ನನಗಾದ ಅವಮಾನ ಮರೆತಿಲ್ಲ, ಹನಿ ನೀರಿಗಾಗಿ ಹೋರಾಡುವೆ... ಎನ್ನುತ್ತಲೇ ಭಾವುಕರಾದ ದೇವೇಗೌಡ

HD Devegowda vvani
Published on

ರಾಮನಗರ: ನೀರಾವರಿ ವಿಚಾರದಲ್ಲಿ ಅಂದು ಲೋಕಸಭೆಯಲ್ಲಿ ನನಗೆ ಆದ ಅವಮಾನವನ್ನು ನಾನೆಂದೂ ಮರೆಯಲ್ಲ. ನಾನಿನ್ನೂ ಬದುಕಿದ್ದೇನೆ. ಆ ನೋವು ಕಾಡುತ್ತಲೇ ಇದೆ. ಈ ತಲೆಯಲ್ಲಿನ ನೋವನ್ನು ಮರೆಯಲು ಸಾಧ್ಯವೇ ಇಲ್ಲ. ನನ್ನ ಕೊನೇ ಉಸಿಸು ಇರೋವರೆಗೂ ನನ್ನ ರಾಜ್ಯದ ನೀರು ಉಳಿಸಲು ಹೋರಾಟ ಮಾಡುತ್ತೇನೆ. ನಾನು ರಾಮನಗರದಿಂದ ಚುನಾವಣೆಯಲ್ಲಿ ಗೆಲುವು ಸಾಧಿಸಿ ಸಿಎಂ ಆಗಿದ್ದೆ. ಈ ಪುಣ್ಯಕ್ಷೇತ್ರದಿಂದಲೇ ಜಲಧಾರೆಯ ವಾಹನಗಳನ್ನು ಸಾಂಕೇತಿಕವಾಗಿ ಬಿಡುಗಡೆ ಮಾಡಿರುವುದು ನನ್ನ ಪುಣ್ಯ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಭಾವುಕರಾದರು.

ಜಿಲ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಜೆಡಿಎಸ್‌ನ 'ಜನತಾ ಜಲಧಾರೆ’ ಸಮಾವೇಶ ಉದ್ಘಾಟಿಸಿ ಮಾತನಾಡಿದ ದೇವೇಗೌಡ, ಕೊಟ್ಟ ಮಾತನ್ನು ಈ ದೇವೇಗೌಡ ಯಾವತ್ತೂ ಕೈಬಿಟ್ಟಿಲ್ಲ. ರಾಜ್ಯದ ನೀರಾವರಿ ವಿಚಾರಗಳ ಬಗ್ಗೆ ನನ್ನ ಕೊನೇ ಉಸಿರುವವರೆಗೂ ಹೋರಾಟ ಮಾಡುತ್ತಲೇ ಇರುವೆ. ಈ ಜಲಧಾರೆ ಕಾರ್ಯಕ್ರಮ ಚುನಾವಣೆಗಾಗಿ ನಡೆಯುತ್ತಿಲ್ಲ. ಹನಿ ನೀರಿಗಾಗಿ ಹೋರಾಟ ಮಾಡುತ್ತಿದ್ದೇವೆ. ಎಂದಿಗೂ ನಮ್ಮ ರೈತನನ್ನು ಕೈಬಿಡುವ ಪ್ರಶ್ನೆಯೇ ಇಲ್ಲ. ನೀರಾವರಿ ವಿಚಾರಕ್ಕೆ ಯಾವ ಪಕ್ಷ ಬೇಕಿದ್ದರೂ, ಆಹ್ವಾನ ನೀಡಿದರೆ ನಾನು ಹೋಗುತ್ತೇನೆ. ನನ್ನ ಅಧಿಕಾರದ ಅವಧಿಯಲ್ಲಿ ಕಾಂಗ್ರೆಸ್, ಬಿಜೆಪಿಯ ಮಂತ್ರಿಗಳು ಕಾವೇರಿಗಾಗಿ ನನ್ನ ಜತೆ ಕೈ ಜೋಡಿಸಲಿಲ್ಲ. ತಮಿಳುನಾಡಿಗೆ 9 ಟಿಎಂಸಿ ನೀರು ಬಿಟ್ಟಾಗ ಎಲ್ಲರೂ ನನ್ನ ವಿರುದ್ಧ ನಿಂತಿದ್ದರು. ತಮಿಳುನಾಡಿನ 40 ಎಂಪಿಗಳು ಸಹ ವಿರೋಧ ವ್ಯಕ್ತಪಡಿಸಿದರು. ಹೀಗಾಗಿ ಇಂತಹ ನೀರಾವರಿಗಳ ನೋವು ನನ್ನನ್ನು ಕಾಡುತ್ತಿದೆ.ಕುಮಾರಸ್ವಾಮಿ ಅವರ ಬದ್ಧತೆಯೇ ಅವರನ್ನು ಕಾಪಾಡುತ್ತದೆ. ನಮ್ಮ ನೀರಿನ ಹಕ್ಕಿಗಾಗಿ ಹೋರಾಟ ಮಾಡುತ್ತೇವೆ. ನಮ್ಮೊಂದಿಗೆ ನೀವೆಲ್ಲರೂ ಇರಬೇಕು ಎಂದು ಮನವಿ ಮಾಡಿದರು.

ದೊಡ್ಡ ನದಿ, ಉಪನದಿಗಳು, ತೊರೆಗಳನ್ನು ಒಟ್ಟುಗೂಡಿಸಿ ರಾಜ್ಯದ ಜನತೆಗೆ ನೀರಿನ ಸೌಲಭ್ಯ ಕಲ್ಪಿಸುವುದು ನಮ್ಮ ಉದೇಶ. ಇತರರ ರೀತಿ ನೀರಾವರಿ ವಿಚಾರದಲ್ಲಿ ರಾಜಕೀಯ ಮಾಡುವುದಿಲ್ಲ ಎನ್ನುತ್ತಾ ದೇವೇಗೌಡರು ಹೀಗೆ ಅನೇಕ ವಿಚಾರಗಳನ್ನು ಮೆಲುಕು ಹಾಕಿದ್ದರು. ನೀರಾವರಿ ಸಚಿವರಾಗಿದ್ದ ವೇಳೆ ನಡೆದ ಯೋಜನೆಗಳು, ಕನಕಪುರದಲ್ಲಿ ಕೆರೆ ನಿರ್ಮಿಸಲು ವರ್ಲ್ಡ್ ಬ್ಯಾಂಕ್‌ನಿಂದ ಅಪ್ರೂವಲ್ ಮಾಡಿಸಿದ್ದು, 1994ರ ಚುನಾವಣೆ... ಎಲ್ಲವನ್ನೂ ನೆನೆದರು.

ಸಿ.ಎಂ.ಇಬ್ರಾಹಿಂ ಮಾತನಾಡಿ, ಮುಂದಿನ ವರ್ಷ ದೇವೇಗೌಡರ ಕುಟುಂಬದವರು ಅಧಿಕಾರಕ್ಕೆ ಬರುವ ಕೆಲಸ ನಡೆಯಲಿದೆ. 25 ವರ್ಷದ ಹಿಂದೆ ಕಾಂಗ್ರೆಸ್ ನಮ್ಮನ್ನು ತೆಗೆದಿತ್ತು. ಈಗ ಅವರನ್ನೇ ತೆಗೆಯುವ ಕಾಲ ಸನಿಹದಲ್ಲಿದೆ. ಕುಮಾರಸ್ವಾಮಿ ರಾಜ್ಯದ ಬಳಿಕ ಕೇಂದ್ರವನ್ನು ಆಳುತ್ತಾರೆ. ಅದನ್ನು ದೇವೇಗೌಡರು ಕಣ್ಣಾರೆ ನೋಡುತ್ತಾರೆ. ನಾವು ಮೇಕೆದಾಟಿಸಲು ಬಂದಿಲ್ಲ. ಸಿಂಹ ದಾಟಿಸಲು ಬಂದಿದ್ದೇವೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net