

ತಿರುವನಂತಪುರಂ: ಸೆ.16ರ ಮಧ್ಯಾಹ್ನ 2.30ರ ಸುಮಾರಿಗೆ ಊಟ ಮಾಡಲೆಂದು ಐಎಎಸ್ ಅಧಿಕಾರಿ ಆನಂದ್ಸಿಂಗ್ ಅವರು ಅಪಾರ್ಟ್ಮೆಂಟ್ ಬಳಿ ಬರುತ್ತಿದ್ದಂತೆ ಏನೋ ಶಬ್ದ ಕೇಳಿಸಿತ್ತು. ಆ ದಿಕ್ಕಿನತ್ತ ಹೋಗಿ ನೋಡಿದ್ರೆ ಸೆಕ್ಯೂರಿಟಿ ಸಿಬ್ಬಂದಿಗಳು ಚೀರಾಡುತ್ತಿದ್ದರು. ಹತ್ತಿರ ಹೋಗಿ ನೋಡಿದ್ರೆ ತನ್ನ ಪ್ರೀತಿಯ ಮಗಳು ಭವ್ಯ ರಕ್ತದ ಮಡುವಿನಲ್ಲಿ ಬಿದ್ದಿದ್ದ ದೃಶ್ಯ! ಅಯ್ಯೋ ಮಗಳೇ ಏನಾಯ್ತವ್ವ ಎಂದು ನೋಡುವಷ್ಟರಲ್ಲಿ ಆಕೆ ಬದುಕಿಲ್ಲ ಎಂಬ ಸತ್ಯ ಅರಿವಾಗಿ ಅಧಿಕಾರಿಯ ಆಕ್ರಂದ ಮುಗಿಲು ಮುಟ್ಟಿತ್ತು.
ಅಷ್ಟೊತ್ತಿಗೆ ಮನೆಯೊಳಗಿದ್ದ ಆನಂದ್ಸಿಂಗ್ರ ಪತ್ನಿ ಮತ್ತು ಇನ್ನೊಬ್ಬ ಮಗಳಿಗೆ ಭವ್ಯಾಳ ಸಾವಿನ ಸುದ್ದಿ ತಿಳಿದಿದ್ದು, ಅವರೂ ಸ್ಥಳಕ್ಕೆ ಓಡೋಡಿ ಬಂದು ಆಕ್ರಂದಿಸುತ್ತಿದ್ದ ದೃಶ್ಯ ಮನಕಲಕುವಂತಿತ್ತು. ಇಂತಹ ಹೃದಯವಿದ್ರಾವಕ ಘಟನೆ ಕೇರಳದ ಕೌಡಿಯಾರ್‌ನಲ್ಲಿರುವ ನಿಕುಂಜಮ್ ಫಾರ್ಚೂನ್ ಅಪಾರ್ಟ್‌ಮೆಂಟ್‌ನಲ್ಲಿ ಸಂಭವಿಸಿದೆ.
ಐಎಎಸ್ ಅಧಿಕಾರಿ ಆನಂದ್ ಸಿಂಗ್ ಅವರ ಮಗಳು ಭವ್ಯಾ ಸಿಂಗ್(16) ಮೃತ ಬಾಲಕಿ. ಪಿಡಬ್ಲ್ಯುಡಿ ಕಾರ್ಯದರ್ಶಿ ಆಗಿರುವ ಆನಂದ್ ಸಿಂಗ್ ಕುಟುಂಬಸ್ಥರೊಂದಿಗೆ ಅಪಾರ್ಟ್ಮೆಂಟ್ನ 9ನೇ ಮಹಡಿಯ ಮನೆಯಲ್ಲಿ ವಾಸವಿದ್ದಾರೆ. ತಂದೆ ಊಟಕ್ಕೆ ಬರುವ ವೇಳೆಗೆ ಮಗಳು ಭವ್ಯಾ 9ನೇ ಮಹಡಿಯಿಂದ ಬಿದ್ದು ಪ್ರಾಣಬಿಟ್ಟಿದ್ದಳು.
ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. 9ನೇ ಮಹಡಿಯಲ್ಲಿ ಮನೆಯ ಬಾಲ್ಕನಿಯಿಂದ ಭವ್ಯಾ ಆಕಸ್ಮಿಕವಾಗಿ ಬಿದ್ದು ಸತ್ತಿದ್ದಾಳೆ ಎಂದು ಶಂಕಿಸಲಾಗಿದೆ. ಪೊಲೀಸರು ಸಿಸಿಟಿವಿ ಫೂಟೇಜ್ಗಳನ್ನ ಪರಿಶೀಲಿಸಿದ್ದು, ತನಿಖೆ ಮುಂದುವರಿಸಿದ್ದಾರೆ. ಆನಂದ್ ಸಿಂಗ್ ಕೇರಳ ಕೇಡರ್ನ 2020ರ ಬ್ಯಾಚ್ನ ಐಎಎಸ್ ಅಧಿಕಾರಿ.