ಸಿರಿಗೆರೆ ಗ್ರಾಮದೊಳಗೆ ಆನೆಗಳ ಹಿಂಡು

anr elephant (1)
ಸಿರಿಗೆರೆ ಗ್ರಾಮದಲ್ಲಿ ಆನೆಗಳ ದಾಳಿಯಿಂದ ನೆಲಕಚ್ಚಿರುವ ಅಡಕೆ ಮರಗಳು.
Published on

ಆಯನೂರು: ಇದುವರೆಗೆ ಗದ್ದೆ, ತೋಟಗಳಿಗೆ ನುಗ್ಗಿ ಹಾನಿಮಾಡುತ್ತಿದ್ದ ಕಾಡಾನೆಗಳು ಇದೀಗ ಜನವಸತಿ ಪ್ರದೇಶಗಳತ್ತ ಮುಖಮಾಡಿವೆ. ಭಾನುವಾರ ಮುಂಜಾನೆ 6.30ಕ್ಕೆ ಸಿರಿಗೆರೆ ಗ್ರಾಮದೊಳಗೆ ನುಗ್ಗಿದ 5 ಆನೆಗಳ ಹಿಂಡು ಭಯ ಸೃಷ್ಟಿಸಿದೆ.

ನಾಲ್ಕು ದೊಡ್ಡ ಹಾಗೂ ಒಂದು ಮರಿ ಆನೆ ಊರಿನೊಳಗೆ ಕಾಣಿಸಿಕೊಂಡಿವೆ. ಮೊದಲು ಚಂದ್ರಮ್ಮ ಎಂಬುವರ ಮನೆ ಮೇಲೆ ದಾಳಿ ನಡೆಸಿವೆ. ಮನೆ ಮಂದಿ ನಿದ್ದೆಯಲ್ಲಿದ್ದಾಗ ಕಾಡಾನೆಗಳು ಸೊಂಡಿಲಿನಿಂದ ಮನೆಯ ಹೆಂಚುಗಳನ್ನು ಬೀಳಿಸಿವೆ. ಹೊರಬಂದು ಆನೆ ಹಿಂಡನ್ನು ಕಂಡು ಬೆಚ್ಚಿಬಿದ್ದಿದ್ದಾರೆ. ಚಂದ್ರಮ್ಮ ಅವರ ಮನೆಯ ಗೋಡೆ, ಹೆಂಚುಗಳು, ಮನೆಯ ಹಿಂಭಾಗ ಹಾಕಿದ್ದ ಟಾರ್ಪಲ್ಗಳನ್ನು ನಾಶಪಡಿಸಿವೆ.

ಸಣ್ಣಪ್ಪ ಅವರ ಮನೆ ಹಿಂಭಾಗಕ್ಕೆ ನುಗ್ಗಿದ ಆನೆಗಳು ಬಾಳೆ ಗಿಡಗಳು, ಫಲಕ್ಕೆ ಬಂದಿದ್ದ ಅಡಕೆ ಮರಗಳು, ಕಲ್ಲುಕಂಬಗಳನ್ನು ಮುರಿದು ಹಾಕಿವೆ. ಈ ಸಂದರ್ಭದಲ್ಲಿ ಸಣ್ಣಪ್ಪ ಅವರ ಮಗ ಅಜೇಯ ಮನೆ ಹಿಂಭಾಗದಲ್ಲಿ ಹೂ ಕೀಳುತ್ತಿದ್ದ. ಆದರೆ ಅದೃಷ್ಟವಶಾತ್ ಬಚಾವಾಗಿದ್ದಾನೆ.

ಅಷ್ಟರಲ್ಲಾಗಲೇ ವಿಷಯ ಹರಡಿ ಗ್ರಾಮಸ್ಥರೆಲ್ಲ ಸೇರಿ ಕೂಗಿ ತಮಟೆ ಬಾರಿಸಿ ಆನೆಗಳನ್ನು ಓಡಿಸಿ ವಿಷಯವನ್ನು ಅರಣ್ಯಾಧಿಕಾರಿಗಳ ಗಮನಕ್ಕೆ ತಂದಿದ್ದಾರೆ.

30 ವರ್ಷಗಳ ಹಿಂದೆ ಸಿರಿಗೆರೆ ಗ್ರಾಮದೊಳಗೆ ಕಾಡಾನೆಗಳು ಬಂದಿದ್ದವು. ಭತ್ತ, ರಾಗಿ ಇತರೆ ವಸ್ತುಗಳನ್ನು ತಿಂದು ನಾಶಪಡಿಸಿದ್ದವು. ಅಲ್ಲಿಂದ ಈವರೆಗೆ ಊರೊಳಗೆ ಕಾಡಾನೆಗಳು ಬಂದಿರಲಿಲ್ಲ ಎಂದು ಸಿರಿಗೆರೆ ಗ್ರಾಮದ ರೈತ ಶಂಕ್ರಪ್ಪ ತಿಳಿಸಿದರು. ಇದುವರೆಗೂ ಊರ ಹೊರಗೆ ಇರುತ್ತಿದ್ದ ಕಾಡಾನೆಗಳು ಈಗ ಊರೊಳಗೆ ಪ್ರತ್ಯಕ್ಷವಾಗಿ ಜನರ ಜೀವಕ್ಕೆ ರಕ್ಷಣೆ ಇಲ್ಲದಂತಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net