

ಆಕಾಶದಲ್ಲಿ ಸುತ್ತಾಡುವ ಹಕ್ಕಿಯನ್ನು ಗೂಡಿನ ನೆನಪು ಎಳೆಯುತ್ತದೆ. ಬಯಲಿನಲ್ಲಿ ಮೇಯುವ ದನವನ್ನು ಗೂಟದ ಹಗ್ಗವು ನಿಯಂತ್ರಿಸುತ್ತದೆ. ತತ್ತ್ವವೊಂದನ್ನು ಹಿಡಿದು, ಅದನ್ನು ಒಪ್ಪಿ ನಡೆಯದಿರುವುದು ಬದುಕೇನು? ಒಪ್ಪದಿದ್ದರೆ ನೂಲು ಕಿತ್ತ ಗಾಳಿಪಟವಾಗದೇನು ಎನ್ನುತ್ತದೆ ಈ ಕಗ್ಗ.
ವಿವೇಕವುಳ್ಳವನೆಂಬ ಕಾರಣದಿಂದಾಗಿ ಉಳಿದ ಪ್ರಾಣಿಗಳಿಗಿಂತ ಶ್ರೇಷ್ಠನೆನಿಸಿಕೊಂಡಿರುವ ಮನುಷ್ಯನು ತನ್ನತನವನ್ನು ಅರಿತಿರಬೇಕು;ಆತ್ಮಗೌರವದಿಂದ ಬಾಳಬೇಕು. ವಿಳಾಸವರಿಯದ ಜನನಮರಣಗಳ ನಡುವಿನ ಜೀವನದ ಉದ್ದೇಶವನ್ನು ತಿಳಿಯಲು ಯತ್ನಿಸಿದರೆ ನಿನ್ನೆ ನಾಳೆಗಳ ನೆಲೆಯನ್ನು ಕಾಣಬಹುದು.
ನೀಲಾಕಾಶದಲ್ಲಿ ಆಹಾರಕ್ಕಾಗಿಯೋ, ವಿಹಾರಕ್ಕಾಗಿಯೋ ಸುತ್ತಾಡುವ ಪುಟ್ಟ ಹಕ್ಕಿಯನ್ನು ಅದರ ಗೂಡಿನ ನೆನಪು ಸೆಳೆಯುತ್ತದೆ. ಎಷ್ಟು ದೂರ ಹಾರಿದರೂ ಅದು ಮತ್ತೆ ಮರಳಿ ಗೂಡಿಗೆ, ತನ್ನ ಊರಿಗೆ ಬಂದೆ ಬರುತ್ತದೆ. ಹೊಸ ಊರು, ಪ್ರದೇಶಗಳನ್ನು ನೋಡುತ್ತಾ ಹಕ್ಕಿಯು ತನ್ನ ಗೂಡನ್ನು ಮರೆಯುವುದಿಲ್ಲ. ವಿಶಾಲವಾದ ಆಕಾಶದ ಪರಿಧಿಯಲ್ಲಿ ಅದಕ್ಕೆ ಗೂಡಿನ ದಾರಿ ಕಾಣುತ್ತದೆ. ಗೂಡನ್ನು ಸೇರುವ ಹಂಬಲವು ಹಕ್ಕಿಯನ್ನು ಅದರ ಮೂಲನೆಲೆಗೆ ಸೆಳೆಯುತ್ತದೆ.
ಅಂತೆಯೇ ಹುಲ್ಲುಗಾವಲಿನಲ್ಲಿ ಮೇಯುವುದಕ್ಕಾಗಿ ಕಟ್ಟಿದ ದನವು ತನ್ನ ಪರಿಧಿಗೆ ಎಟಕುವಷ್ಟು ದೂರದವರೆಗೆ ಹುಲ್ಲನ್ನು ಮೇಯುತ್ತದೆ. ಹುಲುಸಾಗಿ ಬೆಳೆದ ಹುಲ್ಲು ಕಣ್ಣ ಎದುರಿನಲ್ಲಿದ್ದರೂ ಕುತ್ತಿಗೆಗೆ ಕಟ್ಟಿದ ಹಗ್ಗದ ಕುಣಿಕೆಯು ಎಳೆದಂತಾದಾಗ ಹಸು ತನ್ನ ಪ್ರಯತ್ನವನ್ನು ಕೈಬಿಟ್ಟು ಪ್ರಾಪ್ತವಾದ ಅವಕಾಶದಲ್ಲಿ ಮೇಯುತ್ತದೆ. ತನ್ನ ಮಿತಿಯನ್ನು ಅರಿತ ನಂತರ ಹಗ್ಗ,ಗೂಟಗಳಿಲ್ಲದಿದ್ದರೂ ಹಸುವು ಮಿತಿಯೊಳಗೆ ಇದ್ದುಬಿಡುವುದುಂಟು. ಗೂಟ ಮತ್ತು ಹಗ್ಗಗಳು ಹಸುವನ್ನು ಅಲೆದಾಡದಂತೆ ತಡೆಯುತ್ತವೆ. ಅವೆರಡರ ಮೂಲಕ ಯಜಮಾನನು ಹಸುವನ್ನು ನಿಯಂತ್ರಿಸುತ್ತಾನೆ.
ಗಾಳಿ ಬೀಸಿಗೆ ಹೊಂದಿಕೊಂಡು ಆಕಾಶದ ಬಯಲಿನಲ್ಲಿ ಹಾರಾಡುವ ಗಾಳಿಪಟದ ನೂಲನ್ನು ಬಿಗಿಯಾಗಿ ಹಿಡಿದುಕೊಂಡಿರಬೇಕು. ಸರಿಯಾಗಿ ಹಾರುವಂತೆ ನಿಯಂತ್ರಿಸಿಕೊಂಡು, ಗಾಳಿಯ ದಿಕ್ಕನ್ನು ಗಮನಿಸಿಕೊಂಡು ಸ್ವಲ್ಪಸ್ವಲ್ಪವೇ ನೂಲನ್ನು ಸಡಿಲಿಸುತ್ತಾ ಗಾಳಿ ಪಟವನ್ನು ಹಾರಿಸಬೇಕು. ಒಂದುವೇಳೆ ಗಾಳಿಪಟವನ್ನು ನಿಯಂತ್ರಿಸುವ ದಾರವು ತುಂಡಾಯಿತೆಂದರೆ ಗಾಳಿಪಟಕ್ಕೆ ನೆಲೆ ತಪ್ಪುತ್ತದೆ. ಎತ್ತಲೋ ಹಾರಿ, ಹರಿದು ನೆಲಕ್ಕುರುಳಬೇಕಾಗುತ್ತದೆ.
ಇವೆಲ್ಲದರಂತೆಯೇ ಮನುಷ್ಯ ಜನುಮಕ್ಕೂ ಕೆಲವೊಂದು ತತ್ತಾ್ವದರ್ಶಗಳು ಬೇಕು. ತಿನ್ನುವ, ಕುಣಿಯುವ, ಕಿರುಚುವ ಲೌಕಿಕದ ಸಾಮಾನ್ಯ ಬದುಕಿನಿಂದ ಹೊರತಾದ ಧ್ಯೇಯವೊಂದಿರಬೇಕು. ಲೌಕಿಕ ಬದುಕಿನಲ್ಲಿ, ಅದರಲ್ಲೂ ಹರೆಯದಲ್ಲಿ ವ್ಯಕ್ತಿಯು ಹತ್ತು ಹಲವು ಆದರ್ಶಗಳನ್ನು ಹೊಂದಿರುತ್ತಾನೆ. ಸಮಾಜಮುಖಿಯಾಗಿ ಸ್ಪಂದಿಸುವ, ಸತ್ಯ, ಅಹಿಂಸೆ, ಪರೋಪಕಾರವೇ ಮೊದಲಾದ ಮಾನವೀಯ ಮೌಲ್ಯಗಳನ್ನು ಪಾಲಿಸುವ ಸಚ್ಛಿಂತನೆಗಳು ಜೀವನಾದರ್ಶವಾಗಿರುತ್ತದೆ. ಆದರೆ ಬದುಕಿನ ಜಂಜಾಟಕ್ಕೆ ಸಿಲುಕಿ ಹೈರಾಣಾದಾಗ ಅವೆಲ್ಲವೂ ಮರೆಯಾಗುವುದು ಸುಳ್ಳಲ್ಲ. ಒಂದು ವೇಳೆ ಆದರ್ಶಗಳಿಗೆ ಬದ್ಧನಾಗಿದ್ದರೂ ಗುರುತಿಸಿಕೊಳ್ಳುವ ಸ್ವಾರ್ಥವಾದರೂ ಅವರೊಳಗಿರುತ್ತದೆ.
ಲೌಕಿಕ ಜೀವನವು ದೌರ್ಬಲ್ಯಗಳನ್ನು ಕಳಚಿ ಮುನ್ನಡೆಯುವುದಕ್ಕೆ ಸಹಾಯಕವಾಗಬೇಕು. ತನ್ಮೂಲಕ ಜಗತ್ತಿನ ತೋರುವ ಪ್ರಪಂಚದ ಹಿಂದೆ, ಅದಕ್ಕೆ ಕಾರಣವಾದ ತತ್ತ್ವವೊಂದು ಇರುವುದನ್ನು ಮನಗಾಣಬೇಕು ಮತ್ತು ಅದನ್ನು ಹೊಂದುವುದಕ್ಕೆ ಪ್ರೇರಣೆಯನ್ನು ಪಡೆಯಬೇಕು. ಬದಲಾಗುವ ಜಗತ್ತಿನಲ್ಲಿ ಮೂರ್ತವಾಗಿ ಕಾಣುವ, ಅನುಭವಕ್ಕೆ ನಿಲುಕುವ ಎಲ್ಲದರ ಹಿಂದೆ ಅನನ್ಯ ಶಕ್ತಿ ಇದೆ, ತಾನದರ ಅಂಶವೆಂದು ಅರಿತರೆ ಜೀವಕ್ಕೆ ನೆಲೆಯು ತಿಳಿದಂತೆ. ಅಧ್ಯಾತ್ಮ ತತ್ತ್ವವನ್ನು ತನ್ನೆಲ್ಲಾ ಕೆಲಸ ಕಾರ್ಯಗಳಲ್ಲಿಯೂ ಕಾಣುವುದು ರೂಢಿಯಾದಾಗ ದಾರಿಯು ಸ್ಪಷ್ಟವಾದಂತೆ.
ಲೋಕಕ್ಕೆ ಬಂದ ಆತ್ಮದ ಹಕ್ಕಿಯು ಮರಳಿ ಪರಮಾತ್ಮನೆಂಬ ಗೂಡನ್ನು ಸೇರಬೇಕು. ಧರ್ಮ, ಅರ್ಥ, ಕಾಮ, ಮೋಕ್ಷಗಳೆಂಬ ಪುರುಷಾರ್ಥಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಆತ್ಮನಿಷ್ಠೆಯಿಂದ ಬಾಳಬೇಕು. ಆಕರ್ಷಕ ಜಗತ್ತಿನ ವಿಶಾಲತೆಯಲ್ಲಿ ಮಾಯೆಯ ಬೀಸಿಗೆ ಸಿಲುಕಿದ ಜೀವವೆನುವ ಗಾಳಿಪಟಕ್ಕೆ ದೈವಭಕ್ತಿ, ದೇವಕೃಪೆಗಳೆ ಮೂಲ ಆಧಾರ. ಅದು ಕಡಿದು ಹೋದರೆ ವ್ಯಕ್ತಿಯು ಲೋಕಜೀವನದ ಭೋಗದೊಳಗೆ ಕಳೆದುಹೋಗುತ್ತಾನೆ. ಹಾಗಾಗದಿರಲು ಜೀವನಕ್ಕೆ ಉನ್ನತವಾದ ತತ್ತಾ್ವದರ್ಶವಿರಬೇಕು, ಅದಕ್ಕೆ ಬದ್ಧನಾಗಿರುವ ಸಂಕಲ್ಪಶುದ್ಧಿಯು ಬೇಕು.