

ನವದೆಹಲಿ: ಕೃಷ್ಣ ನದಿ ನೀರು ಹಂಚಿಕೆ ವಿವಾದ ನ್ಯಾಯಮಂಡಳಿಯ ಅಂತಿಮ ತೀರ್ಪಿನ ಕುರಿತು ಅಧಿಸೂಚನೆ ಹೊರಡಿಸುವಂತೆ ಕೋರಿ ಕರ್ನಾಟಕ ಮತ್ತು ಮಹಾರಾಷ್ಟ್ರ ಸರ್ಕಾರ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮುಂದೂಡಿದೆ.
2022ರ ಜೂನ್ನಿಂದ ತನ್ನ ಪಾಲಿನ ಕೃಷ್ಣ ನದಿಯ 75 ಟಿಎಂಸಿ ಅಡಿ ನೀರನ್ನು ಬಳಸಿಕೊಳ್ಳಲು ಅನುಮತಿ ನೀಡಬೇಕು ಎಂದು ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್ನ ಮೊರೆಹೋಗಿದೆ.
75 ಟಿಎಂಸಿ ನೀರನ್ನು ಬಳಸಿಕೊಂಡು ಕಲಬುರಗಿ, ಯಾದಗಿರಿ, ಕೊಪ್ಪಳ, ರಾಯಚೂರು ಜಿಲ್ಲೆಗಳ 5.94 ಲಕ್ಷ ಹೆಕ್ಟೇರ್ ಕೃಷಿ ಭೂಮಿಗೆ ನೀರು ಹರಿಸಲಾಗುವುದು ಎಂದು ಕರ್ನಾಟಕ ಅರ್ಜಿಯಲ್ಲಿ ವಿವರಿಸಿದೆ. ನ್ಯಾಯಮಂಡಳಿಯ ಅಂತಿಮ ತೀರ್ಪಿನ ಬಗ್ಗೆ ಅಧಿಸೂಚನೆ ಹೊರಡಿಸುವಂತೆ ಕರ್ನಾಟಕ ಪರ ಹಿರಿಯ ವಕೀಲ ಶ್ಯಾಮ್ ದಿವಾನ್ ಮನವಿ ಮಾಡಿದ್ದರು. ಆದರೆ, ಅರ್ಜಿಯ ಬಗ್ಗೆ ನಿರ್ಧರಿಸಲು ತನಗೆ 2 ವಾರ ಕಾಲಾವಕಾಶ ನೀಡಬೇಕು ಎಂದು ನ.29ರಂದು ಕೇಂದ್ರ ಸರ್ಕಾರದ ಪರ ವಕೀಲರು ಸುಪ್ರೀಂಕೋರ್ಟ್ಗೆ ಮನವಿ ಮಾಡಿದ್ದರು. ಈ ಹಿನ್ನೆಲೆ ಸುಪ್ರೀಂ, ವಿಚಾರಣೆಯನ್ನು ಡಿ.13ಕ್ಕೆ ಮುಂದೂಡಿತ್ತು.
ಇಂದು ಮತ್ತೆ ಎರಡು ವಾರ ಕಾಲಾವಕಾಶ ಕೊಡಬೇಕು ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ಗೆ ಮನವಿ ಮಾಡಿತು. ತ್ವರಿತಗತಿಯಲ್ಲಿ ಅಧಿಸೂಚನೆ ಆಗಬೇಕು. 9 ವರ್ಷದಿಂದ ಕಾಯುತ್ತಿದ್ದೇವೆ ಎಂದು ಕರ್ನಾಟಕ ಪರ ವಕೀಲರು ಮನವಿ ಮಾಡಿದರು. ಆ ವೇಳೆ ಇಷ್ಟು ದಿನವೇ ಇದ್ದೀರಿ. ಇನ್ನು ಸ್ವಲ್ಪ ಕಾಲಾವಕಾಶ ಕೊಡಿ ಎಂದು ತೆಲಂಗಾಣ ಪರ ವಕೀಲರು ಮನವಿ ಮಾಡಿದರು. ಅಂತಿಮವಾಗಿ 2022ರ ಜನವರಿಗೆ ವಿಚಾರಣೆಯನ್ನು ಕೋರ್ಟ್ ಮುಂದೂಡಿತು.