ಪ್ರೀತಿ, ಸಹಬಾಳ್ವೆಯ ಪಾಠ ಹೇಳಿಹೋದ ಮಾನವತಾವಾದಿ

ವಿಜಯವಾಣಿ (4)
Published on

ರೋಮನ್ ಕ್ಯಾಥೋಲಿಕ್​ನ ಮೊದಲ ಲ್ಯಾಟಿನ್ ಅಮೆರಿಕನ್ ಮೂಲದ ಪೋಪ್ ಫ್ರಾನ್ಸಿಸ್ (88) ಸೋಮವಾರ ಬೆಳಗ್ಗೆ ನಿಧನರಾದರು. ಹಲವು ಸುಧಾರಣೆಗಳನ್ನು ತಂದಿದ್ದ ಧೀಮಂತ ಫ್ರಾನ್ಸಿಸ್ ಭಗವಂತನ ಮತ್ತು ಚರ್ಚ್​ನ ಸೇವೆಗೆ ಜೀವನವನ್ನು ಮುಡಿಪಾಗಿಟ್ಟಿದ್ದರು. ಅವರ ಜೀವನಯಾನದ ಮಾಹಿತಿ ಇಲ್ಲಿದೆ. ವ್ಯಾಟಿಕನ್ ಆಡಳಿತದಲ್ಲಿ ಹೊಸತನ ಮತ್ತು ಸುಧಾರಣೆಗಳನ್ನು ತರುವುದು ಸುಲಭದ ಮಾತಾಗಿರಲಿಲ್ಲ. ಇದಕ್ಕೆ ಸಾಕಷ್ಟು ವಿರೋಧಗಳು ಬರುತ್ತವೆ ಎಂಬುದನ್ನು ಪೋಪ್ ಫ್ರಾನ್ಸಿಸ್ ನಿರೀಕ್ಷಿಸಿದ್ದರು. ಆದರೆ, ಅವರು ತಮ್ಮ ಅಚಲ ನಿರ್ಧಾರ ಮತ್ತು ಸುಧಾರಣಾ ನೀತಿಗಳಿಂದ ಹಿಂದೆ ಸರಿಯಲಿಲ್ಲ. ಸತತ ಪ್ರಯತ್ನಗಳಿಂದ ವ್ಯಾಟಿಕನ್ ಆಡಳಿತದಲ್ಲಿ ಪಾರದರ್ಶಕತೆ ತಂದರು.

ಯುದ್ಧ ಮತ್ತು ಅಶಾಂತಿಯನ್ನು ತೀವ್ರವಾಗಿ ವಿರೋಧಿಸಿದರು. ಕರುಣೆ, ಪ್ರೀತಿ, ಸೌಹಾರ್ದದ ದಾರಿಯಲ್ಲಿ ಸಾಗಲು ಕರೆ ನೀಡಿ, ಆ ನಿಟ್ಟಿನಲ್ಲಿ ಪ್ರೇರಣೆ ಒದಗಿಸಿದರು. ‘ಟೈಮ್ ಮ್ಯಾಗಜಿನ್ 2013ರ ಡಿಸೆಂಬರ್​ನಲ್ಲಿ ಪೋಪ್ ಫ್ರಾನ್ಸಿಸ್ ಅವರನ್ನು ವರ್ಷದ ವ್ಯಕ್ತಿ (ಪರ್ಸನ್ ಆಫ್ ದ ಇಯರ್) ಎಂದು ಆಯ್ಕೆ ಮಾಡಿತ್ತು. ಕ್ಯಾಥೋಲಿಕ್ ಆಡಳಿತದಲ್ಲಿ ತಂದ ಬದಲಾವಣೆ ಮತ್ತು ಹೊಸತನ ಜಾಗತಿಕವಾಗಿ ಗಮನ ಸೆಳೆದಿತ್ತು. ಜಾಗತಿಕ ನಾಯಕರು ಪೋಪ್ ಅವರನ್ನು ಭೇಟಿ ಮಾಡಿ ಮಾರ್ಗದರ್ಶನ ಪಡೆಯುತ್ತಿದ್ದರು.

ಜೀವನಯಾನ...

  • ಪೋಪ್ ಫ್ರಾನ್ಸಿಸ್ ಅವರ ಪೂರ್ವದ ಹೆಸರು ಜಾರ್ಜ್ ಮಾರಿಯೊ ಬರ್ಗೆಗ್ಲಿಯೋ. ಅವರು 1936ರ ಡಿಸೆಂಬರ್ 17ರಂದು ಅರ್ಜೆಂಟೀನಾದ ಬ್ಯೂನೆಸ್ ಏರಿಸ್​ನಲ್ಲಿ ಜನಿಸಿದರು. ಮರಿಯೋ ಜೋಸ್ ಮತ್ತು ರೆಜಿನಾ ಮರಿಯಾ ದಂಪತಿಯ ಐವರು ಮಕ್ಕಳಲ್ಲಿ ಇವರು ಹಿರಿಯರು. ಇಟಲಿಯಿಂದ ಅರ್ಜೆಂಟೀನಾಗೆ ವಲಸೆ ಬಂದ ಮಧ್ಯಮ ವರ್ಗದ ಕುಟುಂಬ ಇವರದ್ದು.
  • ರೋಮನ್ ಕ್ಯಾಥೋಲಿಕ್ ಚರ್ಚ್​ನ 266ನೇ ಪೋಪ್ ಆಗಿ 2013ರಲ್ಲಿ ಆಯ್ಕೆಯಾದರು. ಲ್ಯಾಟಿನ್ ಅಮೆರಿಕದಿಂದ ಆಯ್ಕೆಯಾದ ಮೊದಲ ಪೋಪ್ ಆಗಿದ್ದರು. ಸಾಮಾಜಿಕ ನ್ಯಾಯ ಮತ್ತು ಪರಿಸರ ಸಮಸ್ಯೆಗಳ ಬಗ್ಗೆ ಸದಾ ದನಿ ಎತ್ತುತ್ತಿದ್ದರು.
  • ಇವರು 17ನೇ ವಯಸ್ಸಿನಲ್ಲಿಯೇ ಅಧ್ಯಾತ್ಮದತ್ತ ಒಲವು ಹೊಂದಿ ಸೆಮಿನರಿ ಸೇರಿದರು. ಶ್ರಮಜೀವಿಗಳ ಪ್ರತಿನಿಧಿಯಂತೆ ಗುರುತಿಸಿಕೊಂಡಿದ್ದ ಇವರು ಬ್ಯೂನೆಸ್ ಏರಿಸ್​ನ ವಸತಿ ಸಮುಚ್ಛಯದಲ್ಲಿ ವಾಸವಾಗಿದ್ದರು. ಕೊಳೆಗೇರಿಗಳಿಗೆ ತೆರಳಿ ಬಡವರ ಸೇವೆಯಲ್ಲಿ ನಿರತರಾಗುತ್ತಿದ್ದರು. ಜತೆಗೆ ಬಡವರು, ಶ್ರಮಿಕರು ಮತ್ತು ಅನಾಥರ ಮೇಲೆ ಎಲ್ಲಿಲ್ಲದ ಅಕ್ಕರೆ. ಅವರ ಸೇವೆಯಲ್ಲಿ ಸಾರ್ಥಕತೆ ಕಾಣುತ್ತಿದ್ದರು.
  • ಅಧ್ಯಾತ್ಮ ಮತ್ತು ಸೇವೆಯಲ್ಲಿ ಆಸಕ್ತಿ ಹೆಚ್ಚಾಗಿ 1958ರಲ್ಲಿ ಧಾರ್ವಿುಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ನಿರ್ಧರಿಸಿ ಫ್ರಾನ್ಸಿಸ್ ಆದರು. 1969ರಲ್ಲಿ ಕ್ಯಾಥೋಲಿಕ್ ಪುರೋಹಿತರಾದರು.
  • 1973ರಿಂದ 1979ರ ತನಕ ಅರ್ಜೆಂಟೀನಾದ ಜೆಸುಟ್ ಪ್ರಾವಿನ್ಶಲ್ ಸುಪೀರಿಯರ್ ಆಗಿದ್ದರು. 1998ರಲ್ಲಿ ಬ್ಯೂನೆಸ್ ಏರಿಸ್​ನ ಆರ್ಚ್​ಬಿಷಪ್, 2001ರಲ್ಲಿ ಕಾರ್ಡಿನಲ್ ಆದರು.
  • ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ದೀನರನ್ನು, ಅಂಗವಿಕಲರನ್ನು, ನಿರುದ್ಯೋಗಿಗಳನ್ನು ಹಾಗೂ ನಿರ್ಗತಿಕರನ್ನು ಪೋಪ್ ಫ್ರಾನ್ಸಿಸ್ ಚರ್ಚ್ ಜತೆ ಜೋಡಿಸಿದರು. ಅಷ್ಟೇ ಅಲ್ಲ, ವಸಾಹತುಶಾಹಿ ಕಾಲದಿಂದ ಚರ್ಚ್​ನ ಅಪರಾಧಗಳಿಗಾಗಿ ಕ್ಷಮೆಯಾಚಿಸಿದ್ದರು.
  • ಜಗತ್ತಿನಲ್ಲಿ ಶಾಂತಿ ಸ್ಥಾಪನೆಗಾಗಿ ಪ್ರಯತ್ನಿಸಿದರು. ಈ ನಿಟ್ಟಿನಲ್ಲಿ ರಷ್ಯಾದ ನಾಯಕರೊಂದಿಗೆ ಮಾತುಕತೆ ನಡೆಸಿದರು. ಇರಾಕ್​ಗೂ ಭೇಟಿ ನೀಡಿ ಶಾಂತಿಯ ಮಹತ್ವ ತಿಳಿಹೇಳಿದ್ದರು.

ಮುಂದಿನ ಪೋಪ್ ಯಾರು?

ನೂತನ ಪೋಪ್ ಸ್ಥಾನಕ್ಕೆ ಕೇಳಿಬರುತ್ತಿರುವ ಪ್ರಮುಖ ಹೆಸರುಗಳು ಲೂಯಿಸ್ ಆಂಟೋನಿಯೊ ಟ್ಯಾಗ್ಲೆ (ಫಿಲಿಪೈನ್ಸ್) ಪಿಯೆಟ್ರೊ ಪರೋಲಿನ್ (ಇಟಲಿ) ಪೀಟರ್ ಟರ್ಕ್ಸನ್ (ಘಾನಾ) ಪೀಟರ್ ಎಡೋ (ಹಂಗೇರಿ) ಏಂಜೊಲೊ ಸ್ಕೋಲಾ (ಇಟಲಿ)

ಇತರ ಹೆಸರುಗಳು: ಮ್ಯಾಟಿಯೊ ಜುಪು್ಪ, ಗೆರ್ಹಾರ್ಡ್ ಮುಲ್ಲರ್, ಏಂಜೆಲೊ ಬಾಗ್ನಾಸ್ಕೊ, ರೇಮಂಡ್ ಬುರ್ಕ್, ರಾಬರ್ಟ್ ಸಾರಾ ಮತ್ತು ಮಾಲ್ಕಮ್ ರಂಜೀತ್ ಅವರೂ ಮುಂದಿನ ಪೋಪ್ ಆಗುವವರ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದಾರೆ.

ಈಡೇರಲಿಲ್ಲ ಭಾರತ ಭೇಟಿಯ ಕನಸು

ರೋಮನ್ ಕ್ಯಾಥೋಲಿಕ್ ಚರ್ಚ್​ನ ಪ್ರಧಾನ ಧರ್ಮಗುರು ಪೋಪ್ ಫ್ರಾನ್ಸಿಸ್ ಭಾರತ ಭೇಟಿ ಕೊನೆಗೂ ಸಾಧ್ಯವಾಗಲೇ ಇಲ್ಲ. 2021 ಮತ್ತು 2024ರಲ್ಲಿ ಎರಡು ಬಾರಿ ಪೋಪ್ ಅವರನ್ನು ಭೇಟಿ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ ಭಾರತಕ್ಕೆ ಭೇಟಿ ನೀಡುವಂತೆ ಅವರನ್ನು ಆಹ್ವಾನಿಸಿದ್ದರು. 2024ರ ಡಿಸೆಂಬರ್​ನಲ್ಲಿ ವ್ಯಾಟಿಕನ್ ಸಿಟಿಗೆ ಭೇಟಿ ನೀಡಿದ್ದ ಕೇಂದ್ರ ಸಚಿವ ಜಾರ್ಜ್ ಕುರಿಯನ್, ಪೋಪ್ ಫ್ರಾನ್ಸಿಸ್ 2025ರ ನಂತರ ಭಾರತಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ ಎಂದು ಹೇಳಿದ್ದರು. 2021ರ ಅಕ್ಟೋಬರ್​ನಲ್ಲಿ ರೋಮ್ಲ್ಲಿ ನಡೆದ ಜಿ20 ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ವಿದೇಶಾಂಗ ಸಚಿವ ಎಸ್.ಜೈಶಂಕರ್ ವ್ಯಾಟಿಕನ್ ಸಿಟಿಯಲ್ಲಿ ಪೋಪ್ ಫ್ರಾನ್ಸಿಸ್ ಅವರನ್ನು ಮೊದಲ ಬಾರಿ ಭೇಟಿ ಮಾಡಿದ್ದರು. ಬಳಿಕ 2024ರ ಜೂನ್​ನಲ್ಲಿ ಇಟಲಿಯ ಅಪುಲಿಯಾದಲ್ಲಿ ನಡೆದ ಜಿ7 ಶೃಂಗ ಸಭೆಯ ಸಂದರ್ಭದಲ್ಲಿ ಪೋಪ್ ಫ್ರಾನ್ಸಿಸ್ ಅವರನ್ನು ಭೇಟಿಯಾದ ಮೋದಿ ಭಾರತಕ್ಕೆ ಭೇಟಿ ನೀಡುವಂತೆ ಎರಡನೇ ಬಾರಿ ಆಹ್ವಾನ ನೀಡಿದ್ದರು. 1999ರಲ್ಲಿ ಪೋಪ್ ಜಾನ್ ಪಾಲ್ ಅವರು ಕೊನೆಯದಾಗಿ ಭಾರತಕ್ಕೆ ಭೇಟಿ ನೀಡಿದ್ದರು. ಅದಕ್ಕೂ ಮುನ್ನ ಪೋಪ್ ಜಾನ್ ಪಾಲ್|| 1986ರ ಫೆಬ್ರವರಿಯಲ್ಲಿ ಭಾರತಕ್ಕೆ ಭೇಟಿ ನೀಡಿದ್ದರು.

ಉತ್ತರಾಧಿಕಾರಿ ಆಯ್ಕೆ ಹೇಗೆ?

  • ಪೋಪ್ ಆಯ್ಕೆಯು ವ್ಯಾಟಿಕನ್ ಸಂಪ್ರದಾಯದಂತೆ ನಡೆಯುತ್ತದೆ. ಕಾಲೇಜ್ ಆಫ್ ಕಾರ್ಡಿನಲ್ಸ್ ಸದಸ್ಯರು ರಹಸ್ಯ ಮತದಾನದ ಮೂಲಕ ಹೊಸ ಪೋಪ್ ಅವರನ್ನು ಆಯ್ಕೆ ಮಾಡುತ್ತಾರೆ. 80 ವರ್ಷ ಮೇಲ್ಪಟ್ಟವರಿಗೆ ಮತ ಚಲಾಯಿಸುವ ಹಕ್ಕು ಇರುವುದಿಲ್ಲ.
  • ಪ್ರಸ್ತುತ ಕಾಲೇಜ್ ಆಫ್ ಕಾರ್ಡಿನಲ್ಸ್​ನಲ್ಲಿ 138 ಸದಸ್ಯರು ಮತದಾನಕ್ಕೆ ಅರ್ಹರಾಗಿದ್ದಾರೆ. ಈ ಪೈಕಿ ಭಾರತದ ನಾಲ್ವರು ಇದ್ದಾರೆ. ಭಾರತದಲ್ಲಿ ಒಟ್ಟು 6 ಕಾರ್ಡಿನಲ್​ಗಳಿದ್ದು, ಅವರಲ್ಲಿ ಕಾರ್ಡಿನಲ್ ಫಿಲಿಪ್ ನೆರಿ ಫೆರಾವ್, ಕಾರ್ಡಿನಲ್ ಕ್ಲೀಮಿಸ್ ಬಸೇಲಿಯೊಸ್, ಕಾರ್ಡಿನಲ್ ಅಂಥೋನಿ ಪೂಲಾ, ಕಾರ್ಡಿನಲ್ ಜಾರ್ಜ್ ಜಾಕೋಬ್ ಕೂವಕಾಡ್ ಅವರು ಪೋಪ್ ಚುನಾವಣೆಯಲ್ಲಿ ಮತ ಚಲಾಯಿಸಲಿದ್ದಾರೆ.
  • ಯುರೋಪ್ ಅತಿ ಹೆಚ್ಚು ಕಾರ್ಡಿನಲ್​ಗಳನ್ನು ಹೊಂದಿದ್ದು, ಆಫ್ರಿಕಾ, ಲ್ಯಾಟಿನ್ ಅಮೆರಿಕ ನಂತರದ ಸ್ಥಾನಗಳಲ್ಲಿವೆ.
  • ಪೋಪ್ ನಿಧನರಾದ 15ರಿಂದ 20 ದಿನಗಳ ಒಳಗೆ ಹೊಸ ಪೋಪ್ ಆಯ್ಕೆ ಮಾಡಬೇಕು. ಇದಕ್ಕಾಗಿ ವಿಶ್ವದ ವಿವಿಧ ಭಾಗಗಳಲ್ಲಿರುವ ಕಾರ್ಡಿನಲ್​ಗಳು ವ್ಯಾಟಿಕನ್ ಸಿಟಿಯಲ್ಲಿ ಸೇರುತ್ತಾರೆ. ಸರಣಿ ಸಭೆಯ ನಂತರ ಸಿಸ್ಟಿನ್ ಚಾಪೆಲ್​ನಲ್ಲಿ ರಹಸ್ಯ ಮತದಾನ ನಡೆಯುತ್ತದೆ. ಹೊಸ ಪೋಪ್ ಆಯ್ಕೆ ಮಾಡಲು ಮೂರನೇ ಎರಡರಷ್ಟು ಬಹುಮತದ ಅಗತ್ಯವಿರುತ್ತದೆ. ಬಹುಮತ ಸಿಗುವವರೆಗೂ ಮತದಾನ ಮುಂದುವರಿಯುತ್ತದೆ.
  • ಪ್ರತಿ ಸುತ್ತಿನಲ್ಲಿಯೂ ಅಭ್ಯರ್ಥಿ ಆಯ್ಕೆಯಾಗದೆ ಹೋದರೆ (ಮೂರನೇ ಎರಡರಷ್ಟು ಬಹುಮತ ಪಡೆಯಲು ವಿಫಲವಾದರೆ), ಆ ಬ್ಯಾಲೆಟ್ ಪೇಪರ್​ಗಳನ್ನು ಸುಡಲಾಗುತ್ತದೆ. ಆಗ ಸಿಸ್ಟಿನ್ ಚಾಪೆಲ್ ಚಿಮಣಿಯಲ್ಲಿ ಕಪು್ಪ ಹೊಗೆ ಕಾಣಿಸಿಕೊಳ್ಳುತ್ತದೆ. ಇದು ಪೋಪ್ ಆಯ್ಕೆಯಾಗಿಲ್ಲ ಎಂಬುದನ್ನು ಸೂಚಿಸುತ್ತದೆ. ಯಾವಾಗ ಬಿಳಿ ಹೊಗೆ ಕಾಣಿಸುತ್ತದೆಯೋ, ಆಗ ಹೊಸ ಪೋಪ್ ಆಯ್ಕೆಯಾಗಿ ದ್ದಾರೆ ಎಂದರ್ಥ. ಹೊಗೆಯ ಬಣ್ಣ ಕಪ್ಪು ಅಥವಾ ಬಿಳಿ ಆಗಲು ಭಿನ್ನ ರಾಸಾಯನಿಕಗಳನ್ನು ಬಳಸಲಾಗುತ್ತದೆ ಎಂದು ಹೇಳಲಾಗಿದೆ.
  • ಹೊಸ ಪೋಪ್ ಆಯ್ಕೆಯಾಗುವವರೆಗಿನ ಅವಧಿಯನ್ನು ಕ್ಯಾಥೋಲಿಕ್ ಚರ್ಚ್​ನ ‘ಸೆಡ್ ವೆಕೆಂಟೆ’ (ಖಾಲಿ ಅವಧಿ) ಎಂದು ಕರೆಯಲಾಗುತ್ತದೆ. ಈ ಅವಧಿಯಲ್ಲಿ ದೈನಂದಿನ ಕೆಲಸಗಳನ್ನು ಹಿರಿಯ ಕಾರ್ಡಿನಲ್ ನಿರ್ವಹಿಸುತ್ತಾರೆ. ಕಾರ್ಡಿನಲ್ ಅವರನ್ನು ‘ಕ್ಯಾಮೆರ್ಲೆಂಗೊ’ ಎಂದು ಸಂಬೋಧಿಸಲಾಗುತ್ತದೆ. 2019ರಲ್ಲಿ ಪೋಪ್ ಫ್ರಾನ್ಸಿಸ್ ನೇಮಿಸಿದ ಐರಿಷ್-ಅಮೆರಿಕನ್ ಕೆವಿನ್ ಫಾರೆಲ್ ಅವರು ಈ ಸನ್ನಿವೇಶದಲ್ಲಿ ಆ ಕೆಲಸವನ್ನು ನಿರ್ವಹಿಸಲಿದ್ದಾರೆ. ‘ಕ್ಯಾಮೆರ್ಲೆಂಗೊ’ ಹೊರತುಪಡಿಸಿ ಚರ್ಚ್​ನ ಅಧಿಕಾರದಲ್ಲಿರುವ ಎಲ್ಲರೂ ಪೋಪ್ ನಿಧನದ ನಂತರ ಕೂಡಲೇ ರಾಜೀನಾಮೆ ನೀಡಬೇಕಾಗುತ್ತದೆ.

ಫ್ರಾನ್ಸಿಸ್ ಕೊನೆಯ ಸಂದೇಶ

ಈಸ್ಟರ್ ಭಾನುವಾರದ ಪ್ರಯುಕ್ತ ಮೊನ್ನೆ (ಏಪ್ರಿಲ್ 20) ಸೇಂಟ್ ಪೀಟರ್ ಬೆಸಿಲಿಕದಲ್ಲಿ ಗಾಲಿಕುರ್ಚಿಯಲ್ಲಿಯೇ ಕುಳಿತು ಅನುಯಾಯಿಗಳಿಗೆ ದರ್ಶನ ನೀಡಿದ್ದರು. ಈ ವೇಳೆ ಪೋಪ್ ಫ್ರಾನ್ಸಿಸ್ ಅವರ ಲಿಖಿತ ಭಾಷಣವನ್ನು ಅವರ ಸಹವರ್ತಿ ವಾಚಿಸಿದ್ದರು. ನಾವು ಸಾವಿಗಾಗಿ ಅಲ್ಲ, ಬದುಕುವುದಕ್ಕಾಗಿ ಇಲ್ಲಿ ಇದ್ದೇವೆ. ಧಾರ್ವಿುಕ ಸ್ವಾತಂತ್ರ್ಯ ಮತ್ತು ಇತರರ ಅಭಿಪ್ರಾಯಗಳನ್ನು ಗೌರವಿಸದ ಹೊರತು ಜಗತ್ತಿನಲ್ಲಿ ಶಾಂತಿ ಸ್ಥಾಪಿಸಲು ಸಾಧ್ಯವಿಲ್ಲ. ಯುದ್ಧದಿಂದ ನಲುಗಿರುವ ಯೂಕ್ರೇನ್​ಗೆ ಈಸ್ಟರ್ ಉಡುಗೊರೆಯಾಗಿ ಆ ದೇವರು ಶಾಂತಿಯನ್ನು ದಯಪಾಲಿಸಲಿ. ಶಾಶ್ವತ ಶಾಂತಿಗಾಗಿ ನಡೆಯುತ್ತಿರುವ ಎಲ್ಲ ಪ್ರಯತ್ನಗಳು ಸಫಲವಾಗಲಿ. ಮಿಲಿಟರಿ ಸಂಘರ್ಷ ಮತ್ತು ಭೂಕಂಪದಿಂದ ಬಳಸಿರುವ ಮ್ಯಾನ್ಮಾರ್​ನಲ್ಲಿ ಶಾಂತಿ ನೆಲೆಸಲಿ. ಸಂಘರ್ಷ ಶೀಘ್ರ ಅಂತ್ಯ ಕಾಣಲಿ. ಗಾಜಾದ ಭೀಕರ ಸಂಘರ್ಷವು ಸಾವು ಮತ್ತು ವಿನಾಶಕ್ಕೆ ಕಾರಣವಾಗುತ್ತಿದೆ. ಅಲ್ಲಿ ಕದನ ವಿರಾಮವಾಗಲಿ.

ಪೋಪ್ ಫ್ರಾನ್ಸಿಸ್ ಆಳವಾದ ದೈವಭಕ್ತಿಯನ್ನು ಹೊಂದಿದ್ದರು. ಅವರು ಸಂಪ್ರದಾಯವಾದಿಯಾಗಿದ್ದರೂ ವಿಭಿನ್ನ ನಿಲುವನ್ನು ಹೊಂದಿದ್ದರು. ಸುಧಾರಣೆಗಳಿಗೆ ಒತ್ತು ನೀಡುವುದರೊಂದಿಗೆ, ಅಂತರ್​ಧರ್ವಿುಯ ಸೌಹಾರ್ದ ಸಂವಾದಗಳಲ್ಲಿ ಆಸಕ್ತಿ ಹೊಂದಿದ್ದರು. ಅವರ ಪರಿಸರ ಕಾಳಜಿ ಮತ್ತು ಮಾನವ ಕಳ್ಳಸಾಗಾಣಿಕೆಯ ವಿರುದ್ಧದ ಪ್ರಯತ್ನಗಳು ಗಮನಾರ್ಹ. | ಶ್ರೀ ಶ್ರೀ ರವಿಶಂಕರ ಗುರೂಜಿ, ಆಧ್ಯಾತ್ಮಿಕ ನಾಯಕರು https://www.vijayavani.net/10-g-of-gold-price-in-past-years

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net