

ಮುಂಬೈ: ಎರಡು ಮೂರು ಜನರ ಇರೋ ಮನೆಯಲ್ಲೇ ಸಾವಿರಾರು ಸಮಸ್ಯೆ ಅನ್ನೋ ಈ ಕಾಲದಲ್ಲಿ ಇಲ್ಲೊಂದು ಮನೆಯಲ್ಲಿ 72 ಜನ ಒಟ್ಟಾಗಿ ವಾಸಿಸುತ್ತಿದ್ದಾರೆ!
ಈಗಿನ ಕಾಲದಲ್ಲಿ ಅವಿಭಕ್ತ ಕುಟುಂಬಗಳನ್ನು ಹುಡುಕುವುದೇ ಕಷ್ಟ. ಆದರೂ ಇದಕ್ಕೆ ಅಪವಾದ ಎನ್ನುವಂತೆ ಮಹಾರಾಷ್ಟ್ರದ ಸೋಲಾಪುರದಲ್ಲಿರುವ ಈ ಕುಟುಂಬದ ಎಲ್ಲಾ 72 ಸದಸ್ಯರು ಒಂದೇ ಸೂರಿನ ಅಡಿಯಲ್ಲಿ ವಾಸಿಸುತ್ತಿದ್ದಾರೆ. 72 ಜನ ಇರುವ ಈ ಡೋಯಿಜೋಡೆ ಕುಟುಂಬ ಬೃಹತ್ ವ್ಯಾಪಾರ ಕಂಪನಿಯನ್ನು ಹೊಂದಿದೆ. ಈ ಕುಟುಂಬ ಇತ್ತೀಚೆಗೆ ವಿಡಿಯೋ ಒಂದರಲ್ಲಿ ಕಾಣಿಸಿಕೊಂಡು ಭಾರಿ ಸುದ್ದಿಯಾಗಿತ್ತು. ಹಲವಾರು ಕುಟುಂಬ ಸದಸ್ಯರು ಒಬ್ಬರಿಗೊಬ್ಬರು ಸಹಾಯ ಮಾಡಿಕೊಂಡು ತಮ್ಮ ದೈನಂದಿನ ಕರ್ತವ್ಯಗಳನ್ನು ನಿರ್ವಹಿಸುವುದು ಈ ವೀಡಿಯೊದಲ್ಲಿ ಕಂಡುಬರುತ್ತದೆ.
72 ಸದಸ್ಯರನ್ನು ಹೊಂದಿರುವ ಅವರ ಕುಟುಂಬಕ್ಕೆ ದಿನದ ಖರ್ಚು ಏನೂ ಕಮ್ಮಿ ಇಲ್ಲ. ಬೆಳಿಗ್ಗೆ ಮತ್ತು ಸಂಜೆ 10 ಲೀಟರ್ ಹಾಲು, ಊಟಕ್ಕೆ 1,000 ರಿಂದ 1,200 ರೂ.ವರೆಗಿನ ತರಕಾರಿ ಅಗತ್ಯ ಇದೆ ಎಂದು ಕುಟುಂಬದ ಸದಸ್ಯ ಅಶ್ವಿನ್ ಡೋಯಿಜೋಡೆ ಹೇಳುತ್ತಾರೆ. ಕುಟುಂಬದವರು ಸೇವಿಸುವ ಮಾಂಸವೂ ಕಮ್ಮಿ ಪ್ರಮಾಣದಲ್ಲಿ ಇರುವುದಿಲ್ಲ. ಅಶ್ವಿನ್ 'ನಾವು ಒಂದು ವರ್ಷಕ್ಕೆ ಬೇಕಾಗುವ ಅಕ್ಕಿ, ಗೋಧಿ ಮತ್ತು ಬೇಳೆಕಾಳುಗಳನ್ನು ಖರೀದಿಸುತ್ತೇವೆ. ಇದು ಸುಮಾರು 40 ರಿಂದ 50 ಚೀಲಗಳಷ್ಟು ಆಗುತ್ತೆ. ನಮಗೆ ದೊಡ್ಡ ಪ್ರಮಾಣದಲ್ಲಿ ದವಸ ಧಾನ್ಯದ ಅಗತ್ಯವಿರುವುದರಿಂದ, ನಾವು ಸಗಟು ಖರೀದಿಸುತ್ತೇವೆ. ಇದರಿಂದ ಹಣದ ಉಳಿತಾಯವೂ ಆಗುತ್ತೆ' ಎಂದು ಹೇಳಿದರು. (ಏಜೆನ್ಸೀಸ್)