

ಪುಣೆ: ಚುಡಾಯಿಸಿದ ಯುವಕನಿಗೆ ಇಬ್ಬರು ಯುವತಿಯರು ಸೇರಿ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಮಹಾರಾಷ್ಟ್ರದ ಕಲ್ಯಾಣ ವಲಯದ ಅಂಬಿವಲ್ಲಿ ರೈಲು ನಿಲ್ದಾಣ ಸಮೀಪ ಇರುವ ವಡವಲಿ ಗ್ರಾಮದಲ್ಲಿ ಕಳೆದ ಮಂಗಳವಾರ (ಫೆ.14) ಪ್ರೇಮಿಗಳ ದಿನದಂದು ನಡೆದಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ ಆಗಿದೆ.
ಯುವತಿಯರಿಬ್ಬರು ರಸ್ತೆ ಮೇಲೆ ನಡೆದು ಹೋಗುವಾಗ ಯುವಕನೊಬ್ಬ ಇಬ್ಬರನ್ನು ಟೀಕಿಸಿದ್ದಾನೆ. ಅಲ್ಲದೆ, ಅವರ ಮುಂದೆ ಕೆಟ್ಟ ಪದಗಳನ್ನು ಬಳಸಿದ್ದಾನೆ. ಇದರಿಂದ ಆಕ್ರೋಶಗೊಂಡ ಯುವತಿಯರು ಯುವಕನನ್ನು ಎಳೆದಾಡಿ, ಹತ್ತಿರದ ಟೇಬಲ್ ಒಂದರಲ್ಲಿ ಕೂರಿಸಿ, ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ತಪ್ಪಾಯ್ತು, ಕ್ಷಮಿಸಿ ಬಿಟ್ಟುಬಿಡಿ ಅಂತಾ ಕೇಳಿಕೊಂಡರು ಬಿಡದ ಯುವತಿಯರು ಪೊರಕೆಯಿಂದ ಯುವಕನಿಗೆ ಬಾರಿಸಿದ್ದಾರೆ. ಸ್ಥಳೀಯರೊಬ್ಬರು ತಮ್ಮ ಮೊಬೈಲ್ನಲ್ಲಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ಸಿಕ್ಕಾಪಟ್ಟೆ ವೈರಲ್ ಆಗಿದೆ.
ಘಟನೆಗೆ ಪೊಲೀಸರು ಸಹ ಪ್ರತಿಕ್ರಿಯಿಸಿದ್ದು, ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ತಿಳಿಸಿದ್ದಾರೆ. ಆದರೆ, ವಿಡಿಯೋ ಆಧರಿಸಿ ತನಿಖೆ ನಡೆಸಲಾಗುವುದು ಎಂದು ಹೇಳಿದ್ದಾರೆ. ಇತ್ತೀಚೆಗೆ ಯುವತಿಯರನ್ನು ಚುಡಾಯಿಸುವಂತಹ ಪ್ರಕರಣಗಳು ಹೆಚ್ಚಾಗಿದ್ದು, ಪೊಲೀಸರು ಕ್ರಮ ಕೈಗೊಳ್ಳಬೇಕು ಎನ್ನುತ್ತಾರೆ ಈ ಭಾಗದ ಸ್ಥಳೀಯರು. (ಏಜೆನ್ಸೀಸ್)