ಆಹಾ! ರಸಭರಿತ ಬಾಳೆ; ಇಲ್ಲಿದೆ ನೋಡಿ ಮಾಹಿತಿ

banana
Published on

ಬಾಳೆಯ ರುಚಿಗೆ ಮನಸೋಲದವರೇ ಇಲ್ಲ. ಬಾಳೆ ವರ್ಷವಿಡೀ ಲಭ್ಯ ಮಾತ್ರವಲ್ಲದೆ ಅನೇಕ ಔಷಧ ಗುಣಗಳನ್ನು ಇದು ಹೊಂದಿರುವುದು ವಿಶೇಷ. ರೈತರ ಪಾಲಿಗೆ ವಿತ್ತಶಕ್ತಿಯೂ ಹೌದು. ಕರ್ನಾಟಕದ ವಿವಿಧ ಬಾಳೆ ಪ್ರಕಾರಗಳು ಅದರ ಸ್ವಾದ ಮತ್ತು ಪೌಷ್ಟಿಕತೆಯ ಕಾರಣಕ್ಕಾಗಿ ಜಾಗತಿಕ ಮಟ್ಟದಲ್ಲಿ ಪ್ರಸಿದ್ಧ ಪಡೆದಿರುವುದು ನಾಡಿನ ಹೆಮ್ಮೆಯೇ ಸರಿ.

ಇಡೀ ದೇಶದ ಬಾಳೆಹಣ್ಣು ಉತ್ಪಾದನೆಯಲ್ಲಿ 3ನೇ ಸ್ಥಾನದಲ್ಲಿರುವ ಕರ್ನಾಟಕದಲ್ಲಿ ವರ್ಷಕ್ಕೆ 1,277 ದಶಲಕ್ಷ ಟನ್ ಬಾಳೆ ಉತ್ಪಾದನೆಯಾಗುತ್ತಿದೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಉತ್ಪಾದನೆಯಾಗುವ ಬಾಳೆಯನ್ನು ರಾಜ್ಯವೂ ಸೇರಿದಂತೆ ಹೊರರಾಜ್ಯಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಬಾಳೆಯನ್ನು ಕೆ.ಜಿ ಲೆಕ್ಕದಲ್ಲಿ, ಇನ್ನು ಕೆಲವೆಡೆ ಡಜನ್ ಲೆಕ್ಕದಲ್ಲಿ ಮಾರಾಟ ಮಾಡಲಾಗುತ್ತದೆ.

ಬಾಳೆಹಣ್ಣು ಸಿಪ್ಪೆಯ ಜ್ಯೂಸ್

ಬಾಳೆಹಣ್ಣು ಸಿಪ್ಪೆಯನ್ನು ಬಳಸಿಕೊಂಡು ಜ್ಯೂಸ್ ತಯಾರಿಸುವ ತಂತ್ರಜ್ಞಾನವನ್ನು ಮೈಸೂರಿನ ಕೇಂದ್ರೀಯ ಆಹಾರ ತಂತ್ರಜ್ಞಾನ ಮತ್ತು ಸಂಶೋಧನಾ ಸಂಸ್ಥೆ (ಸಿಎಫ್​ಟಿಆರ್​ಐ) ವಿಜ್ಞಾನಿಗಳು ತಯಾರಿಸಿದ್ದಾರೆ. ಸಂಸ್ಥೆಯ ತ್ಯಾಜ್ಯ ಪುನರ್ ಬಳಕೆ ತಂತ್ರಜ್ಞಾನ ಯೋಜನೆ ಅಡಿಯಲ್ಲಿ ಈ ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಗಿದೆ. ಬಾಳೆಯ ಸಿಪ್ಪೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನಾರಿನ ಅಂಶ ಇರುವುದರಿಂದ, ಆರೋಗ್ಯಕ್ಕೂ ಪೂರಕ.

ದಿನವೂ ತಿನ್ನಿ ಬಾಳೆಹಣ್ಣು!

ಬಾಳೆಹಣ್ಣನ್ನು ರಕ್ತಹೀನತೆ, ರಕ್ತದೊತ್ತಡ, ಮಲಬದ್ಧತೆ, ಜಡತೆ, ಖಿನ್ನತೆ, ಎದೆಯುರಿ, ಬೊಜ್ಜು ನಿವಾರಣೆಗೆ ಹಾಗೂ ಉಷ್ಣ ನಿಯಂತ್ರಣಕ್ಕೆ ಬಳಸಲಾಗುತ್ತದೆ. ಪಕ್ವವಾಗದ, ಹಸಿರು ಬಾಳೆಹಣ್ಣುಗಳು ಜೀರ್ಣಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸುತ್ತವೆ. ಪಕ್ವ ಬಾಳೆಹಣ್ಣುಗಳು ಸೋಂಕಿನ ವಿರುದ್ಧ ಹೋರಾಡಲು ಸಹಾಯ ಮಾಡುತ್ತವೆ. ದೇಹದ ಬೊಜ್ಜು/ತೂಕ ಇಳಿಸಲು ಈ ಬಾಳೆಸಿಪ್ಪೆಯ ಜ್ಯೂಸ್ ಸಹಕಾರಿ.

ನಂಜನಗೂಡು ರಸಬಾಳೆ

ಮೈಸೂರು ಜಿಲ್ಲೆಯ ನಂಜನಗೂಡಿನ ರಸಬಾಳೆ ಕರ್ನಾಟಕದಲ್ಲಿ ಬೆಳೆಯುವ ವಿಶೇಷವಾದ ಬಾಳೆಹಣ್ಣು. ಇದು ನಂಜನಗೂಡು ಸಮೀಪದಲ್ಲಿರುವ ದೇವರಸನಹಳ್ಳಿ ಗ್ರಾಮದಿಂದ ಬಂದ ಬಾಳೆಹಣ್ಣಿನ ಜನಪ್ರಿಯ ತಳಿಯಾಗಿದೆ. ಪ್ರಸ್ತುತ ನಂಜನಗೂಡು, ಮೈಸೂರು ಹಾಗೂ ಚಾಮರಾಜನಗರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳೆಯಲಾಗುತ್ತದೆ. ಈ ಪ್ರದೇಶದ ಕಪ್ಪಮಣ್ಣಿನ ಫಲವತ್ತತೆಯಿಂದಾಗಿ ರಸಬಾಳೆಯ ರುಚಿ ಹಾಗೂ ಸುವಾಸನೆ ವಿಶಿಷ್ಟ. ಈ ಪ್ರದೇಶದ ಪರಂಪರೆಯ ಕೃಷಿ ಪದ್ಧತಿಗಳು ಮತ್ತು ನೈಸರ್ಗಿಕ ಪರಿಸರವು ಬಾಳೆಹಣ್ಣಿನ ಗುಣಮಟ್ಟವನ್ನು ನಿರಂತರವಾಗಿ ಕಾಯ್ದುಕೊಳ್ಳಲು ಸಹಾಯಕವಾಗಿವೆ. ಮೈಸೂರು ಅರಸರೂ ರಸಬಾಳೆಯ ರುಚಿಗೆ ಮನಸೋತಿದ್ದರು ಹಾಗೂ ಈ ಬೆಳೆಯನ್ನು ಪ್ರೋತ್ಸಾಹಿಸಿದರು. ರಸಬಾಳೆ ರುಚಿಯ ಜತೆ ಔಷಧ ಗುಣವನ್ನೂ ಹೊಂದಿದೆ.

ನಂಜನಗೂಡು ಬಾಳೆ ಭೌಗೋಳಿಕ ಸೂಚ್ಯಂಕ (ಜಿಐ ಟ್ಯಾಗ್) ಹೊಂದಿದೆ. ರಸಬಾಳೆಯನ್ನು ಸಾಂಪ್ರದಾಯಿಕ ಹಬ್ಬಗಳು ಮತ್ತು ಧಾರ್ವಿುಕ ಸಮಾರಂಭಗಳಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಈ ಬಾಳೆಹಣ್ಣು ಸ್ಥಳೀಯ ರೈತರಿಗೆ ಗಮನಾರ್ಹ ಆರ್ಥಿಕ ಲಾಭವನ್ನು ತಂದುಕೊಡುತ್ತದೆ.

ಕಮಲಾಪುರದ ಕೆಂಪು ಬಾಳೆ

ಕಮಲಾಪುರ ಕೆಂಪು ಬಾಳೆ ವಿಶೇಷವಾದ ತಳಿಯಾಗಿದ್ದು, ಕಲಬುರಗಿ ಜಿಲ್ಲೆಯ ಕಮಲಾಪುರ, ರಾಜನಾಳ್, ನವನಿಯಾಳ ಗ್ರಾಮ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳೆಯಲಾಗುತ್ತದೆ. ಇದರ ಸಿಪ್ಪೆ ಕೆಂಪು ಬಣ್ಣದ್ದಾಗಿದ್ದು, ತಿರುಳು ಕೆನೆ ಬಣ್ಣದಲ್ಲಿ ಆಹ್ಲಾದಕರ ರುಚಿ ಹೊಂದಿದೆ. ಇದು ವಿಟಮಿನ್ ಸಿ ಮತ್ತು ಬಿ6ನೊಂದಿಗೆ ಹೆಚ್ಚಿನ ಕ್ಯಾಲೋರಿ ಮೌಲ್ಯವನ್ನು ಹೊಂದಿದ್ದು ಆರೋಗ್ಯಕರ ಆಹಾರವಾಗಿದೆ. ಕಮಲಾಪುರದ ಕೆಂಪು ಬಾಳೆ ಇಲ್ಲಿಯ ರೈತರ ಬಾಳನ್ನೂ ಸಮೃದ್ಧವಾಗಿಸಿದೆ.

ಪ್ರಮುಖ ತಳಿಗಳು...

ಪುಟ್ಟಬಾಳೆ, ಪಚ್ಚ ಬಾಳೆ, ಏಲಕ್ಕಿ ಬಾಳೆ, ನೇಂದ್ರಬಾಳೆ, ಕದಳಿ ಬಾಳೆ, ಕಲ್ಲುಬಾಳೆ, ಬೂದುಬಾಳೆ, ಚಂದ್ರ ಬಾಳೆ, ಅವುಂಡೆ ಬಾಳೆ, ರಾಜ ಬಾಳೆ, ಉದಯಂ ಬಾಳೆ, ಕೆಂಪುಬಾಳೆ, ಬೆಂಗೂರು ಬೂದಿ, ಗಾಳಿ ಬಾಳೆ, ಮೈಸೂರು ಬಾಳೆ, ಸಾವಿರ ಕದಳಿ, ಪೂವನ್, ರೊಬಸ್ಟಾ, ಕ್ಯಾಂಡಿಸ್, ಕರಿಬಾಳೆ (ಇದು ಕರ್ನಾಟಕದ ಎಲ್ಲೆಡೆ ಬೆಳೆಯುವ ತಳಿ. ಇವು ರಸಭರಿತವಾಗಿದ್ದು, ತಿರುಳು ರುಚಿಯಾಗಿ ಸುವಾಸನೆಯಾಗಿರುತ್ತದೆ).

ಪ್ರಸಿದ್ಧ ಕವನ

ಕಯ್ಯಾರ ಕಿಞ್ಞಣ್ಣ ರೈ ಅವರ ‘ಹಣ್ಣು ಮಾರುವವನ ಹಾಡಿನ’ ಮೂಲಕ ಇದು ಕನ್ನಡ ಸಾಹಿತ್ಯ ಲೋಕದಲ್ಲೂ ಪ್ರಸಿದ್ಧವಾಗಿದೆ. ನಂಜನಗೂಡಿನ ರಸಬಾಳೆ ತಂದಿಹೆ ಕೊಡಗಿನ ಕಿತ್ತಳೆ, ಬೀದರ ಜಿಲ್ಲೆಯ ಸೀಬೆಯ ಹಣ್ಣು...

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net