

ಹೈದರಾಬಾದ್: ಇಂದು ಬೆಳ್ಳಂಬೆಳಗ್ಗೆ ಭೀಕರ ಅಪಘಾತ ಸಂಭವಿಸಿದ್ದು, ಹೈದರಾಬಾದ್ ಸೈಬರ್ ಕ್ರೈಂ ವಿಭಾಗದ ಎಸಿಪಿ ಕೆವಿಎಂ ಪ್ರಸಾದ್ ಅವರ ಪತ್ನಿ ಸೇರಿ ಮೂವರು ಮೃತಪಟ್ಟಿದ್ದಾರೆ.
ಎಸಿಪಿ ಕುಟುಂಬಸ್ಥರು ಸಂಬಂಧಿಕರ ಮದುವೆ ಕಾರ್ಯಕ್ರಮಕ್ಕೆಂದು ಪ್ರಕಾಶಂ ಜಿಲ್ಲೆಯ ಚಿರಾಲಕ್ಕೆ ಹೋಗಿ ಕಾರಿನಲ್ಲಿ ವಾಪಸ್ ಆಗುತ್ತಿದ್ದರು. ಮಾರ್ಗ ಮಧ್ಯೆ ಕೀಸರ ತಾಲೂಕಿನ ಯಾದ್ಗಾರಪಲ್ಲಿಯ ಔಟರ್ ರಿಂಗ್ ರಸ್ತೆಯಲ್ಲಿ ನಿಯಂತ್ರಣ ತಪ್ಪಿದ ಕಾರು ರಸ್ತೆ ಡಿವೈಡರ್ಗೆ ಡಿಕ್ಕಿ ಹೊಡೆದಿದೆ.
ಡಿಕ್ಕಿ ಹೊಡೆದ ರಭಸಕ್ಕೆ ಕಾರಿನಲ್ಲಿದ್ದ ಕೆವಿಎಂ ಪ್ರಸಾದ್ ಅವರ ಪತ್ನಿ ಕೆ.ಶಂಕರಮ್ಮ(48), ಪ್ರಸಾದ್ ಅವರ ತಂಗಿ ರೇಣುಕಾ(42)ಮತ್ತು ಇವರ ಪತಿ ಕೆ.ಬಾಲಕೃಷ್ಣ(48) ಮೃತಪಟ್ಟಿದ್ದು, ಎಸಿಪಿ ಕೆವಿಎಂ ಪ್ರಸಾದ್ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ.