

ಬರ್ಮಿಂಗ್ಹ್ಯಾಮ್: ಕಾಮನ್ವೆಲ್ತ್ ಗೇಮ್ಸ್ನಲ್ಲಿ ಭಾರತಕ್ಕೆ ಮತ್ತೊಂದು ಸ್ವರ್ಣ ಪದಕ ಒಲಿದಿದೆ. ಪುರುಷರ ವಿಭಾಗದ 67 ಕೆಜಿ ವೇಟ್ಲಿಫ್ಟಿಂಗ್ನಲ್ಲಿ ಸ್ಪರ್ಧೆಯಲ್ಲಿ ಭಾರತದ ಜೆರೆಮಿ ಲಾಲ್ರಾನುಂಗಾ ಮೊದಲ ಸ್ಥಾನ ಪಡೆಯುವ ಮೂಲಕ ಚಿನ್ನದ ಪದಕಕ್ಕೆ ಮುತ್ತಿಟ್ಟರು. ಈ ಬಾರಿಯ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಇದು ಎರಡನೇ ಚಿನ್ನದ ಪದಕ.
ಚಿನ್ನದ ಪದಕ ಗೆದ್ದ ನಂತರ ಮಾತನಾಡಿದ ಜೆರೆಮಿ, ಚಿನ್ನದ ಪದಕ ಬಂದದ್ದು ನನಗೆ ಸಂತೋಷವಾಗಿದೆ. ಆದರೆ ನನ್ನ ಪ್ರದರ್ಶನ ತೃಪ್ತಿಕರವಾಗಿಲ್ಲ. ನಾನು ಇನ್ನಷ್ಟು ಉತ್ತಮ ಪ್ರದರ್ಶನ ನೀಡಬೇಕಿತ್ತು... ಎಂದ ಅವರು, ದೇಶಕ್ಕಾಗಿ ಚಿನ್ನ ಗೆಲ್ಲುವುದು ಹೆಮ್ಮೆಯ ಕ್ಷಣ ಎಂದಿದ್ದಾರೆ.
ಶುಕ್ರವಾರ ರಾತ್ರಿ ಕಾಮನ್ವೆಲ್ತ್ ಗೇಮ್ಸ್ಗೆ ಅದ್ದೂರಿ ಚಾಲನೆ ಸಿಕ್ಕಿತ್ತು. ಶನಿವಾರದಿಂದ ಸ್ಪರ್ಧೆಗಳು ಆರಂಭವಾಗಿದ್ದು, ಮೊದಲ ದಿನವೇ ಭಾರತಕ್ಕೆ ಚಿನ್ನ, ಬೆಳ್ಳಿ, ಕಂಚಿನ ಪದಕ ಒಲಿದಿತ್ತು. ಪದಕ ಬೇಟೆ ಭಾನುವಾರವೂ ಮುಂದುವರಿದಿದ್ದು, ವೇಟ್ಲಿಫ್ಟಿಂಗ್ನಲ್ಲಿ ಬಿಂದ್ಯಾರಾಣಿ ದೇವಿ ಬೆಳ್ಳಿ ಪದಕವನ್ನು ಮುಡಿಗೇರಿಸಿಕೊಂಡರು. ಬಳಿಕ ಜೆರೆಮಿ ಸ್ವರ್ಣ ಪದಕಕ್ಕೆ ಕೊರಳೊಡ್ಡಿದರು.
ಚಿನ್ನ ಎತ್ತಿದ ಮೀರಾ: ಟೋಕಿಯೊ ಒಲಿಂಪಿಕ್ಸ್ನಲ್ಲಿ ರಜತ ಗೆದ್ದು ಇತಿಹಾಸ ನಿರ್ಮಿಸಿದ್ದ ಮಣಿಪುರದ ವೇಟ್ಲಿಫ್ಟರ್ ಮೀರಾಬಾಯಿ ಚಾನು ಬರ್ಮಿಂಗ್ಹ್ಯಾಂನಲ್ಲಿ ಶನಿವಾರ ಚಿನ್ನಕ್ಕೆ ಮುತ್ತಿಕ್ಕಿದರು. ಮಹಿಳೆಯರ 49 ಕೆಜಿ ವಿಭಾಗದಲ್ಲಿ ಮೀರಾ ಅನಾಯಾಸವಾಗಿ ಬಂಗಾರ ಬೇಟೆಯಾಡಿದರು.
ಸಂಕೇತ್ಗೆ ರಜತ: ಮಹಾರಾಷ್ಟ್ರದ ಯುವ ವೇಟ್ಲಿಫ್ಟರ್ ಸಂಕೇತ್ ಸರ್ಗರ್ 55 ಕೆಜಿ ವಿಭಾಗದಲ್ಲಿ ರಜತ ಸಂಭ್ರಮ ಕಂಡರು. 21 ವರ್ಷದ ಸಂಕೇತ್ ಒಟ್ಟು 248 ಕೆಜಿ ಎತ್ತಿದರೆ, ಅವರಿಗಿಂತ ಕೇವಲ 1 ಕೆಜಿ ಭಾರ ಹೆಚ್ಚು ಎತ್ತಿದ ಮಲೇಷ್ಯಾದ ಅನಿಕ್ ಚಿನ್ನ ಒಲಿಸಿಕೊಂಡರು.
ಕನ್ನಡಿಗನಿಗೆ ಕಂಚಿನ ಹಾರ: ಕುಂದಾಪುರದ ವೇಟ್ಲಿಫ್ಟರ್ ಗುರುರಾಜ ಪೂಜಾರಿ ಒಟ್ಟು 269 ಕೆಜಿ ಭಾರ ಎತ್ತಿ ಕಂಚಿನ ಪದಕಕ್ಕೆ ಕೊರಳೊಡ್ಡಿದರು. ಕಾಮನ್ವೆಲ್ತ್ ಗೇಮ್ಸ್ನಲ್ಲಿ ಇದು ಅವರಿಗೆ 2ನೇ ಪದಕವಾಗಿದೆ. 2018ರ ಗೋಲ್ಡ್ಕೋಸ್ಟ್ ಗೇಮ್ಸ್ನಲ್ಲಿ ಅವರು ರಜತ ಗೆದ್ದಿದ್ದರು.
ಬಿಂದ್ಯಾರಾಣಿ ದೇವಿಗೆ ಬೆಳ್ಳಿ: ವೇಟ್ಲಿಫ್ಟಿಂಗ್ನ 55 ಕೆಜಿ ವಿಭಾಗದಲ್ಲಿ 2ನೇ ಸ್ಥಾನ ಪಡೆಯುವ ಮೂಲಕ ಭಾನುವಾರ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದಾರೆ.