

ಸಾಗರ: ಕಲಾವಿದರು ಕಲಾ ಪ್ರದರ್ಶನಕ್ಕೆ, ಕಲಾಸೇವೆಗಾಗಿ ಬದುಕನ್ನೇ ಸಮರ್ಪಿಸಿಕೊಂಡು ಸಾಂಸ್ಕೃತಿಕ ಕ್ಷೇತ್ರಕ್ಕೆ ಕೊಡುಗೆ ನೀಡುತ್ತಾರೆ ಎಂದು ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಬಿ.ಆರ್.ಜಯಂತ್ ಹೇಳಿದರು.
ಸಾಗರದ ಕಾಗೋಡು ತಿಮ್ಮಪ್ಪ ರಂಗಮಂದಿರದಲ್ಲಿ ಅಭಿನಯ ಸಾಗರ, ರಂಗಮಂಚ ಕಾಗೋಡು, ಜೋಷಿ ಫೌಂಡೇಷನ್, ಉದಯ ಕಲಾವಿದರು ಸಂಸ್ಥೆಯಿಂದ ಎನ್.ಆರ್.ಮಾಸೂರು, ಕಾಗೋಡು ಅಣ್ಣಪ್ಪ ಮತ್ತು ಯೇಸುಪ್ರಕಾಶ್ ಸ್ಮರಣಾರ್ಥ ಆಯೋಜಿಸಿರುವ ನೆನಪಿನ ರಂಗ ಸಂಭ್ರಮ ನಾಟಕೋತ್ಸವದಲ್ಲಿ ಆರು ಮಂದಿ ರಂಗ ಸಾಧಕರನ್ನು ಸನ್ಮಾನಿಸಿ ಮಾತನಾಡಿದರು.
ಉದಯ ಕಲಾವಿದರು ಸಂಸ್ಥೆ ಚಿರಪರಿಚಿತವಿರುವ ರಂಗ ತಂಡ. ಮಾಸೂರು ಅವರು ಹಲವಾರು ರಂಗ ಕಲಾವಿದರನ್ನು ಬೆಳೆಸಿದ್ದಾರೆ. ಹಿಂದೆ ಇಲ್ಲಿ ಗುಬ್ಬಿ ವೀರಣ್ಣ, ಹಿರಣ್ಯಯ್ಯ ಮಿತ್ರ ಮಂಡಳಿ ನಾಟಕ ತಂಡಗಳು ಮೂರು ತಿಂಗಳ ಕಾಲ ನಾಟಕ ಮಾಡುತ್ತಿದ್ದರು. ಬೇರೆ ಕಡೆಗೆಲ್ಲ ನಾಟಕ ತಂಡಗಳಿಗೆ ನಷ್ಟವಾದರೆ ಇಲ್ಲಿನ ಜನರು ಬೆಂಬಲಿಸುತ್ತಿದ್ದರು. ಕಲೆ ಪೋಷಣೆ ಮಾಡುವ ಜನರು ಇಂದಿಗೂ ಇದ್ದಾರೆ ಎಂದು ತಿಳಿಸಿದರು.
ಸಾಗರದಲ್ಲಿ ಎಸ್.ಎಸ್.ಕುಮಟಾ, ಕಮಲಾಕ್ಷ ಪಂಡಿತ್ ಅವರು ನಾಟಕ ಮಾಡುತ್ತಿದ್ದರು. ಅವರು ರಾಜಕೀಯ ಪಕ್ಷದಲ್ಲಿದ್ದರೂ ಕಲಾರಾಧಕರಾಗಿದ್ದರು. ಕಾಗೋಡು ಅಣ್ಣಾಜಿ ಅವರು ರಂಗಮಂಚ ತಂಡ ಕಟ್ಟಿ ರಂಗಮಂದಿರ ನಿರ್ಮಿಸಿದ್ದಾರೆ. ಈಗಲೂ ಅನೇಕ ನಾಟಕ ತಂಡಗಳಿವೆ. ನಾಟಕ ಸಂಸ್ಕೃತಿ ಉಳಿಸಿ ಬೆಳೆಸುವ ಕೆಲಸವಾಗಬೇಕು. ರಂಗಕಲೆಯಲ್ಲಿ ನಿರಂತರತೆ ಇರಬೇಕು ಎಂದರು.
ರಂಗ ಸಾಧಕರಾದ ಸಿ.ಜಿ.ಶ್ರೀಧರ್, ಡಿ.ಆರ್.ಸಂತೋಷ್ ಸದ್ಗುರು, ಹರ್ಷ ಉಳ್ಳೂರು, ಕೆ.ಜಿ.ಜಗದೀಶ ಒಡೆಯರ್, ಎಚ್.ಕೆ.ಪರಮಾತ್ಮ, ಎನ್.ಎಂ.ಪ್ರಸನ್ನಕುಮಾರ್ ಅವರನ್ನು ಸಾಹಿತಿ ಜಯಪ್ರಕಾಶ್ ಮಾವಿನಕುಳಿ ಸನ್ಮಾನಿಸಿದರು.
ನಾಟಕೋತ್ಸವ ಸಮಿತಿ ಗೌರವಾಧ್ಯಕ್ಷ ಟಿ.ವಿ.ಪಾಂಡುರಂಗ, ಅಭಿನಯ ಸಾಗರ ಸಂಸ್ಥೆ ಗೌರವಾಧ್ಯಕ್ಷ ನಾರಾಯಣಮೂರ್ತಿ ಕಾನುಗೋಡು, ನಾಟಕೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಮ.ಸ ನಂಜುಂಡಸ್ವಾಮಿ, ಸಾಮಾಜಿಕ ಕಾರ್ಯಕರ್ತ ಎಂ.ಸಿ.ಪರಮೇಶ್ವರಪ್ಪ, ದಮಯಂತಿ, ಧೀರಜ್, ನೂತನ್ ಹಂದಿಗೋಡು, ನಾಗರಾಜ ಶೆಟ್ಟಿ ಇತರರಿದ್ದರು.
ಸುಷ್ಮಾ ನಾಗರಾಜ್, ಐಶ್ವರ್ಯಾ, ನಾರಾಯಣಸ್ವಾಮಿ ವಂದಿಸಿದರು. ನಂತರ ತುಮರಿ ಕಿನ್ನರ ಮೇಳ ತಂಡದಿಂದ ಮಕ್ಕಳ ನಾಟಕ ಇರುವೆ ಪುರಾಣ ಪ್ರದರ್ಶನ ನಡೆಯಿತು.