

Sanjay Gaikwad : ಕ್ಯಾಂಟಿನ್ ಸಿಬ್ಬಂದಿ ಮೇಲೆ ಸಂಜಯ್ ಗಾಯಕ್ವಾಡ್ ಹಲ್ಲೆ ಖಂಡಿಸಿ ಲುಂಗಿ, ಬನಿಯನ್ ಧರಿಸಿ ‘INDIA’ ಕೂಟದ ಸದಸ್ಯರು ಮಹಾರಾಷ್ಟ್ರ ವಿಧಾನ ಭವನದ ಮೆಟ್ಟಿಲುಗಳ ಬಳಿ ಪ್ರತಿಭಟನೆ ನಡೆಸಿದರು.
ಮುಂಬೈನ ಆಕಾಶವಾಣಿಯ ಶಾಸಕರ ಕ್ಯಾಂಟಿನ್ ಸಿಬ್ಬಂದಿ ಮೇಲೆ ಶಿವಸೇನಾ ಶಾಸಕ ಸಂಜಯ್ ಗಾಯಕ್ವಾಡ್ ಹಲ್ಲೆ ಖಂಡಿಸಿ ಮಹಾರಾಷ್ಟ್ರ ವಿಧಾನಸೌಧದ ಮುಂದೆ ‘INDIA’ ಬಣದ ಶಾಸಕರು ಪ್ರತಿಟನೆ ನಡೆಸಿದರು.
ಶಿವಸೇನಾ(ಯುಬಿಟಿ) ಎಂಎಲ್ಸಿ ಅಂಬಾದಾಸ್ ದಾನ್ವೆ, ಎನ್ಸಿಪಿ(ಎಸ್ಪಿ) ನಾಯಕ ಜಿತೇಂದ್ರ ಅವ್ಹಾದ್ ನೇತೃತ್ವದಲ್ಲಿ ಪ್ರತಿಪಕ್ಷ ಸದಸ್ಯರು ಪ್ರತಿಭಟನೆ ನೆಡೆಸಿದರು.
ಮಹಾರಾಷ್ಟ್ರದಲ್ಲಿ ಎನ್ಡಿಎ ನೇತೃತ್ವದ ಸರ್ಕಾರ ಗೂಂಡಾ ರಾಜ್ಯ ನಡೆಸುತ್ತಿದೆ, ಶಾಸಕ ಗಾಯಕ್ವಾಡ್ ಅಂಥವರಿಗೆ ಸರ್ಕಾರ ಪ್ರೋತ್ಸಾಹ ನೀಡುತ್ತಿದೆ ಎಂದು ಪೋಸ್ಟರ್ ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದರು.
ಶಿವಸೇನಾ(ಯುಬಿಟಿ) ಶಾಸಕ ಅಂಬಾದಾಸ್ ದಾನ್ವೆ ಮಾತನಾಡಿ ‘ಶಾಸಕ ಗಾಯಕ್ವಾಡ್ ಕೃತ್ಯ ಮಹಾರಾಷ್ಟ್ರ ವಿಧಾನಸಭೆ ಶಾಸಕರಿಗೆ ಬಳಿದ ಕಪ್ಪು ಮಸಿ. ಕೂಡಲೇ ಶಾಸಕ ಗಾಯಕ್ವಾಡ್ ವಿರುದ್ಧ ಎಫ್ಐಆರ್ ದಾಖಲಿಸಬೇಕು. ಕಠಿಣ ಕ್ರಮಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.
ಕಳೆದ ವಾರ ಆಕಾಶವಾಣಿಯ ಶಾಸಕರ ಕ್ಯಾಂಟಿನ್ನಲ್ಲಿ ಊಟ ಸರಿಯಿಲ್ಲ, ದಾಲ್ ಸರಿಯಿಲ್ಲ ಎಂದು ಕ್ಯಾಂಟಿನ್ ಸಿಬ್ಬಂದಿ ಯೋಗೇಶ್ ಕುತ್ರಾನ್ ಎಂಬ ಸಿಬ್ಬಂದಿ ಮೇಲೆ ಬುಲ್ದಾನದ ಶಿವಸೇನಾ(ಶಿಂಧೆ) ಬಣದ ಶಾಸಕ ಸಂಜಯ್ ಗಾಯಕ್ವಾಡ್ ಹಲ್ಲೆ ನಡೆಸಿದ್ದ ವಿಡಿಯೋ ವೈರಲ್ ಆಗಿತ್ತು.
ಶಾಸಕರ ಹಲ್ಲೆ ಬಳಿಕ ಹೋಟೆಲ್ ಮಾಲೀಕರ ಕ್ಯಾಂಟಿನ್ ಪರವಾನಗಿಯನ್ನು ಮಹಾರಾಷ್ಟ್ರ ಆಹಾರ & ಆಡಳಿತ ಮಂಡಳಿ ರದ್ದುಗೊಳಿಸಿದೆ. (ಏಜೆನ್ಸಿಸ್)