ಜಾಲಿ ತೀರಕ್ಕೆ ತೇಲಿಬಂದ ಬೃಹತ್ ಕಂಟೇನರ್!

container Drifted to Jali Seashore
Published on

ಭಟ್ಕಳ: ಕಂಟೈನರ್ ಹಡಗಿನ ಭಾರೀ ಗಾತ್ರದ ಭಾಗವೊಂದು ಭಟ್ಕಳ ಜಾಲಿ ಕಡಲ ಕಿನಾರೆಯಲ್ಲಿ ಮಂಗಳವಾರ ನಸುಕಿನ ಜಾವ ಕಂಡುಬಂದಿದೆ. ಸುಮಾರು 70 ಮೀಟರ್ ಉದ್ದದ ಈ ಭಾಗದ ಮೇಲೆ ಕೊಚ್ಚಿನ್ ಶಿಪ್​ಯಾರ್ಡ್ ಎಂದು ಬರೆದಿರುವುದು ಕಂಡುಬಂದಿದೆ.

ಕರಾವಳಿ ಕಾವಲು ಪಡೆಯ ಅಧಿಕಾರಿಗಳ ಪ್ರಕಾರ, ಪ್ರಾಥಮಿಕ ತನಿಖೆಯಲ್ಲಿ ಕಂಟೈನರ್ ಕೊಚ್ಚಿನ್ ಶಿಪ್​ಯಾರ್ಡ್​ಗೆ ಸಂಬಂಧಿಸಿದ್ದು ಎಂದು ದೃಢಪಟ್ಟಿದೆ. ಭಾರೀ ಗಾಳಿಯಿಂದಾಗಿ ಹಡಗಿನ ಆಂಕರ್ ಕಳಚಿಕೊಂಡು ಕಡಲತೀರಕ್ಕೆ ತೇಲಿಬಂದಿರುವ ಸಾಧ್ಯತೆಯಿದೆ. ಆದರೆ, ನಿಖರವಾದ ಕಾರಣವನ್ನು ತಿಳಿಯಲು ಮತ್ತಷ್ಟು ತನಿಖೆ ನಡೆಸಬೇಕಿದೆ ಎಂದು ಕರಾವಳಿ ಕಾವಲು ಪಡೆಯ ಅಧಿಕಾರಿಗಳು ತಿಳಿಸಿದ್ದಾರೆ.

ಕಂಟೈನರ್ ಒಳಗೆ ಏನಾದರೂ ಸರಕು ಇದೆಯೇ ಎಂಬ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಆದರೆ, ಇದು ಕಡಲತೀರದ ಸುರಕ್ಷತೆ ಮತ್ತು ಪರಿಸರಕ್ಕೆ ಯಾವುದೇ ತೊಂದರೆ ಉಂಟುಮಾಡದಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ. ಕೊಚ್ಚಿನ್ ಶಿಪ್​ಯಾರ್ಡ್​ನಿಂದ ತಂಡವೊಂದು ಶೀಘ್ರವೇ ಸ್ಥಳಕ್ಕೆ ಆಗಮಿಸಿ ಕಂಟೈನರ್​ನ ತಪಾಸಣೆ ಮತ್ತು ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಲಿದೆ ಎನ್ನಲಾಗಿದೆ.

ಕಂಟೈನರ್ ತೇಲಿ ಬಂದು ನಿಂತಿದ್ದನ್ನು ನೋಡಲು ನೂರಾರು ಜನರು ಜಾಲಿ ಕೋಡಿ ಸಮುದ್ರ ತೀರಕ್ಕೆ ಬರುತ್ತಿದ್ದಾರೆ. ಕರಾವಳಿ ಕಾವಲು ಪಡೆಯ ಪೊಲೀಸರು ಕೂಡಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕರಾವಳಿ ಕಾವಲು ಪಡೆಯು ಸಿಬ್ಬಂದಿಯನ್ನು ಸ್ಥಳದಲ್ಲಿ ನೀಯೋಜಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net