ಶಿವಮೊಗ್ಗದಲ್ಲಿ ಮಂಗನ ಕಾಯಿಲೆಗೆ ಗ್ರಾಪಂ ಸದಸ್ಯ ಬಲಿ

kfd shimoga gp member death
Published on

ಸಾಗರ: ಶಿವಮೊಗ್ಗ ಜಿಲ್ಲೆಯಲ್ಲಿ ಮಂಗನ ಕಾಯಿಲೆಗೆ ಗ್ರಾಮ ಪಂಚಾಯಿತಿ ಸದಸ್ಯರೊಬ್ಬರು ಬಲಿಯಾಗಿದ್ದಾರೆ.

ಸಾಗರ ತಾಲೂಕಿನ ಅರಳಗೋಡು ಗ್ರಾಮ ಪಂಚಾಯಿತಿ ಸದಸ್ಯ ಕರುಮನೆ ರಾಮಸ್ವಾಮಿ(57) ಮೃತರು. ಇತ್ತೀಚಿಗೆ ಇವರಲ್ಲಿ ಮಂಗನ ಕಾಯಿಲೆ ಲಕ್ಷಣ ಕಾಣಿಸಿಕೊಂಡಿತ್ತು. ಏ.24ರಂದು ರಕ್ತ ಪರೀಕ್ಷೆ ಮಾಡಿಸಿದಾಗ ಸೋಂಕು ದೃಢಪಟ್ಟಿತ್ತು. ತಕ್ಷಣ ಮಣಿಪಾಲ್​ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಸೋಮವಾರ ಜ್ವರ ಉಲ್ಬಣಗೊಂಡಿದ್ದು, ಅಂಗಾಂಗ ವೈಫಲ್ಯವಾಗಿ ಮಂಗಳವಾರ ಮೃತಪಟ್ಟಿದ್ದಾರೆ ಎಂದು ಸಾಗರ ವೈದ್ಯಾಧಿಕಾರಿ ಡಾ. ಮೋಹನ್​ ತಿಳಿಸಿದ್ದಾರೆ.

2019ರಲ್ಲಿ ಶಿವಮೊಗ್ಗ ಜಿಲ್ಲೆಯ ಅರಳಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಂಗನಕಾಯಿಲೆ ಹೆಚ್ಚಾಗಿ ಕಾಣಿಸಿಕೊಂಡಿದ್ದು, 20ಕ್ಕೂ ಹೆಚ್ಚು ಜನ ಮೃತಪಟ್ಟಿದ್ದರು. ಈ ವರ್ಷ ಜಿಲ್ಲೆಯಲ್ಲಿ ಕೆಎಫ್​ಡಿಗೆ ಇದು ಮೊದಲನೆಯ ಸಾವು. ಮಳೆಯಾದರೆ ಹುಣುಗು ಕೊಚ್ಚಿಕೊಂಡು ಹೋಗಲಿದ್ದು, ಸೋಂಕು ಹರಡುವುದಿಲ್ಲ. ತೀರ್ಥಹಳ್ಳಿ ತಾಲೂಕು ಸೇರಿದಂತೆ ಹಲವೆಡೆ ಈಗಾಗಲೇ ಮಳೆಯಾಗಿದ್ದು, ಇತರ ಕಡೆ ಕೆಎಫ್​ಡಿ ಸೋಂಕು ಕಾಣಿಸಿಕೊಂಡಿಲ್ಲ. ಅರಳಗೋಡು ಭಾಗದಲ್ಲಿ ಇನ್ನೂ ಮಳೆಯಾಗದಿರುವುದರಿಂದ ಹುಣುಗು ಸಮಸ್ಯೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net