ಕನ್ನಡ ಧ್ವಜಕ್ಕೆ ಬೆಂಕಿ ಇಟ್ಟ ಪುಂಡರ ವಿರುದ್ಧ ಸ್ಯಾಂಡಲ್​ವುಡ್​ ನಟರ ಆಕ್ರೋಶ

kannada film actors
Published on

ಬೆಂಗಳೂರು: ಕನ್ನಡ ಧ್ವಜಕ್ಕೆ ಬೆಂಕಿ ಇಟ್ಟ ಪುಂಡರ ವಿರುದ್ಧ ಕನ್ನಡಿಗರ ಆಕ್ರೋಶ ಭುಗಿಲೆದ್ದಿದೆ. ಕನ್ನಡಪರ ಹೋರಾಟಗಾರರು, ಮಾಜಿ ಸಿಎಂ ಕುಮಾರಸ್ವಾಮಿ, ಸ್ಯಾಂಡಲ್​ವುಡ್​ನ ದಿಗ್ಗಜರಾದ ಶಿವರಾಜ್​ಕುಮಾರ್​, ಜಗ್ಗೇಶ್​, ಶ್ರೀಮುರಳಿ, ನಿರ್ದೇಶಕ ಸಂತೋಷ್​ ಅನಂದರಾಮ ಸೇರಿದಂತೆ ಕನ್ನಡಿಗರು ಕಿಡಿಗೇಡಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಶಿವಸೇನಾ ಕಾರ್ಯಕರ್ತರು ಮಂಗಳವಾರ ಕನ್ನಡ ಬಾವುಟಕ್ಕೆ ಬೆಂಕಿ ಇಟ್ಟು ವಿಕೃತಿ ಮೆರೆದಿದ್ದರು. ಈ ಅವಮಾನಕರ ಘಟನೆಯನ್ನು ಖಂಡಿಸಿರುವ ನಟ ಶಿವರಾಜ್​ಕುಮಾರ್​, 'ನಮ್ಮ ನಾಡ ಧ್ವಜ ಸುಟ್ಟವರಿಗೆ ತಕ್ಕ ಶಿಕ್ಷೆ ಆಗಲಿ. ನಿಜವಾದ ಕನ್ನಡಪರ ಹೋರಾಟಗಾರರನ್ನು ಬಿಡುಗಡೆಗೊಳಿಸಿ' ಎಂದು ಸಾಮಾಜಿಕ ಜಾಲತಾಣದಲ್ಲಿ ಆಗ್ರಹಿಸಿದ್ದಾರೆ.

ಕನ್ನಡ ಬಾವುಟ ಅಪಮಾನಿಸಿದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಕನ್ನಡಕ್ಕಾಗಿ ಹೋರಾಟ ಮಾಡಿದ ಕನ್ನಡ ಸೈನಿಕರನ್ನು ಸಿಎಂ ಮತ್ತು ಗೃಹ ಮಂತ್ರಿಗಳು ಬಿಡುಗಡೆ ಮಾಡಬೇಕು ಎಂದು ನಟ ಜಗ್ಗೇಶ್​ ಎರಡು ದಿನದ ಹಿಂದೆಯೇ ಟ್ವೀಟ್​ ಮೂಲಕ ಒತ್ತಾಯಿಸಿದ್ದರು.

ಕನ್ನಡ ಕಲಿಗಳನ್ನ ಬಿಡುಗಡೆ ಮಾಡಿ… ನಮ್ಮ ಭಾಷೆ,ನಾಡು, ನೀರಿನ ಪರ ಧ್ವನಿಯಾಗುವುದು ನಮ್ಮ ಕರ್ತವ್ಯ ಎಂದು ನಿರ್ದೇಶಕ ಸಂತೋಷ್​ ಅನಂದರಾಮ್​ ಕರೆ ನೀಡಿದ್ದಾರೆ.

ಕನ್ನಡನಾಡಿನ ತಾಯಿ ಭುವನೇಶ್ವರಿಯ ಧ್ವಜವನ್ನ (ನಾಡ ಧ್ವಜ) ಸುಟ್ಟು ಪುಂಡತನ ತೋರಿರುವುದು ಕ್ಷಮಿಸಲಾಗದ ಅಪರಾಧ. ನಮ್ಮ ಸರ್ಕಾರ ಇಂತಹವರಿಗೆ ಕಾನೂನಿನ ಅಡಿಯಲ್ಲಿ ತಕ್ಕಶಿಕ್ಷೆ ಕೂಡಿಸಬೇಕು. ಕನ್ನಡದ ಅಸ್ಮಿತೆಗಾಗಿ ಹೋರಾಡಿದ ನಮ್ಮ ಕನ್ನಡಿಗರನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಕನ್ನಡಿಗರು ಆಗ್ರಹಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net