ಪಾಲಿಷ್ ಮಾಡ್ತೀವಿ ಎಂದವರ ಕೈಗೆ ಮಾಂಗಲ್ಯ ಕೊಟ್ಟ ಅತ್ತೆ-ಸೊಸೆ: ಕ್ಷಣದಲ್ಲಿ ಯಾಮಾರಿಸಿ ಪರಾರಿ

Gold Chain vvani
Published on

ಬೆಂಗಳೂರು: ತಾಮ್ರ, ಹಿತ್ತಾಳೆ, ಬೆಳ್ಳಿ ಪಾಲಿಷ್ ಮಾಡುವವರ ಸೋಗಿನಲ್ಲಿ ಬಂದ ವಂಚಕರು ಅತ್ತೆ-ಸೊಸೆಯನ್ನು ಯಾಮಾರಿಸಿದ್ದಾರೆ.

ಒಟ್ಟು 170 ಗ್ರಾಂ. ಚಿನ್ನಾಭರಣ ಕಳೆದುಕೊಂಡು ಮೋಸ ಹೋದ ಮಹಿಳೆ ಭಾಗ್ಯಮ್ಮ ಎಂಬುವರು ಪೊಲೀಸರಿಗೆ ದೂರು ನೀಡಿ, ಘಟನೆಯನ್ನು ವಿವರಿಸಿದ್ದಾರೆ.  ಅಕ್ಟೋಬರ್​ 5ರಂದು ಬೆಳಗ್ಗೆ 11.30 ಹೊತ್ತಿಗೆ ಇಬ್ಬರು ಅಪರಿಚಿತರು ಬಂದರು. ಅವರು ಹಿಂದಿ ಭಾಷೆ ಮಾತನಾಡುತ್ತಿದ್ದರು. ತಾಮ್ರ, ಹಿತ್ತಾಳೆ, ಬೆಳ್ಳಿ ವಸ್ತುಗಳನ್ನೆಲ್ಲ ಪಾಲಿಷ್​ ಮಾಡುವುದಾಗಿ ಹೇಳಿದರು. ನಾನು ಅವರ ಮಾತನ್ನು ನಂಬಿ ಕರ್ಪೂರ ಬೆಳಗುವ ಉದ್ಧರಣೆ ನೀಡಿದೆ.

ಅದನ್ನು ಪಾಲಿಷ್​ ಮಾಡಿದ್ದನ್ನು ನೋಡಿ 90 ಗ್ರಾಂ. ತೂಕದ ಮಾಂಗಲ್ಯ ನೀಡಿದೆ. ಜತೆಗೆ ನನ್ನ ಸೊಸೆಯ 80 ಗ್ರಾಂ.ತೂಕದ ಸರವನ್ನೂ ಕೊಟ್ಟೆ. ಆ ನಂತರ ಟಿನ್​ ಬಾಕ್ಸ್​ನಲ್ಲಿ ಪುಡಿ, ನೀರು ಮತ್ತು ಅರಿಶಿಣ ಹಾಕಿ ಬಿಸಿ ಮಾಡಲು ಹೇಳಿದರು. ಅದಾದ ಮೇಲೆ ಅವರು ಪಕ್ಕದ ಮನೆಗೆ ಹೋಗುತ್ತೇವೆ ಎಂದು ಹೇಳಿ ಹೋದರು. ನಾನಿಲ್ಲಿ ಬಾಕ್ಸ್​ ತೆಗೆದರೆ ಚಿನ್ನಾಭರಣಗಳು ಕಾಣೆಯಾಗಿದ್ದವು ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಹಲಸೂರು ಗೇಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net