ನನಗೆ 60 ವರ್ಷ ತುಂಬಿದೆ... ಎನ್ನುತ್ತಲೇ ರಾಜಕೀಯ ನಿವೃತ್ತಿ ಬಗ್ಗೆ ಪ್ರಸ್ತಾಪಿಸಿದ ಡಿಕೆಶಿ

DKS
Published on

ರಾಮನಗರ: ಕನಕಪುರ ಕ್ಷೇತ್ರದ ಜನರು ನನಗೆ ಮತ ನೀಡಿ ಶಾಸಕನನ್ನಾಗಿ ಆಯ್ಕೆ ಮಾಡಿದ್ದಾರೆ. ನನಗೆ ಇದೀಗ 60 ವರ್ಷ ತುಂಬಿದೆ. ಇನ್ನು 8ರಿಂದ 10 ವರ್ಷ ಮಾತ್ರ ರಾಜಕಾರಣ ಮಾಡಬಹುದು. ಆ ನಂತರ ರಾಜಕೀಯ ನಿವೃತ್ತಿ ಪಡೆಯುವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಹೇಳಿದರು.

ಕನಕಪುರದ ತಮ್ಮ ನಿವಾಸದಲ್ಲಿ ಶಿಕ್ಷಣ ಸಂಸ್ಥೆಯ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿದ ಡಿಕೆಶಿ, ನಾನು ಇನ್ನು 8-10 ವರ್ಷ ರಾಜಕಾರಣ ಮಾಡಬಹುದು. ನಾನು ರಾಜಕೀಯ ನಿವೃತ್ತಿ ಪಡೆಯುವುದರ ಒಳಗಾಗಿ ಈ ಶಿಕ್ಷಣ ಸಂಸ್ಥೆಯಲ್ಲಿ ಏನಾದರೂ ಬದಲಾವಣೆ ತರಬೇಕು. ನಾನು ನಿಮ್ಮಿಂದ ಯಾವುದೇ ಪ್ರತಿಫಲ ನಿರೀಕ್ಷೆ ಮಾಡುವುದಿಲ್ಲ. ನಾನು ಸಾಕಷ್ಟು ಸಂಪಾದನೆ ಮಾಡಿದ್ದೇನೆ. ದೇವರು ಎಲ್ಲವನ್ನೂ ಕೊಟ್ಟಿದ್ದಾನೆ. ನನ್ನ ಮೇಲೆ ಸಾಕಷ್ಟು ಪ್ರಕರಣಗಳು ದಾಖಲಾಗಿದ್ದು, ಅವೆಲ್ಲವನ್ನೂ ಅನುಭವಿಸುತ್ತೇನೆ. ಈ ತಾಲೂಕಿನಲ್ಲಿ ಯಾವುದೇ ವಿಚಾರಕ್ಕೂ ಯಾರ ಮುಂದೆಯೂ ಕೈಚಾಚಿಲ್ಲ. ಯಾವುದೇ ಕಾಮಗಾರಿಯಲ್ಲೂ ಕಮಿಷನ್ ಪಡೆದಿಲ್ಲ. ಜಾತಿ ಮೇಲೆ ನನಗೆ ನಂಬಿಕೆ ಇಲ್ಲ, ನೀತಿ ಮೇಲೆ ನನ್ನ ನಂಬಿಕೆ ಇದೆ ಎಂದರು.

ಮಾಜಿ ಪ್ರಧಾನಿ ಎಚ್. ಡಿ.ದೇವೇಗೌಡ, ಮಾಜಿ ಶಾಸಕ ಸಿಂದ್ಯ, ಮಾಜಿ ಸಿಎಂ ಕುಮಾರಸ್ವಾಮಿ ಸೇರಿದಂತೆ ಹಲವರು ಈ ಕ್ಷೇತ್ರದಿಂದ ಆಯ್ಕೆ ಆಗಿದ್ರು. ಆದರೆ ಅವರು ಯಾರು ಶಿಕ್ಷಣ ಸಂಸ್ಥೆಗೆ ಅಷ್ಟು ಕೆಲಸ ಮಾಡಿಲ್ಲ. ನಾನು ಬಂದ ಮೇಲೆ ಸಾಕಷ್ಟು ಕೆಲಸ ಮಾಡಿದ್ದೇನೆ. ಇನ್ನುಳಿದದ್ದನ್ನ ಈಗ ಮಾಡುತ್ತೇನೆ. ನನಗೆ ನೀವು ಕೊಟ್ಟಿರುವ ಸ್ಥಾನ ಸಾಕು, ಇನ್ಯಾವ ಸ್ಥಾನವೂ ಬೇಡ. ಕಳೆದ 25 ವರ್ಷಗಳಿಂದ ನೋಡಿಕೊಂಡು ಬಂದಿದ್ದೇನೆ. ಈಗಿನ ಶಿಕ್ಷಣ ಸಂಸ್ಥೆ ಬಗ್ಗೆ ನಂಬಿಕೆ ಇಲ್ಲ, ಬದಲಾವಣೆ ಆಗಬೇಕಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net