

ಶಿವಮೊಗ್ಗ: ರಾಜ್ಯಪಾಲ ಥಾವರಚಂದ್ ಗೆಹಲೋತ್ ಗುರುವಾರ ವಿಶ್ವ ವಿಖ್ಯಾತ ಜೋಗ ಜಲಪಾತದ ಸೌಂದರ್ಯವನ್ನು ಕಣ್ತುಂಬಿಕೊಂಡರು. ಜಲಪಾತ ಧುಮ್ಮಿಕ್ಕುವ ವೈಭವವನ್ನು ರಾಜಾಟಾಪ್ನಲ್ಲಿ ನಿಂತು ನೋಡುತ್ತಾ ಫೋಟೋ ತೆಗೆಸಿಕೊಂಡರು. ಜೋಗ ಜಲಪಾತ, ಶರಾವತಿ ಕಣಿವೆ ಬಗ್ಗೆ ಮಾಹಿತಿ ಪಡೆದುಕೊಂಡರು.
ಶಿವಮೊಗ್ಗ ಜಿಲ್ಲೆ ಪ್ರವಾಸದಲ್ಲಿರುವ ರಾಜ್ಯಪಾಲರು ಬುಧವಾರ ಜೋಗ ಜಲಪಾತದ ರಾಜಾಟಾಪ್ ಸಮೀಪದ ಬ್ರೀಟಿಷ್ ಬಂಗಲೆಯಲ್ಲಿ ವಾಸ್ತವ್ಯ ಹೂಡಿದ್ದರು. ಗುರುವಾರ ಬೆಳಗ್ಗೆ 8 ಗಂಟೆಗೆ ಜಲಪಾತ ವೀಕ್ಷಣೆಗೆ ಆಗಮಿಸಿದ ಅವರು 10 ನಿಮಿಷ ಜೋಗದ ಸೌಂದರ್ಯವನ್ನು ಸವಿದರು.
ರಾಜ್ಯಪಾಲರು ಜಲಪಾತ ವೀಕ್ಷಿಸುತ್ತಾರೆ ಎಂಬ ಕಾರಣಕ್ಕಾಗಿ ಜಲಪಾತದಲ್ಲಿ ನೀರಿನ ಹರಿವು ಹೆಚ್ಚಿಸಲು ಮುಂಜಾನೆ 5 ಗಂಟೆಗೆ ಲಿಂಗನಮಕ್ಕಿ ಡ್ಯಾಂನಿಂದ ನೀರು ಹೊರಕ್ಕೆ ಬಿಡಲಾಗಿತ್ತು. ಆದರೆ, ಜಲಾಶಯದಿಂದ ನೀರು ಜಲಪಾತಕ್ಕೆ ಬರುವುದರೊಳಗಾಗಿ ರಾಜ್ಯಪಾಲರು ಜಲಪಾತ ವೀಕ್ಷಿಸಿ ಅಲ್ಲಿಂದ ಹೊರಟು ಹೋಗಿದ್ದರು. ಹೀಗಾಗಿ ರಾಜ್ಯಪಾಲರಿಗೆ ಜಲಪಾತದ ರಮಣೀಯ ದೃಶ್ಯ ಸವಿಯಲು ಸಾಧ್ಯವಾಗಲಿಲ್ಲ.
ಬುಧವಾರ ಪೆಸಿಟ್ ಕಾಲೇಜು ಹಾಗೂ ಶಿವಮೊಗ್ಗದ ಹುಲಿ-ಸಿಂಹಧಾಮಕ್ಕೆ ರಾಜ್ಯಪಾಲರು ಭೇಟಿ ನೀಡಿದ್ದರು. ರಾಜ್ಯಪಾಲರಿಗೆ ಜೋಗ ಜಲಪಾತ ಕುರಿತು ಉತ್ತರ ಕನ್ನಡ ಡಿಸಿ ಮುಲ್ಲೈ ಮುಹಿಲನ್, ಎಸ್ಪಿ ಡಾ. ಸುಮನ್ ಡಿ ಪನ್ನೇಕರ್, ಕುಮುಟಾ ಎಸಿ ರಾಹುಲ್ ಪಾಂಡೆ ಅವರು ಮಾಹಿತಿ ನೀಡಿದರು.