಲೇಡ್​, ಬದು ನಿಮಾರ್ಣ ಯಂತ್ರ, ನಾಟಿ ಯಂತ್ರ, ಬದು ಮತ್ತು ಸಾಲು ತೆಗೆಯುವ ಯಂತ್ರ, ಗುಂಡಿ ತೆಗೆಯುವ ಯಂತ್ರ, ಬಿತ್ತನೆ ಮತ್ತು ರಸಗೊಬ್ಬರ ಕೂರಿಗೆ ಯಂತ್ರ, ಹೊದಿಕೆ ಯಂತ್ರ, ಔಷಧ ಸಿಂಪಡಣೆ ಯಂತ್ರಗಳು, ಒಕ್ಕಣೆಯಂತ್ರ, ಕಳೆ ತೆಗೆಯುವ ಯಂತ್ರ, ಕಟಾವು ಯಂತ್ರ, ಬಹುಬೆಳೆ ಕಟಾವು ಯಂತ್ರ, ನೀರಿನ ಟ್ಯಾಂಕರ್​ ಹೀಗೆ ವಿವಿಧ ರೀತಿಯ ಉಪಕರಣಗಳ ಸೌಲಭ್ಯ ಕಲ್ಪಿಸಲಾಗಿತ್ತು.

* ಸಿಬ್ಬಂದಿಗೂ ವೇತನ ಬಾಕಿ

ಕೇಂದ್ರ ಸ್ಥಗಿತಗೊಳಿಸಿರುವ ಎರಡೂ ಖಾಸಗಿ ಸಂಸ್ಥೆಗಳು ಕೃಷಿ ಯಂತ್ರಧಾರೆ ಕೇಂದ್ರ ನಿರ್ವಹಣೆಗಾಗಿ ಸಿಬ್ಬಂದಿನೇಮಕ ಮಾಡಿಕೊಂಡಿದ್ದವು. ಸಂಸ್ಥೆಗಳ ಅಧಿಕಾರಿಗಳು ನಿರ್ವಹಣೆಗಾಗಿ ಖಾಸಗಿ ವ್ಯಕ್ತಿಗಳನ್ನು ನೇಮಕ ಮಾಡಿ ವೇತನ ನೀಡದೆ ಸುಮಾರು 3 ವರ್ಷಕ್ಕೂ ಹೆಚ್ಚು ಬಾಕಿ ಇರಿಸಿಕೊಂಡಿದ್ದಾರೆ ಎನ್ನಲಾಗಿದೆ. ಇದರಿಂದಾಗಿ ಸಿಬ್ಬಂದಿ ಕೇಂದ್ರಗಳನ್ನು ಬಂದ್​ ಮಾಡಿದ್ದಾರೆ.

* ಗುಣಮಟ್ಟ ಪರಿಶೀಲನೆ

ಕೃಷಿ ಇಲಾಖೆ ಅಧಿಕಾರಿಗಳು ಕೇಂದ್ರಗಳಿಗೆ ಭೇಟಿ ನೀಡಿ ಯಂತ್ರಗಳ ಸ್ಥಿತಿ ಪರಿಶೀಲಿಸುತ್ತಿದ್ದಾರೆ. ಗುಣಮಟ್ಟದ ಯಂತ್ರಗಳು ಇರುವ ಕೇಂದ್ರಗಳಿಗೆ ಮರು ಚಾಲನೆ ನೀಡಲು ಆಸಕ್ತ ಸ್ವಸಹಾಯ ಸಂ ಅಥವಾ ರೈತ ಉತ್ಪಾದನಾ ಕಂಪನಿಗಳಿಗೆ ವಹಿಸಲು ಚಿಂತನೆ ಇದೆ ಎನ್ನಲಾಗಿದೆ.

* ಹೆಚ್ಚುವರಿ ಬಾಡಿಗೆ ವಸೂಲಿ

ಸದ್ಯ ಮುಂಗಾರು ಮಳೆ ಉತ್ತಮವಾಗಿದ್ದು, ಕೃಷಿ ಚಟುವಟಿಕೆಗೆ ಕೂಲಿಕಾರ್ಮಿಕರ ಸಮಸ್ಯೆ ಎದುರಾಗಿದೆ. ಇದರ ಮಧ್ಯೆ ಕೃಷಿ ಯಂತ್ರೋಪಕರಣಗಳು ಲಭ್ಯವಾಗದಿರುವುದು ರೈತರಿಗೆ ಸಮಸ್ಯೆ ತಂದೊಡ್ಡಿದೆ. ಕೃಷಿ ಯಂತ್ರಧಾರೆ ಕೇಂದ್ರಗಳು ಮುಚ್ಚಿಸಿರುವುದನ್ನೇ ಬಂಡವಾಳ ಮಾಡಿಕೊಂಡಿರುವ ಖಾಸಗಿ ಬಾಡಿಗೆದಾರರು ರೈತರಿಂದ ಹೆಚ್ಚುವರಿ ಬಾಡಿಗೆ ವಸೂಲಿ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಕೋಟ್​..

ಜಿಲ್ಲೆಯಲ್ಲಿ ಸದ್ಯಕ್ಕೆ 6 ಯಂತ್ರಧಾರೆ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಈಗಾಗಲೇ ಸ್ಥಗಿತಗೊಂಡಿರುವ ಕೇಂದ್ರಗಳ ಬಗ್ಗೆ ಸಭೆಯಲ್ಲಿ ಚರ್ಚಿಸಿ ಕ್ರಮವಹಿಸಲಾಗುವುದು.

- ಎಂ.ಆರ್​.ಸುಮಾ, ಜಂಟಿ ನಿರ್ದೇಶಕಿ, ಕೃಷಿ ಇಲಾಖೆ, ಕೋಲಾರ

ಕೋಟ್​...

ಖಾಸಗಿ ಸಂಸ್ಥೆಯವರು ಕೇಂದ್ರಗಳನ್ನು ಸಮರ್ಪಕವಾಗಿ ನಡೆಸಲಿಲ್ಲ. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಕಾಲಕಾಲಕ್ಕೆ ಪರಿಶೀಲನೆ ಮಾಡಿದ್ದರೆ ರೈತರಿಗೆ ಅನುಕೂಲವಾಗುತ್ತಿತ್ತು. ಈಗ ಯಂತ್ರಗಳು ತುಕ್ಕು ಹಿಡಿಯುತ್ತಿವೆ.

- ರಮೇಶ್​, ರೈತ, ತೊಟ್ಲಿ ಗ್ರಾಮ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net